ಮಡಿಕೇರಿ ಆ.31 :ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿ ಪೀಡಿತ ಪ್ರದೇಶಗಳನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಕೃತಿ ವಿಕೋಪ ಅಧ್ಯಯನ ತಂಡವು ತಾ.1 ರಿಂದ (ಇಂದಿನಿಂದ) 8ರವರೆಗೆ ಪರಿಶೀಲಿಸಲಿದ್ದು, ಕೆಪಿಸಿಸಿಯ ಪ್ರಕೃತಿ ವಿಕೋಪ ಪರಿಹಾರ ಸಮಿತಿಗೆ ವರದಿಯನ್ನು ನೀಡಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಅಧ್ಯಯನ ತಂಡವನ್ನು ರಚಿಸಲಾಗಿದ್ದು, ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟವನ್ನು ಅಂದಾಜಿಸಲಿದೆ ಎಂದರು. ಜೀವಹಾನಿ, ಕುಸಿದ ಮನೆ, ಕೃಷಿ ಭೂಮಿ, ತೋಟ, ಜಾನುವಾರು ಜೀವಹಾನಿ ಸೇರಿದಂತೆ ಕಷ್ಟ, ನಷ್ಟಗಳ ನೈಜ ಸ್ಥಿತಿಯ ವರದಿಯನ್ನು ಕೆಪಿಸಿಸಿಗೆ ನೀಡಲಾಗುವದೆಂದರು.
ತಾ. 1 ರಂದು ಮದೆನಾಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು, ಸೆ.2 ರಂದು ಗಾಳಿಬೀಡು, ಸೆ.4 ರಂದು ಮಕ್ಕಂದೂರು, ಕಳಕೇರಿ ನಿಡುಗಣೆ, ತಾ. 5 ರಂದು ಮಾದಾಪುರ ಗರ್ವಾಲೆ, ತಾ. 6 ರಂದು ಸಿದ್ದಾಪುರ , ನೆಲ್ಯಹುದಿಕೇರಿ, ಕುಶಾಲನಗರ ಹೋಬಳಿ, ತಾ. 7 ರಂದು ಶಾಂತಳ್ಳಿ ಹೋಬಳಿ, ಸೆ.8 ರಂದು ಮೇಕೇರಿ, ಮಡಿಕೇರಿ ವ್ಯಾಪ್ತಿಯಲ್ಲಿ ಅಧ್ಯಯನ ತಂಡ ಸಂಚರಿಸಲಿದೆ. ಹೀಗೆ ಒಟ್ಟು 7 ದಿನಗಳ ಕಾಲ ಸಂಚರಿಸಿದ ಸಮೀಕ್ಷೆಯ ವರದಿಯನ್ನು ಕೆಪಿಸಿಸಿಯ ಪರಿಹಾರ ಸಮಿತಿಗೆ ನೀಡಲಾಗುವದೆಂದು ಟಿ.ಪಿ. ರಮೇಶ್ ಮಾಹಿತಿ ನೀಡಿದರು.
ಅಧ್ಯಯನ ತಂಡದಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು, ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪ್ರಮುಖರು, ಸದಸ್ಯರು, ಮಾಜಿ ಸಚಿವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರು ಇರುತ್ತಾರೆ. ತಂಡವು ಪ್ರಮುಖವಾಗಿ ಸಾರ್ವಜನಿಕ ಆಸ್ತಿ ಹಾನಿ, ಗ್ರಾಮೀಣ ಮತ್ತು ಜಿಲ್ಲಾ ರಸ್ತೆ ಹಾಗೂ ಸೇತುವೆಗಳ ಹಾನಿಯ ಸಮೀಕ್ಷೆ, ಗ್ರಾಮೀಣ ಶಾಲಾ ಕಟ್ಟಡಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ.
ಅತಿವೃಷ್ಟಿಯಿಂದಾಗಿ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು, ಭತ್ತ, ಅಡಿಕೆ, ತೆಂಗು ನಾಶವಾಗಿದೆ. ಈ ಬಗ್ಗೆ ಸಂತ್ರಸ್ತರೊಂದಿಗೆ ನೇರವಾಗಿ ಸಮಾಲೋಚಿಸಿ ವರದಿ ತಯಾರಿಸಲಾಗುವದು. ಅಲ್ಲದೆ ಸಾರ್ವಜನಿಕರಿಂದ ದುರಸ್ತಿ ಕಾರ್ಯದ ಬಗ್ಗೆ ಸಲಹೆಯನ್ನು ಪಡೆಯ ಲಾಗುವದು. ಪರಿಹಾರ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕೆನ್ನುವ ಉದ್ದೇಶ ಜಿಲ್ಲಾ ಕಾಂಗ್ರೆಸ್ನದಾಗಿದ್ದು, ಅಧ್ಯಯನ ತಂಡದ ಸಂಚಾಲಕರನ್ನಾಗಿ ಬೇಕಲ್ ರಮಾನಾಥ್ ಅವರನ್ನು ಆಯ್ಕೆ ಮಾಡಿರುವದಾಗಿ ರಮೇಶ್ ಇದೇ ಸಂದರ್ಭ ತಿಳಿಸಿದರು.
ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವದಲ್ಲದೆ, ಸಂಕಷ್ಟದಲ್ಲಿರುವ ಬದುಕು ಮುಂದೆ ಹೇಗೆ ಎನ್ನುವ ಬಗ್ಗೆಯೂ ತಂಡ ಚಿಂತನೆ ನಡೆಸಲಿದೆ. ಪ್ರಕೃತಿ ವಿಕೋಪದ ಸಂದರ್ಭ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಜನ ಪ್ರತಿನಿಧಿಗಳು, ಎಲ್ಲಾ ಹಿರಿಯ ಅಧಿಕಾರಿಗಳು, ಸಂಘ ಸಂಸ್ಥೆಗಳು, ಸೇನೆ ಮತ್ತು ಪೊಲೀಸರ ಸೇವಾ ಮನೋಭಾವದ ಕಾರ್ಯ ಶ್ಲಾಘನೀಯವೆಂದು ಟಿ.ಪಿ.ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ಮಂಜುನಾಥ್ ಕುಮಾರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್, ಮಡಿಕೆÉೀರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್ ಉಪಸ್ಥಿತರಿದ್ದರು.