ಮಡಿಕೇರಿ, ಆ.31: ಅದೃಷ್ಟ ನಿನ್ನನ್ನು ನಾಶ ಮಾಡಿದಾಗ, ಕಲಿತ ವಿದ್ಯೆ ನಿನಗೆ ಆಶ್ರಯ ನೀಡುತ್ತದೆ ಎಂಬ ಮಾತೊಂದಿದೆ.ಕೊಡಗು ಕಂಡು ಕೇಳರಿಯದ ಪ್ರಾಕೃತಿಕ ವಿಕೋಪದಿಂದ ಸೂರು- ನೆಲೆ ಕಳೆದುಕೊಂಡು ಭವಿಷ್ಯ ಕಾರ್ಗತ್ತಲಾಯ್ತು ಎಂದು ಹತ್ತಾರು ಕುಟುಂಬಗಳು ಕೊರಗುತ್ತಿರುವಾಗ, ಅಂತಹವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಭರವಸೆ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಕೇಂದ್ರದಿಂದ ಬಂದಿತು. ಈ ಸಂದೇಶ ಮಾಧ್ಯಮ ಗಳಲ್ಲಿ, ವಾಟ್ಸಾಪ್‍ಗಳಲ್ಲಿ ಹಬ್ಬಿತು. ದುರ್ಘಟನೆ ಆಗಸ್ಟ್ ಹದಿನಾರರಂದು ಸಂಭವಿಸಿತು. ಅದು ನಡೆದು ಹತ್ತೇ ದಿನಗಳಲ್ಲಿ ನೂರಾರು ಸಂತ್ರಸ್ತ ವಿದ್ಯಾರ್ಥಿಗಳನ್ನು ವಿದ್ಯಾಕೇಂದ್ರ ದತ್ತು ಪಡೆದಿದೆ. ಸಾಯಿ ಶಂಕರ ವಿದ್ಯಾ ಕೇಂದ್ರದ ಸ್ಥಾಪಕ ಮತ್ತು ಅಧ್ಯಕ್ಷ ಝರು ಗಣಪತಿ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಸಂಸ್ಥೆಯು 121 ವಿದ್ಯಾರ್ಥಿ ವಿದ್ಯಾರ್ಥಿ ನಿಯರನ್ನು ಸೇರಿಸಿಕೊಂಡಿ ರುವದಾಗಿ ಹರ್ಷದಿಂದ ನುಡಿದರು.ಸಂತ್ರಸ್ತ ವಿದ್ಯಾರ್ಥಿಗಳು ಗಾಳಿಬೀಡು, ಹಟ್ಟಿಹೊಳೆ, ಮುಕ್ಕೋಡ್ಲು, ಕಾಲೂರು, ದೇವಸ್ತೂರು, ಮಕ್ಕಂದೂರು, ಮೇಘತ್ತಾಳು, ಮದೆನಾಡು, ಜೋಡುಪಾಲ ಹಾಗೂ ಇತರೆಡೆಗಳಿಂದ ಬಂದಿದ್ದಾರೆ. ಯುಕೆಜಿಗೆ 3, ಒಂದನೇ ತರಗತಿಗೆ 8, ಎರಡನೇ ತರಗತಿಗೆ 5, ಮೂರನೇ ತರಗತಿಗೆ 7, ನಾಲ್ಕನೇ ತರಗತಿಗೆ 14, ಐದನೇ ತರಗತಿಗೆ 11, ಆರನೇ ತರಗತಿಗೆ 14, 7ನೇ ತರಗತಿಗೆ 20, 8ನೇ ತರಗತಿಗೆ 13, ಒಂಭತ್ತನೇ ತರಗತಿಗೆ 13, ಹತ್ತಕ್ಕೆ 6 ಹಾಗೂ ಪ್ರಥಮ ಪಿಯುಸಿಗೆ 7 ಮಕ್ಕಳನ್ನು ಸೇರಿಸಿಕೊಳ್ಳಲಾಗಿದೆ. ಒಟ್ಟು 121 ಅಲ್ಲದೆ, ಇನ್ನೂ ಹತ್ತು ವಿದ್ಯಾರ್ಥಿಗಳು ಬರುವದರಲ್ಲಿದ್ದಾರೆ.
ಈ ಕುರಿತು ಮಾತನಾಡಿದ ಝರು ಗಣಪತಿ ಅವರು ವಿದ್ಯಾರ್ಥಿ ಗಳಿಗೆ ಬಟ್ಟೆ, ಪುಸ್ತಕ, ಚೀಲ, ವಸತಿ, ಊಟ ಎಲ್ಲವನ್ನೂ ಮೂರು ವರುಷ ಉಚಿತವಾಗಿ ನೀಡುವದಾಗಿ ಹೇಳಿದ್ದಾರೆ.
ಕೇರಳದಲ್ಲಿ ಜಲಪ್ರಳಯ ಆರಂಭಗೊಂಡಾಗ ಅಲ್ಲಿಯ ಸಂತ್ರಸ್ತರಿಗೆ ನೆರವಾಗಲು 3-4 ವಾಹನಗಳಲ್ಲಿ ಝರು ಗಣಪತಿ ತಂಡ ಹೊರಟು, ಜಿಲ್ಲಾಧಿ ಕಾರಿಗಳ ಅನುಮತಿ ಪಡೆದಿದ್ದರು. ಆದರೆ ಆ ಸಂದರ್ಭದಲ್ಲಿ ಜಿಲ್ಲೆಯಲ್ಲೇ ಪ್ರಕೃತಿ ಮುನಿಸಿಗೆ ಜೀವ, ಆಸ್ತಿ, ಸೂರು ನಾಶವಾಗಲಾರಂಭಿಸಿದುದರಿಂದ ಕೊಡಗಿನಲ್ಲೇ ನೆರವಿಗೆ ಮುಂದಾಗುವ ತೀರ್ಮಾನಕ್ಕೆ ಬಂದರು.
ಸಾಮಗ್ರಿಗಳು ಎಲ್ಲೆಡೆಯಿಂದ ಹರಿದು ಬರಲಾರಂಭಿಸಿದುದರಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಚಿಂತನೆ ಮೂಡಿ, ಉಚಿತ ಶಿಕ್ಷಣ ನೀಡುವ ನಿರ್ಧಾರಕ್ಕೆ ಬರಲಾಯಿತು ಎಂದು ಗಣಪತಿ ಹೇಳಿದರು.
ಆಧ್ಯಾತ್ಮ ಚಟುವಟಿಕೆ, ಹಿನ್ನೆಲೆ ಉಳ್ಳ ಸಾಯಿ ಶಂಕರ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ಉತ್ತಮ ವಿದ್ಯಾ ಭ್ಯಾಸ, ವಿಶೇಷ ತರಬೇತಿ ಯೊಂದಿಗೆ ವೇದ, ಸಂಗೀತ, ನೃತ್ಯ, ಕರಾಟೆ, ಚಿತ್ರಕಲೆ, ಆಟೋಟ ಹಾಗೂ ಬಾಳಲು ಬೆಳಕಾಗುವ ಇತರ ಕಲೆಗಳನ್ನು ಹೇಳಿಕೊಡಲಾಗುತ್ತಿದೆ.