ಸುಂಟಿಕೊಪ್ಪ, ಆ. 31: ಜಲ ಪ್ರಳಯ, ಬರೆ ಕುಸಿತದಿಂದ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರನ್ನು ಕುಶಾಲನಗರಕ್ಕೆ ವಿವಿಧ ವಾಹನಗಳಲ್ಲಿ 46 ಕುಟುಂಬದ 138 ಜನರನ್ನು ಸ್ಥಳಾಂತರಿಸಲಾಯಿತು.

ತಾ. 16 ರಂದು ಮುಂಜಾನೆ 2 ಗಂಟೆಯ ವೇಳೆಗೆ ಮಹಾ ಮಳೆ ಹಾಗೂ ಜಲಪ್ರಳಯದಿಂದ ಅತಿವೃಷ್ಟಿಯ ದುರಂತ ಸಂಭವಿಸಿದೆ. ಅಂದಿನಿಂದ ಇಂದಿನವರೆಗೂ ನೂರಾರು ಮಂದಿ ಇಲ್ಲಿನ ಹಲವು ಕಡೆಗಳಲ್ಲಿ ಆಶ್ರಯ ಪಡೆದಿದ್ದರು.

ಪಟ್ಟಣದಲ್ಲಿ ವಿವಿಧ ಸ್ಥಳಗಳಾದ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಖತ್ತೀಜ ಉಮ್ಮ ಮದರಸಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಊಟ, ವಸತಿ ಕಲ್ಪಿಸಿದ್ದರು. ಶಾಲೆಗಳು ಆರಂಭಗೊಳ್ಳುತ್ತಿದ್ದಂತೆ ಶಾಲೆಗಳಲ್ಲಿ ಇದ್ದ ಸಂತ್ರಸ್ತರನ್ನು ಸರಕಾರಿ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿತ್ತು.

ತಾ. 29 ರಂದು ಮಧ್ಯಾಹ್ನ ಇಲ್ಲಿನ ಪುನರ್ವಸತಿ ಕೇಂದ್ರದಲ್ಲಿದ್ದ ಸಂತ್ರಸ್ತರು ಇನ್ನು ಮುಂದೆ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಇವರೆಲ್ಲರ ಜವಾಬ್ದಾರಿ ಯನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ.

ಇದುವರೆಗೂ ಇಲ್ಲಿನ ಜವಾಬ್ದಾರಿ ಯನ್ನು ರಾಮ ಮಂದಿರದಲ್ಲಿ ಸೇವಾ ಭಾರತಿ ವಹಿಸಿಕೊಂಡಿತ್ತು. ಇದರಲ್ಲಿ ಶಾಂತರಾಮ ಕಾಮತ್, ಪಿ.ಆರ್. ಸುನಿಲ್ ಕುಮಾರ್, ರೋಸ್ ಮೇರಿ ರಾಡ್ರಿಗಸ್, ಓಡಿಯಪ್ಪನ ವಿಮಲಾವತಿ, ನಾಗರತ್ನ, ನಾಗೇಶ್ ಪೂಜಾರಿ, ವಿನೋದ್, ಸಂತ ಮೇರಿ ಶಾಲೆಯಲ್ಲಿ ರೆ.ಫಾ. ಎಡ್ವಾರ್ಡ್ ವಿಲಿಯಂ ಸಾಲ್ದಾನ, ಸೆಲ್ವರಾಜ್, ಸಂತ ಅಂತೋಣಿ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ವಿರಾ, ಸುಪಿರೀಯರ್ ಸಿಸ್ಟರ್ ವೈಲೆಟ್, ಗ್ರೇಸಿ ಡೇವಿಡ್, ಮರಿಯ, ರೀಟಾ ಸೆಲ್ವರಾಜ್, ಅಗಸ್ಟೀನ್ ಸ್ಟ್ಯಾನಿ, ಸನ್ನಿ ಪಾದುವ, ರಜಿನಿ ಮೋಹನ್, ಮಂಜುನಾಥ್, ಅನೀಶ್, ಪ್ರಶಾಂತ್, ಖತೀಜ ಉಮ್ಮ ಮದರಸದಲ್ಲಿ ಸಿ.ಎಂ. ಹಮೀದ್ ಮೌಲ್ವಿ, ಅಣ್ಣಾ ಶೇರಿಫ್, ಉಮ್ಮರ್, ಮಹಮ್ಮದ್, ಹಸನ್ ಕುಂಞ ಮತ್ತಿತರರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ್ದರು.

ಇದೇ ಸಂದರ್ಭ ಸಂತ್ರಸ್ತರಿಗೆ ಅಕ್ಕಿ ಸೇರಿದಂತೆ ವಿವಿಧ ಸಾಮಗ್ರಿಗಳ ಕಿಟ್‍ನ್ನು ಸೇವಾ ಭಾರತಿ ವತಿಯಿಂದ ವಿತರಿಸಲಾಯಿತು.

ಸ್ಥಳಾಂತರದ ಸಂದರ್ಭ ತಾಲೂಕು ತಹಶೀಲ್ದಾರ್ ಮಹೇಶ್, ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮ ಲೆಕ್ಕಿಗರು, ಪೊಲೀಸ್ ಸಿಬ್ಬಂದಿಗಳು ಇದ್ದರು.