ವರದಿ: ಅಂಚೆಮನೆ ಸುಧಿ

*ಸಿದ್ದಾಪುರ, ಸೆ. 2: ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಹ್ಯ ಗ್ರಾಮದ ಕಾವೇರಿ ನದಿ ತೀರದಲ್ಲಿರುವ ಐತಿಹಾಸಿಕ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನವು ಮರಳು ದಂಧೆಗೆ ಸಿಲುಕಿದ ಪರಿಣಾಮ ದೇವಸ್ಥಾನದ ತಡೆಗೋಡೆ ಜರಿಯಲು ಪ್ರಾರಂಭವಾಗಿದೆ.

ಕಳೆದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ಕಾವೇರಿ ನೀರು ಉಕ್ಕಿ ದೇವಸ್ಥಾನದ ಆವರಣ ಮತ್ತು ಇದಕ್ಕೆ ಸಂಬಂಧಿಸಿದ ಗದ್ದೆಗೆ ನೀರು ನುಗ್ಗಿದರೂ ದೇವಸ್ಥಾನಕ್ಕೆ ಯಾವದೇ ಆತಂಕ ಇರಲಿಲ್ಲ. ಆದರೇ ಇತ್ತೀಚೆಗೆ ಈ ವ್ಯಾಪ್ತಿಯಲ್ಲಿ ಅಕ್ರಮ ಮರಳು ಹನನ ಅಧಿಕಗೊಂಡ ಪರಿಣಾಮ ಮತ್ತು ಸ್ಥಳೀಯ ಅಕ್ರಮ ಮರಳು ಲೂಟಿಕೋರರು ದೇವಸ್ಥಾನದ ತಡೆಗೋಡೆ ಬಳಿಯೇ ಮರಳು ಹನನವನ್ನು ಅವ್ಯಾಹತವಾಗಿ ನಡೆಸಿದ ಪರಿಣಾಮ ರಭಸದಿಂದ ಬರುವ ನೀರಿನ ಅಲೆಗಳು ನೇರ ದೇವಸ್ಥಾನದ ಗೋಡೆಗೆ ಅಪ್ಪಳಿಸಿ ದೇವಸ್ಥಾನದ ಅಡಿಪಾಯವೇ ಬಿರುಕು ಬಿಟ್ಟು ಕುಸಿಯುವ ಹಂತಕ್ಕೆ ತಲುಪಿದೆ.

ಗುಹ್ಯ ಗ್ರಾಮ, ನದಿಯ ಆಚೆಗೆ ಇರುವ ನೆಲ್ಯಹುದಿಕೇರಿ ಗ್ರಾಮ ಮತ್ತು ಗುಹ್ಯ ಗ್ರಾಮಕ್ಕೆ ಹೊಂದಿಕೊಂಡಿರುವ ಕಕ್ಕಟ್ಟಕಾಡು ಪ್ರದೇಶದ ಕೆಲವರು ರಾತ್ರಿಗಳಲ್ಲಿ ಟ್ಯೂಬ್ ಬಳಸಿ ಅವ್ಯಾಹತವಾಗಿ ಮರಳು ದಂಧೆಯಲ್ಲಿ ತೊಡಗಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರು ತಿಳಿಸಿದ್ದಾರೆ. ಕೆಲ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರ ಬೆಂಬಲಿಗರೇ ಇಲ್ಲಿ ಮರಳು ಹನನದಲ್ಲಿ ತೊಡಗಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಕಕ್ಕಟ್ಟಕಾಡು ಗ್ರಾಮಕ್ಕೆ ತೆರಳುವ ರಸ್ತೆ ಅಗಲೀಕರಣಗೊಂಡರೆ ಹೆಚ್ಚಿನ ಮರಳು ದಂಧೆ ನಡೆಯುವದರಿಂದ ರಸ್ತೆಯನ್ನು ಯಥಾಸ್ಥಿತಿ ಕಾಪಾಡುವದರ ಮೂಲಕ ಅಗಸ್ತ್ಯೇಶ್ವರ ಮುನಿ ಸ್ಥಾಪಿಸಿರುವ ಪಾರಂಪರಿಕ ತಾಣವಾದ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನವನ್ನು ರಕ್ಷಿಸಲ್ಪಡಬೇಕು ಎಂದು ಸ್ಥಳೀಯ ಬೆಳೆಗಾರರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.