ಮಡಿಕೇರಿ, ಸೆ. 2: ನಗರದ ಗೆಜ್ಜೆ ಸಂಗಪ್ಪ ಅನುಭವ ಮಂಟಪದಲ್ಲಿ ಆಶ್ರಯ ಪಡೆದಿದ್ದ ನೂರಕ್ಕೂ ಹೆಚ್ಚು ಸಂತ್ರಸ್ತರು ಮನೆ, ಲೈನ್‍ಮನೆ ಹಾಗೂ ನೆಂಟರ ಮನೆಗಳಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದ್ದು, ಸಂತ್ರಸ್ತರನ್ನು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.

ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರು ಕಳೆದ ಆ. 16ರಿಂದ ಇಲ್ಲಿ ಆಶ್ರಯ ಪಡೆದುಕೊಂಡಿದ್ದರು. ಇವರಿಗೆ ಜಿಲ್ಲಾಡಳಿತ, ಸೇವಾ ಭಾರತಿ, ಗೆಜ್ಜೆ ಸಂಗಪ್ಪ ಸಮಿತಿ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗಿತ್ತು. ಇದೀಗ ಸಂತ್ರಸ್ತರು ತಮ್ಮ ಬಂಧುಗಳ ಮನೆಯಲ್ಲಿ ಆಶ್ರಯ ಪಡೆಯಲು ನಿರ್ಧರಿಸಿದ್ದಾರೆ.

ಸೇವಾ ಭಾರತಿ ಮುಖ್ಯಸ್ಥ ಮಹೇಶ್ ಮಾತನಾಡಿ, ಪ್ರಕೃತಿ ಮುನ್ಸೂಚನೆ ನೀಡಿದ್ದರಿಂದಲೇ ಎಲ್ಲರೂ ಮನೆ ಬಿಟ್ಟು ಓಡಿ ಬರಲು ಸಾಧ್ಯವಾಯಿತು. ಮಾನವೀಯತೆ ನೆಲೆಯಲ್ಲಿ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಕಾರಿ ನೀಡಿದರು. ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರದ ಹಂತದಲ್ಲಿ ಪರಿಹಾರ ದೊರಕಬೇಕು ಎಂದು ಹೇಳಿದರು.

ಸೇವಾ ಭಾರತಿ ಸಂಸ್ಥೆ ಆ. 16 ರಂದು ಬೆಳಿಗ್ಗೆ ತುರ್ತು ಸಭೆ ಕರೆದು ಶಿಬಿರಕ್ಕೆ ಏರ್ಪಾಡು ಮಾಡಿತು. ಆಸ್ತಿಪಾಸ್ತಿ ಎಲ್ಲವೂ ಕಳೆದುಕೊಂಡು ನಿರಾಶ್ರಿತರಾಗಿದ್ದವರು, ವಯಸ್ಸಾದವರಿಗೆ ಊಟ ವಸತಿ ಕಲ್ಪಿಸಲಾಯಿತು. ನಂತರ, ಜಿಲ್ಲಾಡಳಿತ ಸೌಲಭ್ಯ ಕಲ್ಪಿಸುತ್ತಿದೆ ಎಂದು ಹೇಳಿದರು.

ಕಾಲೂರಿನ ನಿರಾಶ್ರಿತ ಪುರುಷೋತಮ್ ಮಾತನಾಡಿ, ಮಹಾಮಳೆಗೆ ಗ್ರಾಮಕ್ಕೆ ಗ್ರಾಮವೇ ಕಳೆದುಹೋಗಿದೆ. ಮನೆ ಸೇರಿದಂತೆ ಜಾನುವಾರು ಹಾಗೂ ಕೃಷಿ ಭೂಮಿ ಕಳೆದುಕೊಂಡ ನಮಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಜತೆಗೆ ಪರಿಹಾರ ಕೇಂದ್ರದಲ್ಲಿ ಉತ್ತಮ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಹೇಳಿದರು.

ಬೀಳ್ಕೋಡುಗೆ ಸಮಾರಂಭದಲ್ಲಿ ನಗರಸಭೆ ಸದಸ್ಯರಾದ ಸವಿತಾ ರಾಕೇಶ್, ಅನಿತಾ ಪೂವಯ್ಯ, ಮಡಿಕೇರಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಕೆ. ದಾಮೋದರ್, ಸೇವಾ ಭಾರತಿ ಸಂಸ್ಥೆಯ ಅಜಯ್, ರುದ್ರ ಪ್ರಸನ್ನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಪ್ರಮುಖರಾದ ಬೇಬಿ ಮ್ಯಾಥ್ಯು ಹಾಜರಿದ್ದರು.