ಮಡಿಕೇರಿ, ಆ. 31: ಪ್ರಸಕ್ತ ಸಾಲಿನಲ್ಲಿ ಕಂಡುಬಂದಿರುವ ಪ್ರಾಕೃತಿಕ ವಿಕೋಪದ ಭೀತಿಯಿಂದ ಜಿಲ್ಲೆ ಇನ್ನೂ ಚೇತರಿಸಿಕೊಂಡಿಲ್ಲ. ಮಳೆಯ ತೀವ್ರತೆ ತುಸು ಇಳಿಮುಖವಾಗಿದ್ದರೂ, ಈಗಾಗಲೇ ಸಂಭವಿಸಿರುವ ಆಸ್ತಿ-ಪಾಸ್ತಿ ಹಾನಿ ಜನ-ಜಾನುವಾರುಗಳ ಪ್ರಾಣಹಾನಿ ಪ್ರಕರಣಗಳು ಕೂಡ ಮುಂದುವರಿಯುತ್ತಲೆ ಇದೆ. ಭೂಕುಸಿತ, ಬೆಟ್ಟ-ರಸ್ತೆ ಕುಸಿತದಂತಹ ಪ್ರಕರಣಗಳು ಮೇಗಸ್ಪೋಟ - ಜಲಸ್ಪೋಟದಿಂದಾಗಿ ಜನತೆ ಎದುರಿಸುತ್ತಿರುವ ಭಯಾನಕತೆಯ ಸನ್ನಿವೇಶಗಳು ಮರೆಯಾಗಿಲ್ಲ. ಹಲವು ಸಮಯಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವಾರು ಕಡೆಗಳಲ್ಲಿ ಸೂರ್ಯ ಕಿರಣಗಳು ಇನ್ನೂ ಗೋಚರಿಸಿಲ್ಲ. ಎಲ್ಲಾ ರೀತಿಯಲ್ಲೂ ಜಿಲ್ಲೆ ಈ ಬಾರಿಯ ಮಳೆ - ಗಾಳಿಗೆ ನಲುಗಿದೆ ಮತ್ತಷ್ಟು ನಲುಗುತ್ತಿದೆ.
ಇಂತಹ ಸಂದರ್ಭದಲ್ಲಿ ಇಂದು ಸಂಜೆ 5ರ ಸುಮಾರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಗಸದಲ್ಲಿ ಗುಡುಗಿನ ಶಬ್ಧ ಕೇಳಿ ಬಂದಿದ್ದು, ಇದು ಹೆದರಿದವರ ಮೇಲೆ ಮತ್ತೊಂದು ಪ್ರಹಾರ ನೀಡಿದಂತಾಗಿದೆ. ಅಪರಾಹ್ನ ಎರಡು ಗಂಟೆಯ ವೇಳೆಗೆ ಕೆಲಹೊತ್ತು ಬಿಸಿಲಿನ ಗೋಚರವಾದರೂ ನಂತರ ಚಳಿಯೊಂದಿಗೆ ಮತ್ತೆ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಯಿತು.
ಇದರ ಬೆನ್ನಲ್ಲೇ ಸಂಜೆ ಕೇಳಿ ಬಂದ ಗುಡುಗಿನ ಶಬ್ದ ಜನತೆಯನ್ನು ಮತ್ತೆ ಬೆಚ್ಚಿ ಬೀಳಿಸಿದ್ದು, ಇನ್ನು ಯಾವ ರೀತಿಯ ಆತಂಕ ಎದುರಾಗಲಿದೆಯೋ ಎಂಬಂತೆ ಮಾಡಿತ್ತು. ಆಗಸ್ಟ್ ತಿಂಗಳು ಪೂರ್ಣಗೊಂಡರೂ ಇನ್ನೂ ಬದಲಾಗದ ಮಳೆಗಾಲದ ಚಿತ್ರಣ, ಇದರೊಂದಿಗೆ ಕೆಲವೆಡೆಗಳಲ್ಲಿ ಭೂಮಿಯೊಳಗೂ ಕೇಳಿ ಬರುತ್ತಿರುವ ಶಬ್ದ - ಸಂಚಲನ ಮತ್ತಷ್ಟು ಪ್ರಶ್ನಾರ್ಹವಾಗಿಸುತ್ತಿದೆ.