ಪೊನ್ನಂಪೇಟೆ, ಸೆ. 2: ಹಿಂದೆಂದೂ ಕಂಡರಿಯದಷ್ಟು ಪ್ರಕೃತಿ ವಿಕೋಪದ ದುರಂತಕ್ಕೆ ಸಾಕ್ಷಿಯಾದ ಕೊಡಗು ಜಿಲ್ಲೆಯಲ್ಲಿ ಇದೀಗ ನೆರೆ ಪÀರಿಹಾರ ಯೋಜನೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಆದರೆ ಕೆಲವರು ಮಾತ್ರ ಸರಿಯಾಗಿ ಸ್ಪಂದಿಸದೆ ನೆರೆ ಪರಿಹಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಆಪಟ್ಟೀರ ಟಾಟು ಮೊಣ್ಣಪ್ಪ ಅವರು, ಕೆಲವು ಮುಖಂಡರು ತಮ್ಮ ಪಕ್ಷ ರಾಜಕೀಯದ ಮೂಲಕ ಸ್ವಾರ್ಥ ಸಾಧಿಸುವದನ್ನು ಬಿಟ್ಟು ನೆರೆ ಪರಿಹಾರ ಯೋಜನೆ ಕಾರ್ಯದಲ್ಲಿ ಸರಕಾರ ಮತ್ತು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುವಂತೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಪರಿಹಾರ ಹಂಚಿಕೆಯಲ್ಲಿ ಕೊಡಗಿಗೆ ಸಂಬಂಧಿಸಿರುವ ಬಿ.ಜೆ.ಪಿ. ಸಂಸದರು, ಇಬ್ಬರು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರೊಬ್ಬರು ಚುನಾವಣೆಯ ಸಮಯದಲ್ಲಿ ಮಾಡುವ ಪಕ್ಷ ರಾಜಕೀಯವನ್ನೆ ಜಿಲ್ಲೆಯ ಜನತೆ ಸಂಕಷ್ಟದಲ್ಲಿರುವ ಸಮಯದಲ್ಲೂ ಮಾಡುತ್ತಿರುವದು ಸರಿಯಲ್ಲ. ಎಲ್ಲಾ ವಿಚಾರÀದಲ್ಲಿ ಇತರರತ್ತ ಬೊಟ್ಟು ಮಾಡುತ್ತಿರುವ ಈ ಜವಾಬ್ದಾರಿಯುತ ಜನಪ್ರತಿನಿಧಿಗಳು ತಮ್ಮ ಮೇಲಿರುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿರುವದು ಅವರ ಹುದ್ದೆಗೆ ಶೋಭೆ ತರುವದಿಲ್ಲ. ಪ್ರಕೃತಿ ವಿಕೋಪದ ದುರಂತದಿಂದಾಗಿ ಸಂತ್ರಸ್ತರು ಇದೀಗ ಬೀದಿಗೆ ಬಂದಿದ್ದು, ಅವರ ಪುನರ್ವಸತಿ ಯೋಜನೆಯೇ ಮೊದಲ ಆದÀ್ಯತೆಯಾಗಬೇಕು ಎಂದು ಟಾಟು ಮೊಣ್ಣಪ್ಪ ಹೇಳಿದರು
ದೇಶದಾದ್ಯಂತ ಕೇಂದ್ರ ಸರಕಾರ ಕೊಡಗಿನಲ್ಲಿ ಘಟಿಸಿದ ಮಹಾ ದುರಂತವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಪ್ರಕೃತಿ ವಿಕೋಪದ ದುರಂತದಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ಮೊತ್ತದ ಹಾನಿ ಸಂಭವಿಸಿದೆ. ಇದಕ್ಕಾಗಿ ಕೇಂದ್ರ ಸರಕಾರ ರಾಜ್ಯ ಸರಕಾರದ ಪ್ರಸ್ತಾವನೆಗೆ ಕಾಯದೆ ಕೂಡಲೆ ಕನಿಷ್ಟ 200 ಕೋಟಿ ಪರಿಹಾರವನ್ನು ಘೋಷಿಸಬೇಕಿತ್ತು. ಆದರೆ ಕೇಂದ್ರ ಸರಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಆಪಟ್ಟೀರ ಟಾಟು ಮೊಣ್ಣಪ್ಪ ಅವರು, ಜನರ ಕಣ್ಣೊರೆಸುವ ಸಲುವಾಗಿ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರು ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಮಾದ್ಯಮದವರ ಮುಂದೆ ಬಹಿರಂಗವಾಗಿ ತಮ್ಮ ಹುದ್ದೆಯ ಘನತೆಗೆ ಧÀಕ್ಕೆಯಾಗುವಂತೆ ವರ್ತಿಸಿದ್ದು ಸರಿಯಲ್ಲ ಎಂದು ಹೇಳಿದರು.
ಕೊಡಗಿನಲ್ಲಿ ಸಂಭವಿಸಿದ ಅಪಾರ ಪ್ರಮಾಣದ ನಾಶ- ನಷ್ಟದ ಸಮಗ್ರ ವಿವರಣೆಯನ್ನು ಕೊಡಗಿನ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಸರಕಾರಕ್ಕೆ ಮುಟ್ಟಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವದಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಟೀಕಿಸಿರುವ ಟಾಟು ಮೊಣ್ಣಪ್ಪ ಅವರು, ಇನ್ನಾದರೂ ಅವರು ಪ್ರಧಾನಿಗಳನ್ನು ಖುದ್ದು ಭೇಟಿ ಮಾಡಿ ಕೊಡಗಿನ ದುರಂತದ ನೈಜತೆಯನ್ನು ವಿವರಿಸಿ ಹೆಚ್ಚಿನ ಪರಿಹಾರ ಮೊತ್ತವನ್ನು ಬಿಡುಗಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿ. ಇದರಲ್ಲಿ ಯಾವ ರಾಜಕೀಯವನ್ನು ಮಾಡುವ ಅಗತ್ಯವಿಲ್ಲವೆಂದರು.
ಪರಿಸರವಾದಿಗಳು...
ಕೆಲ ಪರಿಸರವಾದಿಗಳು ಕಸ್ತೂರಿರಂಗನ್ ವರದಿ ಪೂರ್ಣವಾಗಿ ಜಾರಿಯಾಗಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಇದು ತೀರಾ ಖಂಡನೀಯ. ಪರಿಸರವಾದಿಗಳು ಕೊಡಗಿನ ಸಾಮಾನ್ಯ ಜನತೆಯ ಬದುಕಿನೊಂದಿಗೆ ಚೆಲ್ಲಾಟವಾಡುವದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ಟಾಟು ಮೊಣ್ಣಪ್ಪ, ಈಗಾಗಲೇ ಜನರ ತೀವ್ರ ವಿರೋಧದ ನಡುವೆಯೂ ಕಸ್ತೂರಿರಂಗನ್ ವರದಿಯ ಕೆಲ ಅಂಶಗಳು ಜಾರಿಯಾಗಿ ಜನತೆ ತೊಂದರೆಗೆ ಒಳಗಾಗಿದ್ದಾರೆ. ಮುಂದೆ ಏನಾದರು ವರದಿ ಪೂರ್ಣವಾಗಿ ಅನುಷ್ಟಾನಗೊಂಡರೆ ಅದರ ನೇರ ಹೊಣೆಗಾರಿಕೆಯನ್ನು ಸಂಸದ ಪ್ರತಾಪ್ ಸಿಂಹ ಅವರೇ ಹೊರಬೇಕಾಗುತ್ತದೆ. ಇದರ ಪರಿಣಾಮವನ್ನೂ ಜನತೆಯಿಂದ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಅವರು ಮೂಲತಃ ಕೊಡಗಿನವರಲ್ಲದಿದ್ದರೂ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಕೊಡಗಿನಲ್ಲಿಯೇ ಠಿಕಾಣಿ ಹೂಡಿ ದುರಂತ ಭಾದಿತ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಜಿಲ್ಲೆಯಲ್ಲಿ ಸಂಭವಿಸಿದ ನಷ್ಟದ ಸಮಗ್ರ ವಿವರವನ್ನು ಸರಕಾರಕ್ಕೆ ಮುಟ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಇದೊಂದು ಮಾದರಿ ಸೇವೆ ಎಂದು ಬಣ್ಣಿಸಿರುವ ಟಾಟು ಮೊಣ್ಣಪ್ಪ, ಹೆಚ್ಚು ಹಾನಿಗೊಳಗಾಗಿರುವ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಸಂತ್ರಸ್ತರ ಪೈಕಿ ಬಹುಪಾಲು ಜನರಿಗೆ ಅವರ ಹಿಂದಿನ ವಾಸಸ್ಥಳ ಈ ದುರಂತದಿಂದಾಗಿ ಇದೀಗ ವಾಸಕ್ಕೆ ಯೋಗ್ಯವಲ್ಲದಂತಾಗಿದೆ. ಅವರಿಗೆ ಜಿಲ್ಲಾಡಳಿತ ಬದಲಿ ವ್ಯವಸ್ಥೆಯನ್ನು ತ್ವರಿತಗತಿಯಲ್ಲಿ ಮಾಡಬೇಕು. ಅಲ್ಲದೆ ಮುಖ್ಯವಾಗಿ ನಾಡಹಬ್ಬ ದಸರಾ ಆಚರಣೆಗಾಗಿ ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ಸರಕಾರ ನೀಡುತ್ತಿದ್ದ ಅನುದಾನವನ್ನು ಈ ಬಾರಿ ಕೊಡಗಿನ ಸಂತ್ರಸ್ತರ ಪುನರ್ವತಿ ಯೋಜನೆಗಾಗಿ ವಿನಿಯೋಗಿಸು ವಂತಾಗಲಿ ಎಂದು ಒತ್ತಾಯಿಸಿದ್ದಾರೆ. ಈ ಬಾರಿ ದಸರಾ ಜನೋತ್ಸವವನ್ನು ಆಚರಿಸುವ ಪರಿಸ್ಥಿತಿಯಲ್ಲಿ ಕೊಡಗಿನ ನೊಂದ ಜನ ತಯಾರಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕೆ.ಎಂ.ಅಬ್ದುಲ್ ರಹಿಮಾನ್ (ಬಾಪು) ಅವರು ಮಾತನಾಡಿ, ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ದುರಂತದ ನಂತರ ಇಡೀ ರಾಜ್ಯವೇ ಜಿಲ್ಲೆಗೆ ಸಹಕಾರ ನೀಡಿದೆ. ರಾಜಕೀಯ, ಧರ್ಮ, ಜಾತಿ, ಸಂಘಟನೆಗಳ ಭೇದಭಾವವಿಲ್ಲದೆ ಜನತೆ ಕೈಜೋಡಿಸಿದ್ದಾರೆ. ಆದರೆ ಕೆಲವರು ದುರಂತ ಸಂಭವಿಸಿದ ಸಂದರ್ಭದಲ್ಲೂ ಜಾತೀಯ ಬಣ್ಣ ಹಚ್ಚುತ್ತಿರುವದು ತುಂಬಾ ಬೇಸರದ ವಿಷಯವಾಗಿದೆ. ಇದು ಯಾರಿಗೂ ಶೋಭೆ ತರುವದಿಲ್ಲ. ಬೇರೆಡೆಗಳಿಂದ ಬಂದ ವಸ್ತುಗಳಿಗೆ ಕೆಲವು ಸಂಘಟನೆಗಳ ಲೇಬಲ್ ಹಚ್ಚಿ ತಮಗೆ ಬೇಕಾದ ಸಂತ್ರಸ್ತರಿಗೆ ವಿತರಿಸುವ ಕೆಲಸವಾಗುತ್ತಿದೆ. ಸಂತ್ರಸ್ತರಾಗಿರುವಾಗ ಮನುಷ್ಯ ಮನುಷ್ಯನಂತೆ ಕಂಡು ಮಾನವೀಯತೆ ಮೆರೆಯಬೇಕೇ ಹೊರತು ರಾಜಕೀಯ ಪಕ್ಷದ ಮತ್ತು ಜಾತಿ- ಧರ್ಮದ ದೃಷ್ಟಿಯಲ್ಲಿ ನೋಡುವಂತಾಗಬಾರದು. ಕೊಡಗಿನ ಈ ಪ್ರಕೃತಿ ದುರಂತವನ್ನು ರಾಜ್ಯದ ಜನತೆ ಮನುಷ್ಯತ್ವದ ಆಧಾರದಲ್ಲೆ ನೋಡಿ ಕೊಡಗಿನ ಜನರ ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದಾರೆ ಎಂದರು.