ಸುಂಟಿಕೊಪ್ಪ, ಸೆ. 2: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೆರವಿನೊಂದಿಗೆ ತಾ. 1 ರಿಂದ ದೇಶಾದ್ಯಂತ ಶಾಲಾ ಹಂತದಲ್ಲಿ ‘ಸ್ವಚ್ಛತಾ ಪಖ್ವಾಡ' ಕಾರ್ಯಕ್ರಮದಡಿ ಶಾಲಾ ಮಕ್ಕಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಶನಿವಾರ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ‘ಸ್ವಚ್ಛತಾ ಶಪಥ ದಿನ' ಆಚರಿಸಲಾಯಿತು.

ಮಕ್ಕಳಿಗೆ ಸ್ವಚ್ಛತೆ ಕುರಿತು ಸಂದೇಶ ನೀಡಿದ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ನಾಗರಾಜಯ್ಯ ಮಾತನಾಡಿ, ತಾ. 1 ರಿಂದ 15 ರತನಕ ಶಾಲಾ ಹಂತದಲ್ಲಿ ನಡೆಯುವ ಸ್ವಚ್ಛತಾ ಪಖ್ವಾಡ' ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಲ್ಲಿ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ, ಪ್ರತಿಯೊಬ್ಬ ಮಗು ವೈಯಕ್ತಿಕವಾಗಿ ಶಾಲೆ, ಸಮೂದಾಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರೇರೇಪಿಸಬೇಕು ಎಂದರು.

ಎಲ್ಲ್ಲ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಮಕ್ಕಳಿಗೆ ಸ್ವಚ್ಚತೆ, ಆರೋಗ್ಯ ಮತ್ತು ನೈರ್ಮಲ್ಯಿಕರಣದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿ, ವಿದ್ಯಾರ್ಥಿಗಳು ವೈಯಕ್ತಿಕ ಶುಚಿತ್ವ ಹಾಗೂ ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್‍ನ ಉಸ್ತುವಾರಿ ಟಿ.ಜಿ. ಪ್ರೇಮಕುಮಾರ್ ಮಕ್ಕಳಿಗೆ 'ಪರಿಸರ ಸ್ವಚ್ಛತೆ'ಯ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಜಿಯಂಪಿ ಶಾಲೆಯ ಮುಖ್ಯ ಶಿಕ್ಷಕಿ ಸಿ.ಎ. ಗೀತಾ, ತಾ.ಪ್ರಾ. ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಸ್.ಕೆ. ಸೌಭಾಗ್ಯ, ಗ್ರಾ.ಪಂ. ಸದಸ್ಯೆ ನಾಗರತ್ನ, ವಿಜ್ಞಾನ ಸಂಘದ ಶಿಕ್ಷಕಿ ಎಂ.ಎನ್. ಲತಾ ಇತರರು ಇದ್ದರು.