ಕೂಡಿಗೆ: ಅತಿಯಾದ ಮಳೆ, ಬೆಟ್ಟ ಕುಸಿತ ಹಾಗೂ ಜಲ ಪ್ರವಾಹದ ಸಂದರ್ಭ ಮಕ್ಕಂದೂರು ಸಮೀಪದ ತಂತಿಪಾಲ ಗ್ರಾಮದ 11 ಮಂದಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಬೆಟ್ಟ ಹತ್ತಿ ಇಳಿದು ಬರುತ್ತಿದ್ದರು. ಎಂದಿನಂತೆ ಓಡಾಡುತ್ತಿದ್ದ ದಾರಿಯಲ್ಲಿ ಮರಗಳು ಅಡ್ಡಬಿದ್ದು, ದಾರಿ ಕಾಣದೆ ಕಾಡು ದಾರಿಯಲ್ಲಿ ಬರುತ್ತಿದ್ದ ಸಂದರ್ಭ ಕಾಡಿನಂಚಿನಲ್ಲಿ ವಾಸವಿದ್ದ ಜನರು ಸಹ ಮನೆಗಳನ್ನು ಖಾಲಿ ಮಾಡಿ ಬೇರೆಡೆಗೆ ತೆರಳಿದ್ದರು. ಖಾಲಿಯಾಗಿದ್ದ ಮನೆಯು ಬೀಳುವ ಹಂತದಲ್ಲಿತ್ತು. ಪಕ್ಕದಲ್ಲೇ ಬೃಹತ್ ಮರಗಳು ನೆಲಕ್ಕುರುಳಿದ್ದವು. ಇದರ ನಡುವೆ ಜೋರಾಗಿ ಮಳೆ ಸುರಿಯುತ್ತಿತ್ತು. ಬೀಳುವ ಹಂತದಲ್ಲಿದ್ದ ಆ ಮನೆಯೊಳಗೆ ಬೇರೆ ಬೇರೆ ಕುಟುಂಬದ ಒಟ್ಟು 11 ಮಂದಿ ಒಂದು ದಿನ ಕಳೆದಿದ್ದಾರೆ.

ಕಣ್ಣೆದುರೆ ನೆರೆ ಪ್ರವಾಹದಿಂದ ಬೆಟ್ಟವೇ ಕುಸಿಯುತ್ತಿರುವ ಸಂದರ್ಭ 4 ತಿಂಗಳ ಹಿಂದೆ ತಲೆ ಭಾಗದ ಪಾಶ್ರ್ವವಾಯುನಿಂದ (ಬ್ರೇನ್‍ಸ್ಟ್ರೋಕ್) ಬಳಲುತ್ತಿದ್ದ, ನಡೆಯಲು, ಎದ್ದು ನಿಲ್ಲಲೂ ಸಹ ಆಗದಂತಹ ಪರಿಸ್ಥಿತಿಯಲ್ಲಿದ್ದ ತಂತಿಪಾಲದ ಉತ್ತಯ್ಯನವರನ್ನು ಎತ್ತಿಕೊಂಡು, ತಾಯಿಯನ್ನು ಕರೆದುಕೊಂಡು ತಂತಿಪಾಲದಿಂದ 3 ಕಿ.ಮೀ ದೂರದ ಹುಚ್ಚಕಾಡು ಎಂಬಲ್ಲಿಗೆ ಬಂದು ಆ ಮೂವರು ಹಾಗೂ ಜೊತೆಯಲ್ಲಿದ್ದ ಅಜ್ಜಿ ಸೇರಿದಂತೆ 7 ಮಂದಿ ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಕಾಡಿನಂಚಿನಲ್ಲಿದ್ದ ಮನೆಯೊಳಗೆ ಒಂದು ರಾತ್ರಿ ಇಡೀ ಅಲ್ಲೆ ಕಳೆದಿದ್ದಾರೆ. ಬೆಳಗಾದ ನಂತರ ಪುನಃ ಅಂಗವಿಕಲ ತಂದೆಯನ್ನು ಎತ್ತಿಕೊಂಡು ಬೆಟ್ಟವನ್ನು ಏರಿ ಬರುವ ಸಂದರ್ಭ ಬೆಟ್ಟದ ಸಮೀಪದಲ್ಲಿದ್ದ ಮನೆಯವರು ರಸ್ತೆಗೆ ಬರುವ ತನಕ ಸ್ವಲ್ಪ ದೂರದವರೆಗೆ ಒಬ್ಬೊಬ್ಬರಂತೆ ಉತ್ತಯ್ಯ ಅವರನ್ನು ಎತ್ತಿಕೊಂಡು ನಡೆದುಕೊಂಡು ಬರುತ್ತಿದ್ದಂತೆ ಸಹಾಯಕ್ಕೆ ಬಂದ ಆರ್‍ಎಸ್‍ಎಸ್‍ನ ಕಾರ್ಯಕರ್ತರು ಎಲ್ಲರನ್ನು ರಕ್ಷಿಸಿದರು. ನಂತರ ಉತ್ತಯ್ಯ ಅವರನ್ನು ಆರ್‍ಎಸ್‍ಎಸ್ ಕಾರ್ಯಕರ್ತರ ಸಹಕಾರದಿಂದ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ನೆರೆ ಸಂತ್ರಸ್ತರಿಗೆ ಸ್ಥಾಪಿಸಿದ್ದ ಪರಿಹಾರ ಕೇಂದ್ರದಲ್ಲಿ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದ ಉತ್ತಯ್ಯ ಅವರಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ಸಮೀಪದ ಅತ್ತೂರು ಗ್ರಾಮದಲ್ಲಿರುವ ಅತ್ತೆ ಶೋಭ ಎಂಬವರ ಮನೆಗೆ ತಾಯಿ ಗೌರಮ್ಮ ಹಾಗೂ ತಂದೆಯನ್ನು ಕರೆತಂದಿದ್ದು, ಸದ್ಯದ ಮಟ್ಟಿಗೆ ಆಶ್ರಯ ಪಡೆಯುತ್ತಿದ್ದೇವೆ ಎಂದು ತಾವು ಅನುಭವಿಸಿದ ನೋವನ್ನು ಉತ್ತಯ್ಯ ಅವರ ಮಗಳು ಜ್ಯೋತಿ ಕಣ್ಣೀರಿಡುತ್ತಾ ಹೇಳಿದ್ದಾರೆ.

ತಂದೆಗೆ ಚಿಕಿತ್ಸೆ ನೀಡುತ್ತಿದ್ದ ಔಷಧಿಗಳು, ಚಿಕಿತ್ಸೆ ಕೊಡಿಸಿದ ದಾಖಲಾತಿಗಳು, ಮನೆಯಲ್ಲಿದ್ದ ಎಲ್ಲಾ ದಾಖಲಾತಿಗಳು, ವಸ್ತುಗಳು ಎಲ್ಲವನ್ನು ಕಳೆದುಕೊಂಡು ಕೈಯಲ್ಲಿ ಹಣವು ಇಲ್ಲದೆ ತಂದೆಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೇವೆ. ನನ್ನ ಅಕ್ಕ ಬೆಂಗಳೂರು ಮತ್ತು ತಮ್ಮ ಮಂಗಳೂರಿನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿರಾಶ್ರಿತರಾಗಿರುವ ನಮಗೆ ಕೆಲವರು ಹಣ ಸಹಾಯ ನೀಡಿದ್ದು, ನಮ್ಮ ತಂದೆಯವರಿಗೆ ವೀಲ್‍ಚೇರ್ ಅನ್ನು ನೀಡಿ ಸಹಾಯ ಹಸ್ತ ನೀಡುತ್ತಿದ್ದಾರೆ. ಮನೆ, ಜಮೀನು ಕಳೆದುಕೊಂಡು, ತಂದೆಯೂ ಈ ಸ್ಥಿತಿಯಲ್ಲಿ ಇರುವ ನಾವು ಹೇಗೆ ಮುಂದೆ ಜೀವನ ನಡೆಸುವದು ಎಂಬದು ತಿಳಿಯದಾಗಿದೆ ಹೇಗೆ ಎಂದು ಕಣ್ಣೀರಿಡುತ್ತಾ ನುಡಿದರು.