ಮಡಿಕೇರಿ, ಆ. 31: ಬೆಳಿಗ್ಗೆಯಿಂದ ಸಂಜೆಯ ತನಕ ಕೃಷಿ ಜಮೀನಿನಲ್ಲಿ ದುಡಿದು ಸಂಜೆಯ ವೇಳೆ ಮನೆಗೆ ಬಂದು ಕಾಫಿ ಸೇವಿಸಿ, ಮತ್ತೆ ಗದ್ದೆಗೆ ಹೋಗಿ ಬರುವದಾಗಿ ತೆರಳಿದಾತ ವಾಪಾಸು ಹಿಂತಿರುಗಲೇ ಇಲ್ಲವೆಂದು ಹೆಬ್ಬಾಲೆಯಲ್ಲಿ ಕಾಣೆಯಾಗಿರುವ ಹರೀಶ್‍ಕುಮಾರ್ ಬಗ್ಗೆ ಹೆತ್ತವರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ನಿಯಂತ್ರಣ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗಾನಂದ್ ತಮ್ಮ ಸಹೋದರ ಹರೀಶ್‍ಕುಮಾರ್ (42) ನಾಪತ್ತೆಯಾಗಿರುವ ಘಟನೆ ಕುರಿತು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡರು. ತಾ. 16 ರಂದು ಸಂಜೆಯಾಗುತ್ತಿದ್ದಂತೆಯೇ ಹೆಬ್ಬಾಲೆ ವ್ಯಾಪ್ತಿಯ ಬಹುತೇಕ ಗ್ರಾಮದ ಗದ್ದೆ ಬಯಲು ಹಾರಂಗಿ ಹಾಗೂ ಕಾವೇರಿ ಪ್ರವಾಹದಿಂದ ಮುಳುಗಡೆಯಾಗಿದೆ.

ರೈತರ ಜಮೀನು ಕೆಲಸಕ್ಕೂ ತೊಡಕಾಗಿದೆ. ಹೀಗಾಗಿ ಗದ್ದೆ, ಹೊಲಗಳಿಗೆ ಬರುವ ನೀರಿನ ಪ್ರವಾಹವನ್ನು ತಡೆಗಟ್ಟುವ ದಿಸೆಯಲ್ಲಿ ತೆರಳಿದ್ದ ಹರೀಶ್‍ಕುಮಾರ್ ರಾತ್ರಿ ಬಹಳ ಹೊತ್ತಾದರೂ ಹಿಂತಿರುಗಿಲ್ಲ. ಅವರ ಪತ್ನಿ ಸಾಲಿಗ್ರಾಮದ ಶಾಲೆಯೊಂದರಲ್ಲಿ ಉದ್ಯೋಗದಲ್ಲಿದ್ದು, ಓರ್ವ ಪುತ್ರನಿದ್ದಾನೆ. ಇದುವರೆಗೆ ಪೊಲೀಸ್ ಇಲಾಖೆ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದೊಂದಿಗೆ ಸಾಕಷ್ಟು ಹುಡುಕಾಟ ನಡೆಸಿದರೂ ಎಲ್ಲಿಯೂ ತಮ್ಮನ ಬಗ್ಗೆ ಸುಳಿವು ಲಭಿಸಿಲ್ಲವೆಂದು ಯೋಗಾನಂದ ಕಳವಳ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯ ಸುಳಿವಿಲ್ಲ: ಇನ್ನೊಂದೆಡೆ ಬೆಟ್ಟತ್ತೂರು ಗ್ರಾಮದ ನಿವಾಸಿ, ಕುಡಿಯರ ಸೋಮಪ್ಪ ಎಂಬವರ ಪುತ್ರಿ, ಮದೆ ಶಾಲೆಯ ವಿದ್ಯಾರ್ಥಿನಿ ಮಂಜುಳ (15) ಎಂಬಾಕೆ ತಾ. 17 ರಂದು ಜೋಡುಪಾಲದಲ್ಲಿ ಜಲಸ್ಫೋಟದಿಂದ ಸಂಭವಿಸಿರುವ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಮಾಹಿತಿಯಿದ್ದು, ಇದುವರೆಗೆ ಆಕೆಯ ಕುರಿತಾಗಿಯೂ ಯಾವದೇ ಸುಳಿವು ಲಭಿಸಿಲ್ಲ. ಗ್ರಾಮಸ್ಥರು ಹಾಗೂ ಬಂಧುವರ್ಗ ಪೊಲೀಸ್ ಇಲಾಖೆಯೊಂದಿಗೆ ಇತರ ಕಾರ್ಯಪಡೆ ಜತೆಗೂಡಿ ಹುಡುಕಿದರು ಇದುವರೆಗೆ ಪತ್ತೆಯಾಗಿಲ್ಲ.

ಒಟ್ಟಿನಲ್ಲಿ ಪ್ರಸಕ್ತ ಎದುರಾಗಿರುವ ಪ್ರಾಕೃತಿಕ ವಿಕೋಪದ ನಡುವೆ ಜೀವ ಹಾನಿ ಸಂಬಂಧ 18 ಪ್ರಕರಣಗಳಲ್ಲಿ 16 ಮಂದಿಯ ಶವಗಳು ಪತ್ತೆಯಾಗಿವೆ. ಈ ಮೇಲಿನ ಈರ್ವರ ಬಗ್ಗೆ ಯಾವದೇ ಸುಳಿವು ಇದುವರೆಗೆ ಲಭಿಸದಿರುವ ಪರಿಣಾಮ ಬಂಧುವರ್ಗದಲ್ಲಿ ಆತಂಕ ಹೆಚ್ಚಾಗಿದೆ.

ಪ್ರವಾಹಕ್ಕೆ ಹಾರಿದ ವೃದ್ಧೆ..!?

ಮೂಲಗಳ ಪ್ರಕಾರ ಹೆಬ್ಬಾಲೆ ಗ್ರಾಮದ 78ರ ಇಳಿವಯಸ್ಸಿನ ವೃದ್ಧೆಯೊಬ್ಬರು ಕಣಿವೆಯ ತೂಗು ಸೇತುವೆಯಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಾರಿರುವ ಬಗ್ಗೆಯೂ ಕೆಲವರು ಪೊಲೀಸರಿಗೆ ಸುಳಿವು ನೀಡಿದ್ದಾರೆ. ಆ ಕುರಿತಾಗಿಯೂ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಯಾವದೇ ಕುರುಹು ಗೋಚರಿಸದಿರುವ ಕಾರಣ ಶೋಧ ಮುಂದುವರೆಸಿರುವದಾಗಿ ಹೇಳಲಾಗುತ್ತಿದೆ.