ಮಡಿಕೇರಿ, ಆ. 31: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯು ದಿನೇ ದಿನೇ ವಿಸ್ತಾರಗೊಳ್ಳುವದರೊಂದಿಗೆ, ಇಲ್ಲಿನ ಜನಸಂಖ್ಯೆಯೂ ಏರತೊಡಗಿದೆ. ಹೀಗಿದ್ದರೂ ಶತಮಾನಗಳ ಹಿಂದಿನ ವ್ಯವಸ್ಥೆಯೇ ಮುಂದುವರಿದಿರುವ ಪರಿಣಾಮ, ಪ್ರಸಕ್ತ ಮಳೆಗಾಲದಲ್ಲಿ ವೈರುದ್ಧ್ಯಗಳನ್ನು ಎದುರಿಸಬೇಕಾಯಿತು. ಮಡಿಕೇರಿಯ ವಿವಿಧ ಬಡಾವಣೆಗಳಿಂದ ಉಪ ಕಾಲುವೆ (ತೋಡು)ಗಳಿಂದ ನೈಸರ್ಗಿಕ ನೀರಿನೊಂದಿಗೆ ಇತರ ಕೊಳಕು ಸೇರಿ ನಗರದ ಚೇಂಬರ್ ಆಫ್ ಕಾಮರ್ಸ್ ಕಟ್ಟಡ ಬಳಿ ಸಂಗಮಗೊಂಡು ವಿನಾಯಕ ಲಾಡ್ಜ್ ಬಳಿ ಒಳ ಸುರಂಗದಿಂದ ಹೊರ ಬರುತ್ತಾ ರಾಜ್ಯ ಸಾರಿಗೆ ಬಸ್ ನಿಲ್ದಾಣ ಮುಂಭಾಗದಲ್ಲಿ ಮುಂದುವರಿಯಲಿದೆ.

ಹೀಗೆ ಮುಂದುವರಿಯುವ ರಾಜಕಾಲುವೆಯ ನೀರು ಇಲ್ಲಿನ ಕೈಗಾರಿಕಾ ಬಡಾವಣೆಯ ಬದಿಯಲ್ಲಿ ಹಾದು ಹೋಗುವದರೊಂದಿಗೆ ಎಲ್‍ಐಸಿ ಬಳಿ ಈಗಿನ ನೂತನ ಬಸ್ ನಿಲ್ದಾಣ ಬಳಿ ಇನ್ನೆರಡು ಉಪ ಕಾಲುವೆಗಳನ್ನು ಒಗ್ಗೂಡಿಸಿಕೊಂಡು ಡೈರಿ ಫಾರಂ, ಕನ್ನಿಕಾ ಬಡಾವಣೆ, ಸುಬ್ರಹ್ಮಣ್ಯ ನಗರ, ಪೊಲೀಸ್ ವಸತಿ ಗೃಹದ ಹಿಂದಿನಿಂದ ಆ ಸುತ್ತಮುತ್ತಲಿನ ಸಣ್ಣ ಪುಟ್ಟ ತೋಡುಗಳು ಸೇರಿ ಹರಿಯಲಿದೆ.

ಮುಂದೆ ಮುಳಿಯ ಬಡಾವಣೆ ಹಾಗೂ ವಿದ್ಯಾನಗರ ವ್ಯಾಪ್ತಿಗಾಗಿ ಕೂಟುಹೊಳೆ ನೀರಿನ ಸಂಗ್ರಹಾಗಾರದ ಕೆಳ ಭಾಗದಿಂದ ಅಬ್ಬಿಜಲಪಾತದಲ್ಲಿ ಧುಮ್ಮಿಕ್ಕಲಿದೆ. ಈ ನೀರು ಮುಂದೆ ಹಟ್ಟಿಹೊಳೆಗಾಗಿ ಹಾರಂಗಿ ಜಲಾಶಯದ ಒಡಲು ಸೇರಲಿದೆ. ಮುಂದೆ ಕಾವೇರಿಯಲ್ಲಿ (ಮೊದಲ ಪುಟದಿಂದ) ಲೀನಗೊಂಡು ಕೃಷ್ಣರಾಜಸಾಗರ ಸೇರಲಿದೆ.

ಅನಾಹುತ: ಒಂದೆಡೆ ಮಡಿಕೇರಿಯ ಒಂದು ಕಡೆ ಸುದರ್ಶನ ಕೆಳಭಾಗದಿಂದ ಜಯನಗರ ಹಾಗೂ ರಾಜ್ಯ ಸಾರಿಗೆ ಡಿಪೋ ಸುತ್ತಮುತ್ತಲಿನ ನೀರು ಈ ಕಾಲುವೆಗೆ ಜಲಾಶ್ರಯ ಬಡಾವಣೆ, ಬ್ರಾಹ್ಮಣರ ಬೀದಿ, ದೇಚೂರು ಮುಂತಾದೆಡೆಗಳಿಂದ ಹರಿದು ಬರಲಿದೆ. ಇನ್ನೊಂದೆಡೆ ಕನ್ನಂಡಬಾಣೆ ಗದ್ದೆ ಬಯಲಿನ ನೀರು ಸಿವಿಎಸ್ ಬಳಿ ಸೇರ್ಪಡೆಗೊಂಡರೆ, ಸೋಮವಾರಪೇಟೆ ರಸ್ತೆಯ ಪಂಪ್‍ಹೌಸ್ ಬಳಿಯಿಂದ ಹಳೆಯ ಬಸಪ್ಪ ಚಿತ್ರಮಂದಿರ ಬಳಿ ದಾಸವಾಳದಿಂದಲೂ ಹರಿದು ಬಂದು ರಾಜಕಾಲುವೆಗೆ ಸೇರಲಿದೆ.

ಕೊಹಿನೂರು ರಸ್ತೆಯಲ್ಲಿ ಹೊಟೇಲ್ ಮಳಿಗೆಗಳು, ಅಂಗಡಿ ಮಳಿಗೆಗಳು ಸೇರಿದಂತೆ ಕಟ್ಟಡಗಳು ಶಿಥಿಲಗೊಳ್ಳಲು ಬರೆ ಕುಸಿಯಲು ಕೂಡ ರಾಜ ಕಾಲುವೆಯ ಅಬ್ಬರ ಕಾರಣವಾಗಿದೆ. ಕಳೆದ ತಾ.15 ಹಾಗೂ 16 ರಂದು ಧಾರಾಕಾರ ಸುರಿದ ಮಳೆಯ ಪರಿಣಾಮ ನೀರಿನ ಹರಿಯುವಿಕೆ ತೀವ್ರಗೊಂಡ ಬೆನ್ನಲ್ಲೇ ತಾ. 6 ರ ಸಂಜೆ ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿ ಬೆಟ್ಟ ಕುಸಿದು ಮರಗಳ ಸಹಿತ ಈ ಕಾಲುವೆಯ ಹರಿಯುವಿಕೆಗೆ ತಡೆಯಾಯಿತು. ಪರಿಣಾಮ ಅರೆಕ್ಷಣ ಶಕ್ತಿ ಪತ್ರಿಕಾಲಯ ಸೇರಿದಂತೆ ಸುತ್ತಲೂ ನಾಲ್ಕು ಅಡಿಗಳಷ್ಟು ನೀರು ಒಮ್ಮೆಲೆ ಆವರಿಸಿಕೊಂಡು, ಬಡಾವಣೆಯ ರಸ್ತೆಯಲ್ಲಿ ಮೂರು ಅಡಿ ನೀರು ಹರಿಯ ತೊಡಗಿತು. ತಾ. 16 ರಂದು ಬೆಚ್ಚಿ ಬೀಳಿಸಿದ ಆ ದೃಶ್ಯ ಪ್ರತ್ಯಕ್ಷದರ್ಶಿಗಳಿಂದ ಮರೆಯುವದು ಅಸಾಧ್ಯ.

ಅಕ್ಷರಶಃ ಇಡೀ ಬಡಾವಣೆ ಜಲಾವೃತಗೊಂಡು ಸಂಜೆಗತ್ತಲೆ ನಡುವೆ, ದೈನಂದಿನ ಕೆಲಸ ಮುಗಿಸಿ ಮನೆಗಳತ್ತ ಹೆಜ್ಜೆ ಇರಿಸುತ್ತಿದ್ದ ‘ಶಕ್ತಿ’ ಹಾಗೂ ಕೈಗಾರಿಕಾ ಬಡಾವಣೆಯ ಇತರ ದುಡಿಯುವ ವರ್ಗ ಅನ್ಯಮಾರ್ಗವಿಲ್ಲದೆ ಸಿಲುಕಿಕೊಂಡು ಪರಿತಪಿಸುವಂತಾಯಿತು.

ಜಿಲ್ಲೆಯ ವಿವಿಧೆಡೆಗಳಿಂದ ಮಳೆಯ ಅವಾಂತರದ ಸುದ್ದಿಯೊಂದಿಗೆ ಮಾರನೆಯ ದಿನದ ಪತ್ರಿಕೆಯನ್ನು ಹೊರತರಲು ತಯಾರಿಯಲ್ಲಿದ್ದ ‘ಶಕ್ತಿ’ ಸಂಪಾದಕೀಯ ಬಳಗ ಪತ್ರಿಕಾಲಯದ ಮಹಿಳಾ ಉದ್ಯೋಗಿಗಳನ್ನು ಹೇಗೋ ಬಸ್ ನಿಲ್ದಾಣದತ್ತ ಕಳುಹಿಸುವಷ್ಟರಲ್ಲಿ ಸಂಜೆಗತ್ತಲೆಯೂ ಆವರಿಸಿಕೊಂಡು ಬದುಕು ಅಯೋಮಯವೆನಿಸತೊಡಗಿತು. ಈ ವೇಳೆ ಬೆಂಗಳೂರಿನಿಂದ ಆಗಮಿಸಿದ ನಾಗರಿಕ ಸುರಕ್ಷಾ ಪಡೆ ಪತ್ರಿಕಾಲಯದಲ್ಲಿ ಸಿಲುಕಿಕೊಂಡವರನ್ನು ಪಾರು ಗೊಳಿಸಿತು.

ಒಟ್ಟಾರೆ ಅಲ್ಲಲ್ಲಿ ನಿಲ್ಲಿಸಿದ್ದ ವಾಹನಗಳು ಜಲಾವೃತಗೊಂಡವು. ರಸ್ತೆಯಲ್ಲಿ ಎಲ್ಲಿಂದಲೋ ಹರಿದು ಬಂದ ಗ್ಯಾಸ್ ಸಿಲಿಂಡರ್ ಸಹಿತ ಕೊಳಕು ನೀರಿನಲ್ಲಿ ಇತರ ವಸ್ತುಗಳು ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಣ್ಣು ಕಟ್ಟುತ್ತಿತ್ತು. ಕೈಗಾರಿಕಾ ಬಡಾವಣೆಯಲ್ಲಿರುವ ವರ್ಕ್‍ಶಾಪ್, ಕ್ಯಾಂಟಿನ್, ಕೆಎಸ್‍ಎಫ್‍ಎಸಿ ಹಾಗೂ ಇತರ ಕಟ್ಟಡಗಳಿಗೂ ತೀವ್ರ ಹಾನಿಯಾಗಿದೆ. ಯಂತ್ರೋಪಕರಣಗಳು ದುರಸ್ತಿಗೊಂಡಿದೆ.

ಅನಾಹುತಕ್ಕೆ ಕಾರಣ : ಇಂತಹ ಪರಿಸ್ಥಿತಿಗೆ ಕಾರಣ ಹುಡುಕಲು ಹೊರಟಾಗ ವಿಸ್ತಾರಗೊಂಡಿರುವ ಮಡಿಕೇರಿಯ ಜನ ಜೀವನದೊಂದಿಗೆ, ಇಲ್ಲಿನ ರಾಜ ಕಾಲುವೆಯು ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಾ, ಅಲ್ಲಲ್ಲಿ ತಲೆಯೆತ್ತಿರುವ ವಾಣಿಜ್ಯ ಸಂಕೀರ್ಣಗಳು, ಮನೆ ಮಠಗಳಿಂದ ತನ್ನ ದಿಕ್ಕು ಬದಲಾಯಿಸುವಂತಾಯಿತು. ಹೊಸ ಹೊಸ ಮನೆ ದಳಗಳ ವಿಸ್ತೀರ್ಣ ನೀರಿನ ಸರಾಗ ಹರಿಯುವಿಕೆಗೆ ಅಡಚಣೆಯಾಗತೊಡಗಿತು. ಮಲೀನಗೊಂಡದೆಲ್ಲವೂ ಈ ರಾಜಕಾಲುವೆಯ ಒಡಲು ಸೇರಿದ ಕಾರಣ, ನೀರು ಸರಾಗ ಹರಿಯದೆ ಮಳೆಯ ತೀವ್ರತೆ ನಡುವೆ ಭೂಕುಸಿತಗೊಂಡು ಅವಾಂತರವನ್ನೇ ಸೃಷ್ಟಿಸಿತು.

ನಗರಸಭೆ ಗಮನಕ್ಕೆ: ಅನೇಕ ವರ್ಷಗಳ ಹಿಂದೆ ರಾಜ ಕಾಲುವೆ ಅತಿಕ್ರಮಣವಾಗುತ್ತಿರುವ ಬಗ್ಗೆ ನಗರಸಭೆಯಲ್ಲಿ ಚರ್ಚೆ ನಡೆದರೂ, ಯಾವದೇ ನಿರ್ಧಾರಕ್ಕೆ ಬಂದಿಲ್ಲವೆಂದು ಗೊತ್ತಾಗಿದೆ. ಪ್ರಸಕ್ತ ಎದುರಾಗಿರುವ ಅನಾಹುತದಿಂದ ಅಲ್ಲಲ್ಲಿ ಕುಸಿತದೊಂದಿಗೆ ಕೈಗಾರಿಕಾ ಬಡಾವಣೆ ಸಹಿತ ಅನೇಕರ ವಸತಿಗಳಿಗೂ ಅಪಾಯ ಎದುರಾಗಿರುವ ದೂರುಗಳಿವೆ.

ಈ ದಿಸೆಯಲ್ಲಿ ನಗರಸಭೆಯ ಪ್ರಮುಖರ ಗಮನ ಸೆಳೆದಾಗ, ಸರಕಾರ ಹಾಗೂ ಜನಪ್ರತಿನಿಧಿಗಳು ರಾಜ ಕಾಲುವೆ ರಕ್ಷಣೆಗೆ ಆರ್ಥಿಕ ನೆರವು ಕಲ್ಪಿಸಿದರೆ, ಶಾಶ್ವತ ತಡೆಗೋಡೆಯೊಂದಿಗೆ ಪ್ರಾಕೃತಿಕ ಹಾನಿ ತಪ್ಪಿಸಲು ಪ್ರಯತ್ನಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾಲುವೆಯ ಇಕ್ಕಡೆಗಳಲ್ಲಿ ಅತಿಕ್ರಮಣ ತಡೆಯೊಂದಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಮುಂದೆ ಗಂಭೀರವಾಗಿ ಪರಿಗಣಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಮುಂದಾಗುವ ಭರವಸೆ ನೀಡಿದ್ದಾರೆ. ಅಂತೂ ಪ್ರವಾಸಿಗರ ಒತ್ತಡದ ನಡುವೆ ಪ್ರಾಕೃತಿಕ ವಿಕೋಪದಿಂದ ನಲುಗುತ್ತಿರುವ ಮಡಿಕೇರಿಯಲ್ಲಿ ರಾಜ ಕಾಲುವೆ ನೀರು ಮತ್ತೊಮ್ಮೆ ಅನಾಹುತ ಸೃಷ್ಟಿಸದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ನಗರಸಭೆ, ಸರಕಾರದ ಗಮನ ಸೆಳೆದು ಪರ್ಯಾಯ ಕ್ರಮಕ್ಕೆ ಮುಂದಾಗಬೇಕಿದೆ.

-ಶ್ರೀಸುತ