ಮಡಿಕೇರಿ, ಸೆ. 2: ಕಳೆದ 20 ದಿನಗಳ ಹಿಂದೆ ಸಂಪರ್ಕ ಕಡಿದುಕೊಂಡಿದ್ದ ಗಾಳಿಬೀಡು - ಕಾಲೂರು ಮಾರ್ಗ, ದೇವಸ್ತೂರು - ಮಡಿಕೇರಿ ರಸ್ತೆ ಹಾಗೂ ಬೇರೆಬೆಳ್ಳಚ್ಚು - ಕಾಲೂರು ಸಂಪರ್ಕ ರಸ್ತೆಗಳಲ್ಲಿ ಸಮರೋಪಾದಿಯಲ್ಲಿ ಮಣ್ಣು ತೆರವುಗೊಳಿಸಿ ಸಂಪರ್ಕ ಕಲ್ಪಿಸಲಾಯಿತು. ತಮ್ಮ ಹುಟ್ಟೂರಿನಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡಿರುವ ಗದ್ದೆ ಬಯಲು, ತೋಟ ಹಾಗೂ ಗುಡ್ಡಗಳ ಕುಸಿತವನ್ನು ಕಣ್ಣಾರೆ ಕಂಡು ಶಾಸಕ ಕೆ.ಜಿ. ಬೋಪಯ್ಯ ಅವರು ಅರೆಕ್ಷಣ ಗದ್ಗದಿತರಾದರು.
ಇಲ್ಲಿನ ಅಬ್ಬಿಪಾಲ್ಸ್ ಮಾರ್ಗದಿಂದ ದೇವಸ್ತೂರು ಮುಖಾಂತರ ಮಾಂದಲಪಟ್ಟಿಯತ್ತ ಸಾಗುವ ರಸ್ತೆ ಮಾರ್ಗದ ಹತ್ತಾರು ಕಡೆಗಳಲ್ಲಿ ಇಡೀ ಗುಡ್ಡಗಳು ಅತಿಕ್ರಮಿಸಿಕೊಂಡಿದ್ದನ್ನು ಜೆಸಿಬಿ ಹಾಗೂ ಇಟಚಿ ಯಂತ್ರಗಳ ಮೂಲಕ ತೆರವುಗೊಳಿಸಿ, ಕಳೆದ ಸುಮಾರು 20 ದಿನಗಳ ಬಳಿಕ ಮರು ಸಂಪರ್ಕ ಕಲ್ಪಿಸಲಾಯಿತು. ಅಂತೆಯೇ ಗಾಳಿಬೀಡುವಿನಿಂದ ನಿಡುವಟ್ಟು, ಕಾಲೂರು, ಬೇರೆಬೆಳ್ಳಚ್ಚು ಗ್ರಾಮಗಳಿಗೆ ಬೆಟ್ಟಸಾಲುಗಳ ನಡುವೆ ಭೂಕುಸಿತ ತೆರವುಗೊಳಿಸಿ ಸಂಚಾರ ವ್ಯವಸ್ಥೆ ಕಲ್ಪಿಸಲಾಯಿತು.ಗ್ರಾಮೀಣ ಭಾಗಕ್ಕೆ ಜೀಪುಗಳು (ಫೋರ್‍ವ್ಹೀಲ್) ತೆರಳುವಷ್ಟರ ಮಟ್ಟಿಗೆ ಇಂದು ಸಂಪರ್ಕ ಸಾಧಿಸಲು ಸಾಧ್ಯವಾಗುವದರೊಂದಿಗೆ, ವೀರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಕೆ.ಜಿ. ಬೋಪಯ್ಯ ದುಃಖಿತರಾದರು. ಮರುಕ್ಷಣ ಸುಧಾರಿಸಿಕೊಂಡು ತಮ್ಮ ಊರಿನವರಿಗೆ ತಾವೇ ಧೈರ್ಯ ತುಂಬಿದರು.
ಆ ಮುನ್ನ ಮಕ್ಕಂದೂರುವಿನ ಹೆಮ್ಮೆತ್ತಾಳು, ನಿಡುವಟ್ಟು, ತಂತಿಪಾಲ, ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಅಪಾರ ಪ್ರಮಾಣದ ಹಾನಿಯನ್ನು ವೀಕ್ಷಿಸಿದ ಅವರು, ಅಪಾಯದಲ್ಲಿ (ಮೊದಲ ಪುಟದಿಂದ) ಸಿಲುಕಿ ಸಂತ್ರಸ್ತರಾಗಿರುವ ಕುಟುಂಬಸ್ಥರನ್ನು ಸಂತೈಸುತ್ತಾ, ಸರಕಾರದಿಂದ ನ್ಯಾಯಯುತ ಪರಿಹಾರ ಕಲ್ಪಿಸಿಕೊಡಲಾಗುವದು ಎಂದು ಭರವಸೆ ನೀಡಿದರು.
ಗಾಳಿಬೀಡು - ಕಾಲೂರು ನಡುವೆ ನಿಡುವಟ್ಟು ಗ್ರಾಮದ ‘ಗುಮ್ಮನಗೂಡ್’ ಬೆಟ್ಟ ಕುಸಿತದಿಂದ ಎದುರಾಗಿರುವ ಅತಿವೃಷ್ಟಿ ಹಾನಿ ಕಂಡು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡ ಶಾಸಕರು, ಅಕ್ಷರಶಃ ಮಗುವಿನಂತೆ ಗ್ರಾಮಸ್ಥರೊಂದಿಗೆ ಉಮ್ಮಳಿಸಿದ ದುಃಖದೊಂದಿಗೆ ಮಾತನಾಡಲು ಪರಿತಪಿಸಿದ ದೃಶ್ಯ ಎದುರಾಯಿತು.
ಬದಲಾಯಿಸಿದ ನಿರ್ಧಾರ : ಗ್ರಾಮದ ಹಿರಿಯ ಎ.ಟಿ. ಮಾದಪ್ಪ ಮಾತನಾಡಿ, ಇದುವರೆಗೆ ಊರಿನ ಸಂಪರ್ಕ ಕಡಿದುಕೊಂಡಿದ್ದು, ಇಂದು ಕಾಲೂರು ಗ್ರಾಮ ದೇವಾಲಯ ಅರ್ಚಕ ಕುಟುಂಬದ ನಾಗೇಶ್ ಕಾಲೂರು ಹಾಗೂ ಗ್ರಾಮಸ್ಥರು ವಿಶೇಷ ಪ್ರಾರ್ಥನೆಯೊಂದಿಗೆ ದೇವಿಯ ಮೊರೆ ಹೊಕ್ಕಿದ್ದಾಗಿ ವಿವರಿಸಿದರು. ಕಳೆದ 15 ದಿನಗಳಿಂದ ಗ್ರಾಮ ತೊರೆಯಲು ನಿರ್ಧರಿಸಿದ್ದ ತಾವೆಲ್ಲರೂ, ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ಗ್ರಾಮ ಬಿಟ್ಟು ತತ್ಕಾಲಕ್ಕೆ ಹೋಗದಿರಲು ತೀರ್ಮಾನ ತೆಗೆದುಕೊಂಡಿದ್ದಾಗಿ ಮಾರ್ನುಡಿದರು.
ಶಾಸಕರಿಂದ ಭರವಸೆ : ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮ ತೊರೆಯದೆ, ದೇವರ ದಯೆಯಿಂದ ಕಾಲೂರು ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಯಾವದೇ ಪ್ರಾಣಹಾನಿ ಸಂಭವಿಸದಿರುವದು ಸೌಭಾಗ್ಯವೆಂದು ತಿಳಿದು, ಕೃಷಿಗದ್ದೆ, ಮನೆ, ಕಾಫಿ ಫಸಲು ಇತ್ಯಾದಿ ಹಾನಿ ಬಗ್ಗೆ ಸರಕಾರದಿಂದ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಕೆ.ಜಿ. ಬೋಪಯ್ಯ ಧೈರ್ಯ ತುಂಬಿದರು.
ಮರಳಿ ಮನೆಗೆ : ಮಳೆ ದೂರವಾಗಿರುವ ಹಿನ್ನೆಲೆ ಸದ್ಯ ಗ್ರಾಮಗಳಲ್ಲಿ ಇನ್ನು ವಾಸವಿರುವವರು ಸೇರಿದಂತೆ, ಊರು ತೊರೆದಿರುವ ಪ್ರತಿ ಕುಟುಂಬಗಳ ಸಮೀಕ್ಷೆ ನಡೆಸಿ ನಷ್ಟದ ಅಂದಾಜು ಬಗ್ಗೆ ಮಾಹಿತಿ ಕಲೆ ಹಾಕುವಂತೆ ಶಾಸಕರು, ತಮ್ಮ ಜತೆಗಿದ್ದ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ ಸೋಮಯ್ಯ ಅವರಿಗೆ ಸಲಹೆ ನೀಡಿದರು. ಶಾಸಕರೊಂದಿಗೆ ಬಿಜೆಪಿ ಯುವಮೋರ್ಜಾ ಪದಾಧಿಕಾರಿಗಳಾದ ಪೊನ್ನಚನ ಮಧು ಹಾಗೂ ಕಡ್ಲೆರ ಕೀರ್ತನ್ ಹಾಜರಿದ್ದರು.