ಮಡಿಕೇರಿ, ಆ. 31: ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾ ಇದರ ನೇತೃತ್ವದಲ್ಲಿ ಕಳೆದ 13 ದಿನಗಳಿಂದ ಮಡಿಕೇರಿಯ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ನಡೆಯುತ್ತಿದ್ದ ಪರಿಹಾರ ಕೇಂದ್ರವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಮಕ್ಕಂದೂರು, ಕಕ್ಕಬೆ, ಕಾಲೂರು, 1ನೇ ಮೊಣ್ಣಂಗೇರಿ, 2ನೇ ಮೊಣ್ಣಂಗೇರಿ, ಹೆಬ್ಬೆಟ್ಟಗೇರಿ, ಹಾಲೇರಿ, ಮೂರ್ನಾಡು ರಸ್ತೆ, ಗಾಳಿಬೀಡು, ಚಾಮುಂಡೇಶ್ವರಿ ನಗರ, ಭಗವತಿ ನಗರ, ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ, ಇಂದಿರಾನಗರ, ಆಜಾóದ್ ನಗರ, ಕಾರ್ಯಪ್ಪ ಕಾಲೇಜು ಹಿಂಭಾಗ ಸೇರಿದಂತೆ ವಿವಿಧೆಡೆಗಳ ಸುಮಾರು 250 ಮಂದಿಗೆ ಇಲ್ಲಿ ಆಶ್ರಯ ನೀಡಲಾಗಿತ್ತು. ಇವರಲ್ಲಿ 60 ಮಂದಿ ಅಸ್ಸಾಂ ಕಾರ್ಮಿಕರು ಕೂಡ ಇದ್ದರು.

ಮಳೆ ಕಡಿಮೆಯಾದ ಕಾರಣ ಸುಮಾರು 13 ದಿನಗಳ ಆಶ್ರಯದ ನಂತರ ಹಲವರು ತಮ್ಮ ಮನೆಗಳಿಗೆ ತೆರಳಿದ್ದು, ಮನೆ ಕಳೆದುಕೊಂಡವರಿಗೆ ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾ ವತಿಯಿಂದ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.

ಬಾಕಿ ಉಳಿದವರನ್ನು ಕೋಟೆ ಆವರಣದ ಬಾಲಕಿಯರ ಬಾಲ ಮಂದಿರ ಹಾಗೂ ಕುಶಾಲನಗರ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸ ಲಾಗಿದೆ. ಅಸ್ಸಾಂ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಡಲಾಗಿದೆ ಎಂದು ಪರಿಹಾರ ಕೇಂದ್ರದ ಸ್ವಯಂ ಸೇವಕರು ತಿಳಿಸಿದ್ದಾರೆ.

ಕೂರ್ಗ್ ಕಮ್ಯೂನಿಟಿ ಹಾಲ್ ಪರಿಹಾರ ಕೇಂದ್ರದ ಹಸ್ತಾಂತರವನ್ನು ತಹಶೀಲ್ದಾರ್ ಕುಸುಮಾ ಅವರ ಸಮ್ಮುಖದಲ್ಲಿ ಮಾಡಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಬಿ.ಎಂ. ಬೆಳ್ಯಪ್ಪ, ಕೂರ್ಗ್ ಕಮ್ಯೂನಿಟಿ ಹಾಲ್‍ನ ಮುಖ್ಯಸ್ಥ ಮೌಲಾನ ಅಬ್ದುಲ್ ಹಕೀಂ, ಅಹಮದೀಯ ಮುಸ್ಲಿಂ ಜಮಾಅತ್‍ನ ಅಧ್ಯಕ್ಷ ಎಂ.ಬಿ. ಜಾಹೀರ್ ಅಹಮ್ಮದ್, ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾದ ದಕ್ಷಿಣ ವಲಯ ಕರ್ನಾಟಕದ ಮುಖ್ಯಸ್ಥ ಜಿ.ಎಂ. ಮಹಮ್ಮದ್ ಷರೀಫ್ ಉಪಸ್ಥಿತರಿದ್ದರು.