ಮಡಿಕೇರಿ, ಆ. 31: ದಾನಿಗಳಿಂದ ಸಂಗ್ರಹಿಸಿ ನಿರಾಶ್ರಿತರಿಗೆ ವಿತರಿಸಲು ಇಟ್ಟಿದ್ದ ಬಟ್ಟೆಗಳನ್ನು ಜಿಲ್ಲಾಡಳಿತ ಇಂದಿರಾನಗರದ ಮುಖ್ಯ ರಸ್ತೆಯಲ್ಲಿ ಸುರಿದಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಈ ಸಂಬಂಧ ಜಿಲ್ಲಾಡಳಿತ ಪರಿಶೀಲಿಸಿ ಇಂದಿರಾ ನಗರದ ನಿವಾಸಿ ರಾಜು ಮತ್ತು ಇತರ ಇಪ್ಪತ್ತು ಜನರು ತಮಗೆ ಬಟ್ಟೆ ಅವಶ್ಯಕತೆ ಇದ್ದು, ಬಟ್ಟೆ ನೀಡುವಂತೆ ವಿನಂತಿಸಿದ್ದರು, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದಲ್ಲಿರುವ ಪರಿಹಾರ ಸಾಮಗ್ರಿಗಳ ದಾಸ್ತಾನು ಕೇಂದ್ರದಿಂದ 5 ಬಂಡಲ್ ಹಳೆ ಬಟ್ಟೆಗಳನ್ನು ಪಡೆದುಕೊಂಡು ಸಿಟಿಎಂ 4505 ಸಂಖ್ಯೆಯ ವಾಹನದಲ್ಲಿ ಹೋಗಿರುವದಾಗಿ ದಾಸ್ತಾನು ಕೇಂದ್ರದ ನೋಡಲ್ ಅಧಿಕಾರಿ ತಿಳಿಸಿದ್ದಾರೆ.

ಬಟ್ಟೆಯ ಅವಶ್ಯಕತೆ ಇದೆ ಎಂದು ವಿನಂತಿಸಿ ಪಡೆದುಕೊಂಡು ಉಪಯೋಗಿಸದೆ ಬೀಸಾಡುವದರ ಮೂಲಕ ಜಿಲ್ಲಾಡಳಿತಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ನಿಯಮಾನುಸಾರ ಸೂಕ್ತ ಕಾನೂನು ಕ್ರಮವಹಿಸಲು ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಪತ್ರ ಬರೆದಿದ್ದಾರೆ.