ಸೋಮವಾರಪೇಟೆ, ಆ. 31: ಜಿಲ್ಲೆಯಲ್ಲಿನ ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರಾದವರಿಗೆ ಅಗತ್ಯ ಪುನರ್ವಸತಿ ಕಲ್ಪಿಸಲು ಲಯನ್ಸ್ ಸಂಸ್ಥೆ ನೆರವು ನೀಡಲಿದ್ದು, ಲಯನ್ಸ್ ಇಂಟರ್‍ನ್ಯಾಷನಲ್ ಫೌಂಡೇಷನ್ ವತಿಯಿಂದಲೂ ಶ್ರಮಿಸಲಾಗುವದು ಎಂದು ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಪ್ರಾಕೃತಿಕ ವಿಕೋಪ ದಿಂದ ತುಂಬಲಾರದ ನಷ್ಟವಾಗಿದೆ. ಜಿಲ್ಲೆಯ ಸಂತ್ರಸ್ತರಿಗೆ ಪುನರ್‍ವಸತಿ ಕಲ್ಪಿಸಲು ಸಂಸ್ಥೆ ಮುಂದಾಗಿದ್ದು, ಸರ್ಕಾರದ ವರದಿ ಆಧರಿಸಿ, ಯೋಜನೆ ಸಿದ್ಧಪಡಿಸಿ, ಕಾರ್ಯೋ ನ್ಮುಖವಾಗುವದಾಗಿ ಅವರು ಮಾಹಿತಿ ನೀಡಿದರು. ಈಗಾಗಲೇ ಲಯನ್ಸ್ ಫೌಂಡೇಷನ್‍ನಿಂದ ಪ್ರಕೃತಿ ವಿಕೋಪಕ್ಕೆ ತಕ್ಷಣದ ಪರಿಹಾರ ಒದಗಿಸಲು ರೂ. 3.50 ಲಕ್ಷ ಅನುದಾನ ಬಂದಿದ್ದು, ಇದರಲ್ಲಿ ಕೊಡಗಿಗೆ ಹೆಚ್ಚಿನ ಪಾಲು ಒದಗಿಸಲಾಗುವದು. ಮುಂದಿನ ದಿನಗಳಲ್ಲಿ ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳನ್ನು ಒಳಗೊಂಡಿರುವ ಲಯನ್ಸ್ ಜಿಲ್ಲೆಯಿಂದ ಶಾಶ್ವತ ಪುನರ್‍ವಸತಿಗೆ ಶ್ರಮಿಸಲಾಗುವದು ಎಂದರು.
ಪ್ರಸ್ತುತ ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಕ್ಕೆ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳಬೇಕಿದೆ ಎಂದ ದೇವದಾಸ್ ಭಂಡಾರಿ, ಮುಂದಿನ ದಿನಗಳಲ್ಲಿ ವಿಕೋಪಗಳನ್ನು ತಡೆಯುವಲ್ಲಿ ಸಮಾಜದ ಪಾತ್ರದ ಕುರಿತು ಲಯನ್ಸ್ ಸಂಸ್ಥೆಯಿಂದ ಜಾಗೃತಿ ಆಂದೋಲನ ನಡೆಸಲಾಗುವದು ಎಂದರು.
ಲಯನ್ಸ್‍ನಿಂದ ಕೊಪ್ಪ, ಸಕಲೇಶಪುರದ ತಂಬಳ್ಳಿ, ಜಿಲ್ಲೆಯ ಪನ್ಯ, ಸುಂಟಿಕೊಪ್ಪ, ಮಡಿಕೇರಿಯ ಪರಿಹಾರ ಕೇಂದ್ರಗಳಿಗೆ ನೆರವು ಒದಗಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಲಯನ್ಸ್ ಸಂಪುಟ ಕಾರ್ಯದರ್ಶಿ ಬಾಲಕೃಷ್ಣ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ಸಂಪುಟ ಸಮನ್ವಯಕಾರ ರಾಮ್ ಮೋಹನ್ ಆಳ್ವ, ವಲಯಾಧ್ಯಕ್ಷ ಎ.ಎಸ್. ಮಹೇಶ್, ಲಯನ್ಸ್ ಸೋಮವಾರಪೇಟೆ ಅಧ್ಯಕ್ಷ ಯೋಗೇಶ್ ಅವರುಗಳು ಉಪಸ್ಥಿತರಿದ್ದರು.