ಮಡಿಕೇರಿ, ಸೆ. 2 ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕಾಗಿ ಶ್ರೀ ಆದಿಚುಂಚನಗಿರಿ ಮಠ ಶ್ರೀ ಕ್ಷೇತ್ರದ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಲು ಇಂದು ಬೆಂಗಳೂರಿನಲ್ಲಿ ‘ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆ ನಡೆಸಲಾಯಿತು.
ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಶಾಸಕರಾದ ವಿ. ಸೋಮಣ್ಣ, ಎಂ. ಕೃಷ್ಣಪ್ಪ, ಕೆ.ಗೋಪಾಲಯ್ಯ, ಮಾಜಿ ಶಾಸಕ ಶಿವರಾಮಗೌಡ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.
ವಿಜಯನಗರದಲ್ಲಿರುವ ಶ್ರೀ ಕ್ಷೇತ್ರದ ಆವರಣದಿಂದ ಆರಂಭಗೊಂಡ ಪಾದಯಾತ್ರೆ ಶನಿಮಹಾತ್ಮ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಮಾಗಡಿ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನ, ವಿಜಯನಗರದ ಮಾರುತಿ ಮಂದಿರದ ಮೂಲಕ ನಡೆದು ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಮುಕ್ತಾಯವಾಯಿತು. ಈ ಪಾದಯಾತ್ರೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಫಾದರ್ಗಳು, ಇಸ್ಲಾಂ ಧರ್ಮದ ಮೌಲ್ವಿಗಳು, ಬೌದ್ಧ ಧರ್ಮದ ಗುರುಗಳು, ಪಾರ್ಸಿ ಸಮುದಾಯದ ಧಾರ್ಮಿಕ ಮುಖಂಡರು ಸೇರಿದಂತೆ ಸರ್ವಧರ್ಮಗಳ ಧಾರ್ಮಿಕ ಮುಖಂಡರು, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಚಲನಚಿತ್ರ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಶಾಸಕ ವಿ. ಸೋಮಣ್ಣ ಅವರು ವೈಯಕ್ತಿಕವಾಗಿ 20 ಲಕ್ಷ ರೂ.ಗಳನ್ನು ನೀಡುವದಾಗಿ ಘೋಷಣೆ ಮಾಡಿದರು. ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ಸದಸ್ಯರಿಂದ 20 ಲಕ್ಷ ರೂ. ದೇಣಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಎಂ. ಕೃಷ್ಣಪ್ಪ 25 ಲಕ್ಷ ರೂ.ಗಳನ್ನು, ಶಾಸಕ ಗೋಪಾಲಯ್ಯ 2 ಲಕ್ಷ ರೂ.ಗಳನ್ನು, ಮಾಜಿ ಉಪಮೇಯರ್ ಎಂ. ಶ್ರೀನಿವಾಸ್ ಅವರು 5ಲಕ್ಷ ರೂ.ವನ್ನು, ಜೆಡಿಎಸ್ನ ಬೆಂಗಳೂರು ನಗರಾಧ್ಯಕ್ಷ ಪ್ರಕಾಶ್ 50ಸಾವಿರ, ಶಿಡ್ಲಘಟ್ಟ ಒಕ್ಕಲಿಗರ ಸಂಘದಿಂದ 10ಸಾವಿರ ರೂ. ದೇಣಿಗೆಯನ್ನು ಆರಂಭದಲ್ಲಿ ಶ್ರೀಗಳ ಮೂಲಕ ಕೊಡಗು ಸಂತ್ರಸ್ತರಿಗಾಗಿ ಅರ್ಪಿಸಿದರು.