ಮಡಿಕೇರಿ, ಆ.31: ಆಗಸ್ಟ್ ತಿಂಗಳಲ್ಲಿ ಪ್ರಕೃತಿಯ ವಿಕೋಪಕ್ಕೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆ ನಷ್ಟ ಉಂಟಾಗಿದೆ. ಕೊಡಗಿನ ಬೆಟ್ಟ ಗುಡ್ಡಗಳ ನಾಡಿನಲ್ಲಿ ಉತ್ತು ಅಗೆದು, ಬೆಳೆದು, ಉತ್ಪಾದನೆ ಮಾಡಿರುವದು ಹೆಮ್ಮೆಯ ಸಂಗತಿ. ಅಂತ ಬೆಳೆ ಇಂದು ಸರ್ವನಾಶವಾಗಿರುವದು ಆತಂಕ ಪಡುವಂತ ವಿಚಾರ.
ಸಾಮಾನ್ಯವಾಗಿ ಮಳೆ ಹೆಚ್ಚಾದರೆ ಯಾವದೇ ಬೆಳೆಗಳಿಗೆ ಬರುವದೇ ಕೊಳೆ ರೋಗ. ಶುಂಠಿ, ಕಾಳು ಮೆಣಸು, ಬಾಳೆ, ಅಡಿಕೆ, ಇಂತಹ ಬೆಳೆಗಳು ಶೀಘ್ರವಾಗಿ ಕೊಳೆರೋಗಕ್ಕೆ ತುತ್ತಾಗುತ್ತದೆ. ಆದ್ದರಿಂದ ಯಾವದೇ ಕಾರಣದಿಂದ ಜಮೀನಿನಲ್ಲಿ ನೀರು ನಿಲ್ಲದೆ ಹಾಗೆ ನೋಡಿಕೊಳ್ಳುವದು ಅತಿ ಮುಖ್ಯ. ಎರಡನೆಯದಾಗಿ ಕೊಳೆತ, ಒಣಗಿದ ಎಲೆ, ಕಾಂಡ ಬಳ್ಳಿ ಕಾಯಿಯನ್ನು ಗಿಡದಿಂದ ಬೇರ್ಪಡಿಸಿ ನಾಶಪಡಿಸಿ ಗಿಡದ ಸ್ವಚ್ಛತೆ ಕಾಪಾಡುವದು.
ಕಾಳು ಮೆಣಸು: ಕೊಳೆ ರೋಗ ತಡೆಗಟ್ಟಲು ಮೆಟಲಾಕ್ಸಿಲ್ ಒಂದು ಗ್ರಾಂನ್ನು 1 ಲೀಟರ್ ನೀರಿನಲ್ಲಿ ಅಥವಾ ಪೆÇಟ್ಯಾಶಿಯಂ ಪಾಸ್ಪೋನೆಟ್ ಅನ್ನು 5 ಮಿಲಿ 1 ಲೀಟರ್ ನೀರಿನಲ್ಲಿ ಅಥವಾ ಮೆಟಾಲಾಕ್ಸಿಲ್ ಹಾಗೂ ಮ್ಯಾಂಕೋಜೆಬ್ ಮಿಶ್ರಣ ಔಷಧಿಯನ್ನು 3 ಮಿಲಿ ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬಹುದು. ಇದರೊಂದಿಗೆ ಕ್ಯಾಲ್ಸಿಯಂ ನೈಟ್ರೇಟ್ ಒಂದು ಕೆಜಿ 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆಗೆ ಬಳಸಬಹುದು.
ತಾಳೆ: ಕೆಲವು ಕಡೆಯಿಂದ ನೀರು ನಿಂತ ಪರಿಣಾಮವಾಗಿ ತಾಳೆ ಗೊನೆಗಳು ಕೊಳೆಯುತ್ತಿದೆ ಎಂಬ ಮಾಹಿತಿ ಬರುತ್ತಿದ್ದು ಆತಂಕಪಡುವ ಅಗತ್ಯವಿಲ್ಲ. ತಾಳೆಗೊನೆ ಹೆಚ್ಚಾಗಿ ಕೊಳೆರೋಗಕ್ಕೆ ತುತ್ತಾಗುವದಿಲ್ಲ. ನೀರು ನಿಂತಿರುವದರಿಂದ ಬಂದಿರುವ ಅಲ್ಪ ಅವಧಿಯ ತೊಂದರೆ ಪರಿಹಾರ ಕ್ರಮವಾಗಿ ಕೊಳೆತ ಗೊಂಚಲುಗಳನ್ನು ತೆಗೆದು ಗಿಡವನ್ನು ಶುಚಿಗೊಳಿಸಿ ಗೊಬ್ಬರ ಕೊಡುವಾಗ ಪೆÇಟ್ಯಾಶ್ ಅಂಶ ಜಾಸ್ತಿ ಇರುವ ಹಾಗೆ ಕೊಡುವದು.
ಬಾಳೆ: ಇಲ್ಲಿಯೂ ಕೂಡ ಶಿಲೀಂದ್ರದಿಂದ ಬರುವ ರೋಗವಾದ ಪನಾಮಾ ಸೊರಗು ರೋಗ ಕಂಡುಬರುವ ಲಕ್ಷಣ ವಿರುವದರಿಂದ ರೋಗ ಬಂದ ಎಲೆಗಳನ್ನು ತೆಗೆದು ನಾಶ ಮಾಡಬೇಕು. ನಂತರ ಬೆವೆಸ್ಟೀನ್ 2 ಗ್ರಾಂ 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡುವದು.
ಅಡಿಕೆ: ಕೊಳೆ ರೋಗ ಬರುವದರಿಂದ ಹರಳು ಉದುರುವದು ಹಾಗೂ ಕಾಯಿ ಉದುರುವದು ಸಂಭವಿಸಬಹುದು. ಇಲ್ಲಿಯೂ ಶಿಲೀಂಧ್ರ ನಾಶಕದಿಂದ ನಿಯಂತ್ರಣ ಸಾಧ್ಯ. ಹಲವಾರು ಉತ್ತಮ ಶಿಲೀಂಧ್ರ ನಾಶಕಗಳು ಲಭ್ಯವಿದ್ದು ಅವುಗಳನ್ನು ಬಳಸ ಬಹುದು. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಮ್ಯಾಂಕೋಜೆಬ್ ಹಾಗೂ ಕಾಪರ್ ಸಲ್ಫೇಟ್ ಮಿಶ್ರಣದ ಶಿಲೀಂಧ್ರನಾಶಕ ವನ್ನು 5 ಗ್ರಾಂ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬಹುದು. ಹೆಚ್ಚಿನ ವಿವರಗಳಿಗೆ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರು 9448401087 ಅವರನ್ನು ಸಂಪರ್ಕಿಸಬಹುದಾಗಿದೆ.