ಗೋಣಿಕೊಪ್ಪ ವರದಿ, ಸೆ. 2: ಕರುಂಬಯ್ಯಾಸ್ ಅಕಾಡೆಮಿ ಫಾರ್ ಲರ್ನಿಂಗ್ ಅಯಿಂಡ್ ಸ್ಪೋಟ್ಸ್ ಅಕಾಡೆಮಿ ಸಹಯೋಗದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ 17 ವರ್ಷದೊಳಗಿನ ಕರ್ನಾಟಕ ಐಸಿಎಸ್ಇ ಸ್ಕೂಲ್ ರೀಜಿನಲ್ ಹಾಕಿ ಚಾಂಪಿಯನ್ ಶಿಪ್ನಲ್ಲಿ ಕಾಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಾಪ್ಸ್ ತಂಡವು ರನ್ನರ್ ಅಪ್, ಬೆಂಗಳೂರು ಬಾಲ್ಡ್ವಿನ್ಸ್ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.
ಅಂತಿಮ ಪಂದ್ಯದಲ್ಲಿ ರೋಚಕ ಹಣಾಹಣಿ ಬಂತು. ಪಂದ್ಯದ ಅವಧಿಯಲ್ಲಿ ಸಮನಾಂತರ ಸಾಧಿಸಿದ ತಂಡಗಳು, ಶೂಟೌಟ್ನಲ್ಲಿಯೂ ಸಮನಾಂತರ ಸಾಧಿಸಿದವು. ನಂತರ ಗೋಲ್ಡನ್ ಗೋಲು ಮೂಲಕ ಪಂದ್ಯದ ಫಲಿತಾಂಶ ಹೊರ ಹೊಮ್ಮಿತು. ಕಾಲ್ಸ್ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ ಗೋಲ್ಡನ್ ಗೋಲು ಮೂಲಕ 7-6 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಕಪ್ ಗೆದ್ದುಕೊಂಡಿತು.
ನಿಗದಿತ ಸಮಯದಲ್ಲಿ 2-2 ಗೋಲುಗಳ ಸಮನಾಂತರದ ಫಲಿತಾಂಶ ಬಂದಿತ್ತು. ಕಾಲ್ಸ್ ಪರ 15 ನೇ ನಿಮಿಷದಲ್ಲಿ ರಿನಿತ್, 54 ನೇ ನಿಮಿಷದಲ್ಲಿ ನಿಯಾನ್ ಗೋಲು ಬಾರಿಸಿದರು. ಕಾಪ್ಸ್ನ ಲೆನ್ ಅಯ್ಯಪ್ಪ 35 ಹಾಗೂ 50 ನೇ ನಿಮಿಷದಲ್ಲಿ 2 ಗೋಲು ಗಳಿಸಿಕೊಟ್ಟರು.
ಶೂಟೌಟ್ನಲ್ಲಿ ಕಾಲ್ಸ್ ಪರ ಪ್ರತಿಕ್ 2 ಗೋಲು (ಗೋಲ್ಡನ್ ಸೇರಿಸಿ) ಹೊಡೆದು ಗೆಲುವಿನ ರೂವಾರಿಯಾದರು. ಉಳಿದಂತೆ ನೀಲ್, ತಶ್ವಿನ್, ರಿನೀತ್, ಕಾಪ್ಸ್ ಪರ ಪ್ರಣವ್, ಚೆಂಗಪ್ಪ, ಲೆನ್, ಪೊನ್ನಣ್ಣ ತಲಾ ಒಂದೊಂದು ಗೋಲು ಹೊಡೆದು ಮಿಂಚಿದರು.
ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಬೆಂಗಳೂರು ಬಾಲ್ಡ್ವಿನ್ಸ್ ತಂಡವು ಮಡಿಕೇರಿ ಜನರಲ್ ತಿಮ್ಮಯ್ಯ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿ 3ನೇ ಸ್ಥಾನ ಅಲಂಕರಿಸಿತು. ಬಾಲ್ಡ್ ಪರ 15 ನೇ ನಿಮಿಷದಲ್ಲಿ ಶ್ರೇಯಸ್, 29 ರಲ್ಲಿ ದೀಪಕ್ ಗೋಲಿನ ಗುರಿ ಸಾಧಿಸಿದರು.
ಒಂದನೇ ಸೆಮಿ ಫೈನಲ್ನಲ್ಲಿ ಕಾಪ್ಸ್ ತಂಡವು ಬಾಲ್ಡ್ವಿನ್ಸ್ ತಂಡವನ್ನು 5-0 ಗೋಲುಗಳಿಂದ ಮಣಿಸಿತು. ಕಾಪ್ಸ್ ಪರ 3 ಹಾಗೂ 11ನೇ ನಿಮಿಷಗಳಲ್ಲಿ ಪ್ರಣವ್, 21 ಹಾಗೂ 26ರಲ್ಲಿ ತಶಿನ್ ತಲಾ 2 ಗೋಲು, 20 ಲೆನ್ ಅಯ್ಯಪ್ಪ ಒಂದು ಗೋಲು ಹೊಡೆದರು.
ಎರಡನೇ ಸೆಮಿ ಫೈನಲ್ನಲ್ಲಿ ಕಾಲ್ಸ್ ತಂಡವು ಜನರಲ್ ತಿಮ್ಮಯ್ಯ ತಂಡವನ್ನು 6-0 ಗೋಲುಗಳಿಂದ ಮಣಿಸಿತು. 54ನೇ ಸೆಕೆಂಡ್ನಲ್ಲಿ ಕಾಲ್ಸ್ ಪರ ತಶ್ವಿನ್ 1 ಗೋಲು ಹೊಡೆದು ಮಿಂಚಿದಲ್ಲದೆ, 3, 9, 10ನೇ ನಿಮಿಷಗಳಲ್ಲಿ ಮತ್ತೆ 3 ಗೋಲು ಹೊಡೆದರು. ತಂಡಕ್ಕೆ 4 ಗೋಲುಗಳ ಕಾಣಿಕೆ ನೀಡಿದರು. ಉಳಿದಂತೆ 15ರಲ್ಲಿ ರಿನೀತ್, 19ರಲ್ಲಿ ಶ್ರವಣ್ ತಲಾ ಒಂದೊಂದು ಗೋಲು ಗಳಿಸಿದರು.
7 ಗೋಲುಗಳ ಸರದಾರ
ತುನುಷ್ ಕುಟ್ಟಣ್ಣ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ತಂಡದ ಆಟಗಾರ ತನುಷ್ ಕುಟ್ಟಣ್ಣ 7 ಗೋಲು ಹೊಡೆದು ಮೈದಾನದಲ್ಲಿ ಸಂಚಲನ ಮೂಡಿಸಿದರು. ತಂಡ ಬಾರಿಸಿದ 7 ಗೋಲುಗಳ ಸರದಾರ ಕೂಡ ಇವರೇ ಆದರು. ಈ ಪಂದ್ಯದಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ತಂಡವು ಬೆಂಗಳೂರು ಚಿನ್ಮಯ ತಂಡವನ್ನು 7-0 ಗೋಲುಗಳ ಅಂತರದಲ್ಲಿ ಮಣಿಸಿತು.
ಬೆಂಗಳೂರು ಬಾಲ್ಡ್ವಿನ್ಸ್ ತಂಡವು ಬೆಂಗಳೂರು ತ್ರಿವೇಣಿ ಪಬ್ಲಿಕ್ ಸ್ಕೂಲ್ ತಂಡವನ್ನು 4-0 ಅಂತರದಲ್ಲಿ ಸೋಲಿಸಿತು. ಬಾಲ್ಡ್ ಪರ 3ನೇ ನಿಮಿಷದಲ್ಲಿ ಶ್ರೇಯಸ್, 18ರಲ್ಲಿ ರಿಯಾನ್, 23 ಹಾಗೂ 26ರಲ್ಲಿ ದೀಪಕ್ ಗೋಲು ಹೊಡೆದರು.
ಸಿಐಎಸ್ಇ ವೀಕ್ಷಕ ಫ್ಲೊರೆನ್ಸ್, ಕರುಂಬಯ್ಯಾಸ್ ಅಕಾಡೆಮಿ ಫಾರ್ ಲರ್ನಿಂಗ್ ಅಯಿಂಡ್ ಸ್ಪೋಟ್ಸ್ ಅಕಾಡೆಮಿ ಮುಖ್ಯಸ್ಥ ದತ್ತ ಕರುಂಬಯ್ಯ, ಅಶ್ವಿನಿ ಸ್ಪೋಟ್ಸ್ ಫೌಡೇಶನ್ ಟ್ರಸ್ಟಿ ಅಶ್ವಿನಿ ನಾಚಪ್ಪ, ಕಾಲ್ಸ್ ಪ್ರಾಂಶುಪಾಲ ಗೌರಮ್ಮ ನಂಜಪ್ಪ, ಕಾಪ್ಸ್ ಪ್ರಾಂಶುಪಾಲ ಬೆನ್ನಿಕುರಿಕೋಸ್ ಬಹುಮಾನ ವಿತರಿಸಿದರು. ತೀರ್ಪುಗಾರರುಗಳಾಗಿ ಚೆಕ್ಕೇರ ಆದರ್ಶ್, ಚೇಂದೀರ ಡ್ಯಾನಿ ಈರಪ್ಪ, ಮಿಲನ್, ಡ್ಯಾನಿ ಕಾರ್ಯನಿರ್ವಹಿಸಿದರು.
ವರದಿ - ಸುದ್ದಿಪುತ್ರ