ಮಡಿಕೇರಿ, ಆ. 31: ಒಂದೆರೆಡು ವರ್ಷಗಳ ಹಿಂದೆಯಷ್ಟೇ ಮೈದಾನದಲ್ಲಿ ಓಡಾಡುತ್ತಾ ಭಾರತ ದೇಶಕ್ಕೆ ಥ್ರೋಬಾಲ್ ಕ್ರೀಡೆಯಲ್ಲಿ ಪದಕವನ್ನು ತಂದಿದ್ದ ಆಟಗಾರ್ತಿ ಯೊಬ್ಬರು ಇದೀಗ ಪ್ರಕೃತಿಯ ಬರಸಿಡಿಲಿಗೆ ತತ್ತರಿಸುವಂತಾಗಿದ್ದು, ನಾಲ್ಕು ಗೋಡೆಗಳ ನಡುವೆ ಪರಿಹಾರ ಕೇಂದ್ರದಲ್ಲಿ ಅತಂತ್ರತೆ ಯಿಂದ ಪೋಷಕರೊಂದಿಗಿರುವ ವ್ಯಥೆಯ ಕಥೆಯಿದು.ಈಕೆ ತಷ್ಮಾ ಮುತ್ತಪ್ಪ... 2ನೇ ಮೊಣ್ಣಂಗೇರಿಯ ಬಡ ಕುಟುಂಬಕ್ಕೆ ಸೇರಿದವಳು. ಪ್ರಾಥಮಿಕ ವಿದ್ಯಾಭ್ಯಾಸ ಸಂದರ್ಭದಿಂದಲೇ ಕ್ರೀಡೆಯ ಬಗ್ಗೆ ಒಲವು. ಮಡಿಕೇರಿಯಲ್ಲಿ ಪ್ರಾಥಮಿಕ, ಮದೆ ಪ್ರೌಢಶಾಲೆ, ಸುಳ್ಯದಲ್ಲಿ ಪಿಯುಸಿಯೊಂದಿಗೆ ಆಳ್ವಾಸ್ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ್ದಾಳೆ. ಈ ಸಂದರ್ಭದಲ್ಲಿ ಇತರ ಕ್ರೀಡೆಗಳನ್ನು ಬಿಟ್ಟು ಥ್ರೋಬಾಲ್‍ನತ್ತ ಆಸಕ್ತಿ ತೋರಿದ ತಷ್ಮಾ, ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರಮಟ್ಟದಲ್ಲೂ ಭಾರತವನ್ನು ಪ್ರತಿನಿಧಿಸಿದ್ದಾಳೆ.
2014ರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಹರ್ಯಾಣ, ಚೆನ್ನೈಯಲ್ಲಿ ಆಟವಾಡಿದ್ದಾಳೆ. ತನ್ನ ಸಾಧನೆಯ ಮೂಲಕ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಯ್ಕೆಯಾಗಿ ಸೀನಿಯರ್ ತಂಡದಲ್ಲಿ ಮಲೇಷಿಯಾ, ಶ್ರೀಲಂಕಾ ಮತ್ತಿತರ ರಾಷ್ಟ್ರಗಳ ವಿರುದ್ಧ ಆಟವಾಡಿದ್ದಾಳೆ. ಬೆಂಗಳೂರಿನಲ್ಲಿ ಜರುಗಿದ ಅಂತರ್ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ವಿಜೇತವಾದ ಭಾರತ ತಂಡದಲ್ಲಿ ಈಕೆಯೂ ಓರ್ವ ಆಟಗಾರ್ತಿಯಾಗಿದ್ದಳು.
ಆದರೆ, ನಂತರ ಬದುಕಿನ ಪಯಣದಲ್ಲಿ ಕ್ರೀಡೆಯನ್ನು ಬಿಟ್ಟು ಕ್ಲಬ್ ಮಹೀಂದ್ರಾದಲ್ಲಿ ಕೆಲಸಕ್ಕೆ ಸೇರಿ ಕೊಂಡಳು. ಬಳಿಕ ಇದೀಗ ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಡಾಟಾ ಆಪರೇಟರ್ ಆಗಿ ಕೆಲಸಕ್ಕೆ ಸೇರಿದ್ದಾಳೆ. ತಂದೆ ಮುತ್ತಪ್ಪ ಹಾಗೂ ತಾಯಿ ಗಿರಿಜಾ ಹೋಂಸ್ಟೇಯಲ್ಲಿ ಕೆಲಸ ಮಾಡುತಿ ್ತದ್ದರೆ, ಸಹೋದರ ನೊಬ್ಬ ಎರಡು ತಿಂಗಳ ಹಿಂದೆ ಸಾವಿಗೆ ಶರಣಾಗುವ ದರೊಂದಿಗೆ
(ಮೊದಲ ಪುಟದಿಂದ) ಕುಟುಂಬ ನಿರ್ವಹಣೆ ಇವರದ್ದೇ ಆಗಿದೆ.
ಆದರೆ, ಈಗ ನಡೆದ ಪ್ರಾಕೃತಿಕ ದುರಂತ ಈ ಕುಟುಂಬದ ನೆಮ್ಮದಿಯನ್ನು ಘಾಸಿಗೊಳಿಸಿದೆ. ಇದ್ದ ಮನೆಯನ್ನೂ ಈ ಕುಟುಂಬ ಕಳೆದುಕೊಂಡಿದೆ. ಈ ಕಾರಣದಿಂದ ದೇಶಕ್ಕೆ ಪದಕ ತಂದಿದ್ದ ಆಟಗಾರ್ತಿ ಇದೀಗ ಆಸರೆಗಾಗಿ ಪರಿತಪಿಸುತ್ತಾ ಪರಿಹಾರ ಕೇಂದ್ರಕ್ಕೆ ಸೇರುವಂತಾಗಿದೆ. ಈ ದುರಂತದ ಬಗ್ಗೆ ತಷ್ಮಾ ‘ಶಕ್ತಿ’ಯೊಂದಿಗೆ ನೋವು ವ್ಯಕ್ತಪಡಿಸಿದ್ದು ಹೀಗೆ...
ಆಗಸ್ಟ್ 17ರ ಬೆಳಿಗ್ಗೆ 10 ಗಂಟೆಯ ಸಮಯ... ಸನಿಹದ ಬೆಟ್ಟ ಜರಿಯತೊಡಗಿತ್ತು. ಸೀನ ಎಂಬವರು ಬಂದು ಅಪಾಯದ ಬಗ್ಗೆ ತಿಳಿಸಿ ಎಲ್ಲರೂ ಜಾಗ ಖಾಲಿ ಮಾಡಬೇಕಿದೆ ಎಂದರು. ಮಣ್ಣು ಜರಿದು ರಸ್ತೆ ಬಂದ್ ಆಗಿತ್ತು. ಮೊಬೈಲ್ ಕೂಡ ಸಿಗುತ್ತಿರಲಿಲ್ಲ. ತಮ್ಮ ಕುಟುಂಬವೂ ಸೇರಿ 60 ಜನರಿದ್ದೆವು. ಬೆಟ್ಟ ಏರತೊಡಗಿದಾಗ ಅಲ್ಲಿಯೂ ಜೋರಾಗಿ ಶಬ್ಧ ಕೇಳಿ ಬಂದಿತ್ತು. ನೆಲ ಅಲ್ಲಲ್ಲಿ ಬಿರುಕು ಬಿಡುತ್ತಾ ನಡು ನಡುವೆ ದಾರಿಯೂ ಇಲ್ಲದಾಗುತ್ತಿತ್ತು. ಹೆದರಿಕೆಯೊಂದಿಗೆ ನಡೆಯುತ್ತಾ ಮದೆನಾಡು... ಬೆಳಕುಮಾನಿ ಮಾರ್ಗವಾಗಿ ಸಾಗಿ ರಾತ್ರಿ 9 ಗಂಟೆ ವೇಳೆಗೆ ಚೇರಂಬಾಣೆಯ ಪರಿಹಾರ ಕೇಂದ್ರಕ್ಕೆ ಸೇರಿಕೊಂಡ ಭಯಾನಕ ಸನ್ನಿವೇಶ ಇದಾಗಿತ್ತು’ ಎಂದು ತಷ್ಮಾ ನೆನಪಿಸಿಕೊಂಡಳು.
ಕೆಲದಿನ ಚೇರಂಬಾಣೆ ಪರಿಹಾರ ಕೇಂದ್ರದಲ್ಲಿ ಕಾಲಕಳೆದು ಇದೀಗ ಮಡಿಕೇರಿಯಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಕಟ್ಟಡದಲ್ಲಿರುವ ಪರಿಹಾರ ಕೇಂದ್ರದಲ್ಲಿ ಈ ಕುಟುಂಬ ಸೇರಿದೆ. ಸಂಕಷ್ಟದ ಈ ಸಂದರ್ಭದಲ್ಲಿ 2ನೇ ಮೊಣ್ಣಂಗೇರಿಯ ಅಗೋಳಿಕಜೆ ಧನಂಜಯ, ಪೀಪಲ್ ಫಾರ್ ಕೊಡಗು ಸಂಸ್ಥೆ ಸಹಕಾರ ನೀಡಿದೆ. ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವ ಹಾಗೂ ತರಬೇತುದಾರರು ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ತಷ್ಮಾ ತಿಳಿಸಿದಳು.
ವೀಣಾ ಅಚ್ಚಯ್ಯ ಭೇಟಿ
ಅಂತರ್ರಾಷ್ಟ್ರೀಯ ಆಟಗಾರ್ತಿ ತಷ್ಮಾಳ ಪರಿಸ್ಥಿತಿಯನ್ನು ಅರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಇದರೊಂದಿಗೆ ವೀಣಾ ಅಚ್ಚಯ್ಯ ಅವರ ಪುತ್ರ ವಿಕಾಸ್ ಅಚ್ಚಯ್ಯ ಹಾಗೂ ಸಂಗಡಿಗರು ಕೊಡಗು ಫಾರ್ ಟುಮಾರೊ ಸ್ವಯಂ ಸೇವಕರಾದ ಅಜ್ಜೇಟಿರ ವಿಕ್ರಂ ಉತ್ತಪ್ಪ, ಚಿತ್ರನಟಿ ತಾಪಂಡ ಕೃಷಿ ಅವರುಗಳ ತಂಡದ ಸ್ನೇಹಿತರು ದೇಶಕ್ಕೆ ಪದಕ ತಂದಿತ್ತ ಆಟಗಾರ್ತಿ ತಷ್ಮಾಳಿಗೆ ನೆರವಿನ ಹಸ್ತ ಚಾಚಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.
ವಿಶಾಲ್ ಅಚ್ಚಯ್ಯ ಹಾಗೂ ಸಂಗಡಿಗರು ಇವರ ಕುಟುಂಬದ ಒಂದು ವರ್ಷದ ಮನೆ ಬಾಡಿಗೆ, ಇತರ ವೆಚ್ಚ ನೀಡಲು ಮುಂದಾಗಿದ್ದಾರೆ. ಇದರೊಂದಿಗೆ....... ಸರಕಾರದಿಂದ ತನಗೆ ಒಂದು ಶಾಶ್ವತವಾದ ಕೆಲಸ ಸಿಕ್ಕಿದರೆ ಬದುಕಿ ಕೊಳ್ಳುತ್ತೇವೆ ಎಂದು ಕ್ರೀಡಾಪಟು ತಷ್ಮಾ ‘ಶಕ್ತಿ’ಯೊಂದಿಗೆ ನೋವು ತೋಡಿಕೊಂಡಳು. ತಷ್ಮಾ ಹಾಗೂ ಕುಟುಂಬ ಅನುಭವಿಸುತ್ತಿರುವ ಈ ದುರಂತ ಸನ್ನಿವೇಶಕ್ಕೆ ಮನಮಿಡಿದಿರುವ ಸಿಂಗಾಪುರದಲ್ಲಿರುವ ಕೊಡವ ಕುಟುಂಬಗಳ ಸದಸ್ಯರು ಹಾಗೂ ಅಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯವರು ನೆರವಾಗಲು ಮುಂದೆ ಬಂದಿದ್ದಾರೆ. ಈ ಕುಟುಂಬಕ್ಕೆ ಬಾಡಿಗೆಗೆ ಒಂದು ಮನೆಯನ್ನು ವ್ಯವಸ್ಥೆ ಮಾಡಿಕೊಟ್ಟು ಮುಂಗಡ ಹಣ ಹಾಗೂ ವರ್ಷದ ಬಾಡಿಗೆ ನೀಡಿ ಸಹಕರಿಸಲು ಇವರುಗಳು ಸಿದ್ಧವಾಗಿದ್ದು ಮನೆ ಅಂತಿಮಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂದು ವಿಕಾಸ್ ಅಚ್ಚಯ್ಯ ಅವರು ತಿಳಿಸಿದ್ದಾರೆ. ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುವೊಬ್ಬಳಿಗೆ ಇವರೆಲ್ಲರೂ ಸ್ಪಂದನೆÀ ನೀಡುತ್ತಿರುವುದು ಮಾದರಿಯಾಗಿದೆ. -ಶಶಿ