ಇಂದು ಕೊಡಗಿನ ಕೈಲ್ ಮುಹೂರ್ತ ಹಬ್ಬ. ಕೊಡಗಿನಲ್ಲಿ ನಡೆಯುವ ಹಬ್ಬಗಳಲ್ಲಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಹಬ್ಬಗಳು ಪ್ರಮುಖವಾದವುಗಳು.

ಈ ಹಬ್ಬಗಳಲ್ಲಿ ಅವುಗಳದ್ದೇ ಆದ ಪ್ರತ್ಯೇಕ ಆಚಾರ-ವಿಚಾರಗಳನ್ನು ಕಾಣಬಹುದಾಗಿದೆ. ಕೈಲ್ ಮುಹೂರ್ತ ಹಬ್ಬವನ್ನು ಕೊಡವ ಭಾಷೆಯಲ್ಲಿ ಕೈಲ್ ಪೆÇಳ್ದ್ ಎಂದೂ ಕರೆಯಲಾಗುವದು. ಇದು ಒಂದು ವಿಶಿಷ್ಟವಾದ ಹಬ್ಬ.

‘ಕೈಲ್ ಪೆÇಳ್ದ್’ ಅನ್ನು ಕೊಡ ಗಿನಲ್ಲಿ ಸಂಪ್ರದಾಯಗಳೊಂದಿಗೆ ಮನೋರಂಜನಾ ಹಬ್ಬವಾಗಿಯೂ ಆಚರಿಸಲಾಗುತ್ತಿದೆ. ಕೈಲ್ ಎಂದರೆ ಆಯುಧ, ಪೆÇಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ ಕೈಲ್ ಪೆÇಳ್ದ್ ಅನ್ನು ಆಯುಧ ಪೂಜೆ ಎಂದೂ ಕರೆಯುತ್ತಾರೆ.

ಕೊಡಗಿನಲ್ಲಿ ಕೃಷಿಗೆ ಪ್ರಧಾನ ಆದ್ಯತೆ. ಕೊಡವರು ಮೂಲತಃ ಕೃಷಿಕರು. ಜತೆಗೆ, ಉತ್ತಮ ಬೇಟೆಗಾರರು ಕೂಡ. ಹಿಂದಿನ ಕಾಲದಲ್ಲಿ ಪ್ರಾಣಿಗಳ ಬೇಟೆಯಾಡು ವದಕ್ಕಾಗಿ ಕೋವಿ, ಕತ್ತಿಗಳನ್ನು ಉಪಯೋಗಿಸುತ್ತಿದ್ದರು.

ಆದರೆ, ವ್ಯವಸಾಯದ ಸಂದರ್ಭದಲ್ಲಿ ಅಂದರೆ ಕಕ್ಕಡ (ಆಟಿ) ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ‘ಕನ್ನಿಕೋಂಬರೆ’ (ದೇವರ ಕೋಣೆ)ಯಲ್ಲಿ ಇಟ್ಟಿರುತ್ತಾರೆ. ಕೃಷಿ ಕಾರ್ಯ ಮುಗಿದ ಅನಂತರ ಆಯುಧಗಳಿಗೆ ಪೂಜೆ ಸಲ್ಲಿಸುವದರ ಮೂಲಕ ಅವುಗಳನ್ನು ಹೊರಗೆ ತೆಗೆಯಲಾಗುತ್ತದೆ. ಈ ಆಯುಧಗಳನ್ನು ‘ಕನ್ನಿಕೋಂಬರೆ’(ಆಯುಧ ಕೋಣೆ) ಯಿಂದ ಹೊರತೆಗೆದು ಶ್ರದ್ಧಾಭಕ್ತಿ ಯಿಂದ ಪೂಜಿಸಲಾಗುತ್ತದೆ. ಕೋವಿ ಯನ್ನು ಪೂಜಿಸಲು ‘ತೋಕ್‍ಪೂ’ (ಕೋವಿ ಹೂ)ವನ್ನು ಬಳಸುತ್ತಾರೆ. ಕಾಡುಗಳಲ್ಲಿ ಹಬ್ಬಿ ಬೆಳೆಯುವ ವರ್ಣರಂಜಿತ ಹೂ ಇದು. ಈ ಸಮಯದಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಕೆಲವರು ಗೌರಿ ಹೂ ಎಂತಲೂ ಕರೆಯುತ್ತಾರೆ.

ಕೈಲ್ ಮುಹೂರ್ತ ಹಬ್ಬದ ಅನಂತರ ಕತ್ತಿ ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ಗದ್ದೆ ವ್ಯವಸಾಯದಲ್ಲಿ ಬಳಕೆಯಾಗುತ್ತಿದ್ದ ನೇಗಿಲು, ನೊಗ, ಗುದ್ದಲಿ ಇತ್ಯಾದಿ ವ್ಯವಸಾಯ ಉಪಕರಣಗಳಿಗೆ ವಿರಾಮ. ಅಂತೆಯೇ, ಈ ಎಲ್ಲಾ ಉಪಕರಣಗಳನ್ನು ತೊಳೆದು ಪೂಜೆ ಸಲ್ಲಿಸಲಾಗುತ್ತದೆ. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ, ಗಂಧ ಹಚ್ಚಿ ಅಲಂಕರಿಸುತ್ತಾರೆ. ಅಲ್ಲದೆ, ಅಕ್ಕಿ-ಬೆಲ್ಲದಿಂದ ಮಾಡಿದ ಪಾಯಸ (ಪಣಿ ಪುಟ್ಟ್) ತಿನ್ನಿಸುತ್ತಾರೆ. ಗದ್ದೆ ಕೆಲಸಕ್ಕೆ ಬಳಸಿದ ಸಲಕರಣೆಗಳನ್ನು ತೊಳೆದು ಪೂಜಿಸಿ ಸುರಕ್ಷಿತವಾಗಿರಿಸಿದರೆ ಅವು ಮತ್ತೆ ಬಳಕೆಯಾಗುವದು ಮುಂದಿನ ವರ್ಷದಲ್ಲೇ. ಕಡಂಬಿಟ್ಟು ಹಾಗೂ ಹಂದಿ ಮಾಂಸದ ಊಟ ಕೈಲ್ ಮುಹೂರ್ತ ಹಬ್ಬದ ವಿಶೇಷ. ಮದ್ಯ ಸೇವನೆಗೂ ಮಹತ್ವ. ಇದಾದ ಅನಂತರ ಎಲ್ಲರೂ ಊರಿನ ಪಕ್ಕದ ಮೈದಾನದಲ್ಲಿ ಸೇರುತ್ತಾರೆ. ಅಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಹಬ್ಬದ ಆಚರಣೆಯನ್ನು ಸಾರುತ್ತಾರೆ. ಮಕ್ಕಳಾದಿಯಾಗಿ ಹಿರಿಯರವರೆಗೆ ಎಲ್ಲರಿಗೂ ಅಲ್ಲಿ ಶೌರ್ಯ ಪ್ರದರ್ಶನದ ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಮರದ ತುದಿಗೆ ತೆಂಗಿನಕಾಯಿಯನ್ನು ಕಟ್ಟಿ ಅದಕ್ಕೆ ಗುಂಡು ಹೊಡೆಯುವದು ಈ ಸ್ಪರ್ಧೆಗಳಲ್ಲೊಂದು. ಹೀಗೆ ಸ್ಪರ್ಧೆಗಾಗಿ ಊರಿನವರೆಲ್ಲ ಸೇರಿ ಪಕ್ಕದ ಶಾಲಾ ಮೈದಾನದಲ್ಲಿ ಆಟೋಟಗಳ ಸ್ವರ್ಧೆಗಳನ್ನು ಏರ್ಪಡಿಸಲಾಗುತ್ತದೆ.

ಪ್ರಕೃತಿ ಮುನಿದ ಕಾರಣ ಈ ಬಾರಿಯ ಹಬ್ಬವನ್ನು ಸರಳವಾಗಿ ಆಚರಿಸ ಲಾಗುತ್ತದೆ ಎಂದು ತಿಳಿದು ಬಂದಿದೆ.

- ಪಿ.ವಿ. ಪ್ರಭಾಕರ್, ನಾಪೋಕ್ಲು