ಸೋಮವಾರಪೇಟೆ, ಸೆ. 2: ಹಟ್ಟಿಹೊಳೆಯಿಂದ ಹಾಲೇರಿ, ಮಕ್ಕಂದೂರು ವ್ಯಾಪ್ತಿಯ ರಸ್ತೆಯಲ್ಲಿ ಅಡ್ಡಲಾಗಿ ಉರುಳಿದ್ದ ಸುಮಾರು 150ಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಲಾಗಿದೆ.

ಆ. 16ರಿಂದ ಉಂಟಾದ ಜಲಪ್ರಳಯ, ಬೆಟ್ಟ ಕುಸಿತದಿಂದಾಗಿ ಹಟ್ಟಿಹೊಳೆಯಿಂದ ಮಕ್ಕಂದೂರು ರಸ್ತೆ ಭಾಗಶಃ ಕುಸಿತಗೊಂಡಿದ್ದು, ಕೆಲವೆಡೆಗಳಲ್ಲಿ ಮಾತ್ರ ಡಾಂಬರು ರಸ್ತೆ ಇದೆ. ಉಳಿದೆಡೆ ರಸ್ತೆಯೇ ಕೊಚ್ಚಿಕೊಂಡು ಪ್ರಪಾತ ಸೇರಿದರೆ, ಹಲವೆಡೆಗಳಲ್ಲಿ ಬರೆಕುಸಿತದ ಮಣ್ಣು, ನೂರಾರು ಲೋಡ್‍ಗಟ್ಟಲೆ ರಸ್ತೆಯ ಮೇಲಿದೆ.

ಶಾಸಕ ಅಪ್ಪಚ್ಚು ರಂಜನ್ ಅವರ ಅಂಗರಕ್ಷಕ ಲೋಕೇಶ್ ಅವರು, ಕುಶಾಲನಗರದ ವಲಯ ಅರಣ್ಯಾಧಿಕಾರಿ ಅರುಣ್‍ಕುಮಾರ್ ಅವರ ತಂಡದೊಂದಿಗೆ ತೆರಳಿ ರಸ್ತೆಯ ಮೇಲೆ ಉರುಳಿದ್ದ ಸಿಲ್ವರ್ ಸೇರಿದಂತೆ ಇತರ ಕಾಡು ಜಾತಿಯ ಮರಗಳನ್ನು ರಸ್ತೆಯಿಂದ ತೆರವುಗೊಳಿಸಲು ಶ್ರಮಿಸಿದ್ದು, ಸುಮಾರು 12 ಮಂದಿಯ ತಂಡ 9 ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ.

ಹಟ್ಟಿಹೊಳೆಯ ಸೇತುವೆಯಿಂದ 300 ಮೀಟರ್ ದೂರದಲ್ಲಿ ಸುಮಾರು 800 ಮೀಟರ್‍ನಷ್ಟು ರಸ್ತೆ ಕೊಚ್ಚಿಕೊಂಡು ಹೋಗಿದೆ.

ಹಾಲೇರಿಯಲ್ಲಿರುವ ಶಾಸಕರ ತೋಟದ ಬಳಿ ಸುಮಾರು 100 ಮೀ, ಮಕ್ಕಂದೂರು ಬಾಲಾಜಿ ಎಸ್ಟೇಟ್ ಬಳಿ 80 ಮೀಟರ್, ಹಟ್ಟಿಹೊಳೆ ಚಿತ್ರ ಸುಬ್ಬಯ್ಯ ಅವರ ಮನೆಯಿದ್ದ ಸ್ಥಳದಿಂದ 1 ಕಿ.ಮೀ. ಮುಂದಕ್ಕೆ 100 ಮೀಟರ್‍ನಷ್ಟು ರಸ್ತೆ ಸಂಪೂರ್ಣ ಕಣ್ಮರೆಯಾಗಿದ್ದು, ಕಾಂಡನಕೊಲ್ಲಿಯ ಈಶ್ವರ ದೇವಾಲಯದ ಬಳಿ ಸುಮಾರು 150 ಮೀಟರ್ ದೂರಕ್ಕೆ 15 ಅಡಿಗಳಷ್ಟು ಎತ್ತರದಲ್ಲಿ ಬರೆಕುಸಿತದ ಮಣ್ಣು ನಿಂತಿದೆ. ಉಳಿದಂತೆ ರಸ್ತೆಯ ಒಂದು ಬದಿ ಕುಸಿತಗಳು ಸಾಮಾನ್ಯದಂತಾಗಿದೆ ಎಂದು ಶಾಸಕರ ಅಂಗರಕ್ಷಕ ಲೋಕೇಶ್ ಮಾಹಿತಿ ನೀಡಿದ್ದಾರೆ.