ವೀರಾಜಪೇಟೆ, ಆ. 31 : ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕು ಕೇಂದ್ರವಾದ ವೀರಾಜಪೇಟೆಯಲ್ಲಿ ಆಧುನಿಕ ರೀತಿಯ ನಾಲ್ಕೂವರೆ ಕೋಟಿ ವೆಚ್ಚದ ಹೈಟೆಕ್ ಸಬ್ ಜೈಲ್‍ಗೆ ಮುಂದಿನ ನವೆಂಬರ್ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲು ಪೂರ್ವ ಸಿದ್ಧತೆ ನಡೆದಿದೆ.48 ವರ್ಷಗಳ ಹಿಂದೆಯೇ ವೀರಾಜಪೇಟೆಯಲ್ಲಿ 20 ಖೈದಿಗಳ ಆಶ್ರಯದ ಸಬ್‍ಜೈಲ್‍ನ್ನು ಆರಂಭಿಸಲಾಗಿತ್ತು. ಇಲ್ಲಿನ ತಾಲೂಕು ಕಚೇರಿಯ ಒತ್ತಾಗಿದ್ದ ಸಬ್‍ಜೈಲ್ ಶಿಥಿಲಗೊಂಡಿದ್ದು ಕಳೆದ 2013ರಲ್ಲಿ ಮಿನಿ ವಿಧಾನ ಸೌಧ ಕಟ್ಟುವ ಸಲುವಾಗಿ ಹಳೆ ತಾಲೂಕು ಕಚೇರಿಯ ಕಟ್ಟಡವನ್ನು ನೆಲಸಮ ಮಾಡುವ ಸಮಯದಲ್ಲಿ ಜೆ.ಸಿ.ಬಿ.ಯಂತ್ರ ಸಬ್‍ಜೈಲ್‍ನ ಕಟ್ಟಡದ ಒಂದು ಗೋಡೆಯನ್ನು ಜಖಂಗೊಳಿಸಿದ ನಂತರ ಸಬ್‍ಜೈಲಿನಲ್ಲಿದ್ದ ಖೈದಿಗಳನ್ನು ಭದ್ರತೆಯ ನೆಲೆಯಲ್ಲಿ ಮಡಿಕೇರಿಯ ಕರ್ಣಂಗೇರಿಯ ಜಿಲ್ಲಾ ಕೇಂದ್ರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ಈ ಸಬ್‍ಜೈಲ್‍ನ್ನು ಹುಣಸೂರು ಬಳಿಯಿರುವ ಕೆ.ಆರ್ ನಗರದ ಸಬ್‍ಜೈಲ್‍ಗೆ ಶಾಶ್ವತವಾಗಿ ಸ್ಥಳಾಂತರಿಸುವಂತೆ ಬೆಂಗಳೂರಿನಲ್ಲಿರುವ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕರು ತೀರ್ಮಾನಿಸಿದ್ದರು. ಈ ನಿರ್ಧಾರವನ್ನು ವಿರೋಧಿಸಿ ಇಲ್ಲಿನ ವಕೀಲರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸರಕಾರಕ್ಕೆ ಮನವಿ ಸಲ್ಲಿಸಿ ಸಬ್ ಜೈಲ್ ಸ್ಥಳಾಂತರವನ್ನು ತಡೆಯಲಾಯಿತು.
(ಮೊದಲ ಪುಟದಿಂದ) ರಾಜ್ಯ ಸರಕಾರದ ಕಾರಾಗೃಹದ ಅಧಿಕಾರಿಗಳು ಸಬ್‍ಜೈಲು ಹಾಗೂ ಜೈಲ್ ಸಿಬ್ಬಂದಿಗಳ ವಸತಿ ಗೃಹಗಳನ್ನು ಖುದ್ದು ಪರಿಶೀಲಿಸಿ ವೀರಾಜಪೇಟೆಗೆ ಒಂದು ಅಂತಸ್ತಿನ 80 ಮಂದಿ ಆಶ್ರಯದ ಹೈಟೆಕ್ ಸಬ್ ಜೈಲು ಕಟ್ಟಡಕ್ಕೆ ಸರಕಾರದಿಂದ ಮಂಜೂರಾತಿಯನ್ನು ಪಡೆದರು. ಈಗ ವಸತಿ ಗೃಹ ಇರುವ ಅರವತ್ತು ಸೆಂಟು ವಿಶಾಲವಾದ ಜಾಗವನ್ನು ಸಬ್‍ಜೈಲ್‍ಗೆ ಬಳಸುವಂತೆಯೂ ಸಬ್‍ಜೈಲ್‍ನ ಹಳೆಯ ಕಟ್ಟಡದ ಸ್ಥಳದಲ್ಲಿಯೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಸತಿ ಗೃಹವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.
ಈ ಆಧುನಿಕ ಸಬ್‍ಜೈಲ್ ವಿಶಾಲವಾದ ಅಡುಗೆ ಮನೆ, ಸ್ನಾನದ ಮನೆ, ತಲಾ 20ಮಂದಿ ತಂಗುವ 4 ಬ್ಯಾರಕ್‍ಗಳನ್ನು ಹೊಂದಿರುತ್ತದೆ. ಜೊತೆಗೆ ಜೈಲರ್‍ಗೆ ಇತರ ಸಿಬ್ಬಂದಿಗಳಿಗೆ, ಭದ್ರತಾ ಸಿಬ್ಬಂದಿಗಳಿಗೆ ಪ್ರತ್ಯೇಕ ಕಚೇರಿಗಳು ಇರುತ್ತವೆ.
ಈ ಸಬ್‍ಜೈಲ್‍ಗೆ ತಾಲೂಕಿನ ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ, ಗೋಣಿಕೊಪ್ಪ, ಸಿದ್ದಾಪುರ ಹಾಗೂ ವೀರಾಜಪೇಟೆಯ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳು ಒಳಪಡಲಿವೆ. ಜೊತೆಗೆ ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದ ನಾಲ್ಕು ನ್ಯಾಯಾಲಯಗಳು, ಪೊನ್ನಂಪೇಟೆಯ ಮುನ್ಸಿಫ್ ನ್ಯಾಯಾಲಯಗಳಿಗೆ ಈ ಸಬ್‍ಜೈಲ್‍ನ ಸೌಲಭ್ಯ ದೊರೆಯಲಿದೆ. ಈಗ ಐದು ವರ್ಷಗಳಿಂದ ತಾಲೂಕಿನ ಏಳು ಪೊಲೀಸ್ ಠಾಣೆಗಳು ಹಾಗೂ ಐದು ನ್ಯಾಯಾಲಯಗಳು ಜೈಲ್‍ನ ಸೌಲಭ್ಯಕ್ಕಾಗಿ ಮಡಿಕೇರಿ ಬಳಿಯಿರುವ ಕರ್ಣಂಗೇರಿಯ ಜಿಲ್ಲಾ ಕೇಂದ್ರ ಕಾರಾಗೃಹವನ್ನು ಅವಲಂಬಿತವಾಗಿದೆ.
ವೀರಾಜಪೇಟೆ ಸಬ್‍ಜೈಲ್ ನಿರ್ಮಾಣಕ್ಕಾಗಿ ಸರಕಾರ ರೂ. ನಾಲ್ಕೂವರೆ ಕೋಟಿ ಪೈಕಿ ರೂ. ಒಂದು ಕೋಟಿ ಮೂವತ್ತೈದು ಲಕ್ಷ ಹಣವನ್ನು ಬಿಡುಗಡೆ ಮಾಡಿ ವೀರಾಜಪೇಟೆ ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿ ಆರಂಭಕ್ಕಾಗಿ ಠೇವಣಿ ಮಾಡಿದೆ. ಈಗಾಗಲೇ ಇಲಾಖೆ ಇ-ಟೆಂಡರ್ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ಎರಡು ತಿಂಗಳ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಜೈಲ್ ಅಧಿಕಾರಿ ರಮೇಶ್ ತಿಳಿಸಿದ್ದಾರೆ.
ಈಗ ವೀರಾಜಪೇಟೆಯಲ್ಲಿ ಜೈಲ್ ಸೌಲಭ್ಯವಿಲ್ಲದೆ ಕುಟ್ಟದಿಂದ ವೀರಾಜಪೇಟೆಯವರೆಗಿನ ಏಳು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿಗಳು ಖೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಹಾಗೂ ಕಾರಾಗೃಹಕ್ಕೆ ಸೇರಿಸಲು ಹರ ಸಾಹಸಪಡುವಂತಾಗಿದೆ. ಹೊಸ ಸಬ್‍ಜೈಲ್‍ನ ನಿರ್ಮಾಣ 2020ರ ವರ್ಷದ ಆರಂಭದಲ್ಲಿ ಮುಕ್ತಾಯಗೊಳ್ಳಲಿದೆ. -ಡಿ.ಎಂ.ಆರ್.