ಮಡಿಕೇರಿ, ಸೆ. 2: ಹದಿನೆಂಟನೇ ಏಷ್ಯನ್ ಗೇಮ್ಸ್‍ನಲ್ಲಿ ಭಾರತ ದೇಶ ಹೊಸ ಇತಿಹಾಸವನ್ನು ಬರೆದಿದೆ. 15 ಚಿನ್ನ 24 ಬೆಳ್ಳಿ 30 ಕಂಚಿನ ಪದಕದೊಂದಿಗೆ ಒಟ್ಟು 69 ಪದಕಗಳನ್ನು ಪಡೆಯುವ ಮೂಲಕ ದೇಶ ದಾಖಲೆ ಸೃಷ್ಟಿಸಿದೆ. 2010ರಲ್ಲಿ ಒಟ್ಟು 65 ಪದಕಗಳಿಸಿರುವದು ಭಾರತದ ಈ ಹಿಂದಿನ ಸಾಧನೆಯಾಗಿತ್ತು. 1951ರಲ್ಲಿ 15 ಚಿನ್ನದ ಪದಕಗಳಿಸಿದ್ದ ಸಾಧನೆಯ ಬಳಿಕ ಭಾರತಕ್ಕೆ ಮತ್ತೆ ಇಷ್ಟು ಚಿನ್ನದ ಪದಕ ದೊರೆತಿರಲಿಲ್ಲ. ಈ ಬಾರಿ 67 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇಶ ಮತ್ತೊಮ್ಮೆ 15 ಚಿನ್ನದ ಪದಕಕ್ಕೆ ಕೊರಳೊಡ್ಡಿರುವದು ಕೂಡ ಮತ್ತೊಂದು ಐತಿಹ್ಯ. 45 ರಾಷ್ಟ್ರಗಳು 11,720 ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಕ್ರೀಡಾಕೂಟ ಭಾರತ ಮಾತ್ರವಲ್ಲದೆ ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗು ಜಿಲ್ಲೆಗೂ ಕೂಡ ಸ್ಮರಣೀಯವಾದದ್ದು.ಕೊಡಗು ಜಿಲ್ಲೆ ಈ ಬಾರಿ ಸಂಭವಿಸಿದ ಕಂಡು ಕೇಳರಿಯದ ಪ್ರಾಕೃತಿಕ ದುರಂತದಿಂದ ತತ್ತರಿಸಿದೆಯಾದರೂ ಕ್ರೀಡಾ ಜಿಲ್ಲೆ ಎಂಬ ಹೆಸರನ್ನು ಹೊಂದಿರುವ ಕಾವೇರಿ ಹರಸಿದ ಈ ಮಣ್ಣಿನ ಕ್ರೀಡಾ ಕಲಿಗಳು ನೋವಿನ ನಡುವೆಯೂ ಕೊಡಗಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಈ ಮೂಲಕ ಕ್ರೀಡಾ ಜಿಲ್ಲೆ ಎಂಬ ಖ್ಯಾತಿ ಈ ಮಣ್ಣಿಗಿದೆ ಎಂಬದನ್ನು ಸಾಬೀತು ಪಡಿಸಿದ್ದಾರೆ.
ಹೌದು ಇಂಡೋನೇಷಿಯಾದ ಜಕಾರ್ತದಲ್ಲಿ ಹದಿನೈದು ದಿನಗಳ ಕಾಲ ಜರುಗಿದ 2018ರ ಏಷ್ಯನ್ ಗೇಮ್ಸ್‍ನಲ್ಲಿ ಕೊಡಗು ಜಿಲ್ಲೆಯ ಮಿಂಚೂ ಹರಿದಿದೆ. ಈ ನೆಲದಲ್ಲಿ ಜನ್ಮವೆತ್ತಿದ ಒಟ್ಟು ಏಳು ಮಂದಿ ಈ ಬಾರಿ ದೇಶವನ್ನು ಪ್ರತಿನಿಧಿಸಿದ್ದಾರೆ. ಈ ಏಳು ಮಂದಿಯ ಪೈಕಿ. ಆರು ಕ್ರೀಡಾಪಟುಗಳು ದೇಶಕ್ಕೆ ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬರು ಪದಕ ಪಡೆಯುವಲ್ಲಿ ವಂಚಿತರಾದರೂ ಈ ಕ್ರೀಡೆಯಲ್ಲಿ ದೇಶ ಈತನಕ ಮಾಡಿರದಿದ್ದ ಸಾಧನೆ ತೋರುವಲ್ಲಿ ಶ್ರಮ ವಹಿಸಿದ್ದಾರೆ.
ಇದರೊಂದಿಗೆ ಇಲ್ಲಿ ಗಮನಾರ್ಹವಾಗಿರುವ ಮತ್ತೊಂದು ಅಂಶವೂ ಒಳಗೊಂಡಿದೆ. ದೇಶದ ಜನಸಂಖ್ಯೆಯಲ್ಲಿ ಕೇವಲ ಎರಡು ಲಕ್ಷದಷ್ಟು ಅಂದಾಜು ಜನಸಂಖ್ಯೆ ಹೊಂದಿರುವ ಜನಾಂಗ ಕೊಡವ ಜನಾಂಗವಾಗಿದೆ. ಅತ್ಯಲ್ಪ ಜನಸಂಖ್ಯೆ ಹೊಂದಿರುವ ಈ ಜನಾಂಗಕ್ಕೆ ಸೇರಿದವರಾದ ಐದು ಮಂದಿ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಈ ಐವರ ಪೈಕಿ ನಾಲ್ವರು ಪದಕದ ಸಾಧನೆಯನ್ನು ಮಾಡಿದ್ದಾರೆ. ಅದರಲ್ಲೂ ಇಬ್ಬರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರೆ, ಮತ್ತೊಬ್ಬರು ಬೆಳ್ಳಿ ಹಾಗೂ ಇನ್ನೋರ್ವ ಕ್ರೀಡಾಪಟು ಈ ತನಕ ರಾಜ್ಯ ಅಥವಾ ಜಿಲ್ಲೆಯಲ್ಲಿ ಯಾರೂ ಸಾಧನೆ ಮಾಡಿರದಿದ್ದ ಸಾಹಸಮಯವಾದ ಮತ್ತೊಂದು ಕ್ರೀಡೆಯಾದ ‘ಸೈಲಿಂಗ್’ ನಲ್ಲಿ ದೇಶಕ್ಕೆ ಕಂಚಿನ ಪದಕಗಳಿಸಿಕೊಟ್ಟಿರುವದು ಕ್ರೀಡೆಯಲ್ಲಿ ಹೊಸತೊಂದು ಆವಿಷ್ಕಾರವಾಗಿದೆ.
(ಮೊದಲ ಪುಟದಿಂದ) ಇದೂ ಕೂಡ ದೇಶದ ಈ ಬಾರಿಯ ಸಾಧನೆಯಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದ್ದರೆ, ಜಿಲ್ಲೆಯ ಇನ್ನಿಬ್ಬರು ಕ್ರೀಡಾಪಟುಗಳು ದೇಶದ ಪದಕ ಬೇಟೆಯಲ್ಲಿ ಹುರಿಯಾಳುಗಳಾಗಿದ್ದಾರೆ.
ಯಾವ್ಯಾವ ಕ್ರೀಡೆಗಳು
ಏಷ್ಯನ್ ಗೇಮ್ಸ್‍ನಲ್ಲಿ ಕೊಡಗು ಹಾಗೂ ಕೊಡಗು ಮೂಲದವರಾದ ಏಳು ಮಂದಿ ಕ್ರೀಡಾಪಟುಗಳು ಭಾಗಿಯಾಗಿದ್ದಾರೆ . ಟೆನ್ನಿಸ್, ಬ್ಯಾಡ್‍ಮಿಂಟನ್, ಅಥ್ಲೆಟಿಕ್ಸ್, ಸ್ಕ್ವಾಷ್ ಸೈಲಿಂಗ್ ಹಾಗೂ ಹಾಕಿಯಲ್ಲಿ ಇವರುಗಳು ದೇಶವನ್ನು ಪ್ರತಿನಿಧಿಸಿದ್ದಾರೆ.
ಸ್ಪರ್ಧಿಗಳು
ಟೆನ್ನಿಸ್‍ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ, ಬ್ಯಾಡ್‍ಮಿಂಟನ್‍ನಲ್ಲಿ ಮಾಚಿಮಂಡ ಅಶ್ವಿನಿ ಪೊನ್ನಪ್ಪ, ಅಥ್ಲೆಟಿಕ್ಸ್‍ನಲ್ಲಿ ಮಾಚೆಟ್ಟಿರ ಆರ್. ಪೂವಮ್ಮ, ಕಾರೆಕೊಪ್ಪದ ಜೀವನ್, ಸ್ಕ್ವಾಷ್‍ನಲ್ಲಿ ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪ, ಹಾಕಿಯಲ್ಲಿ ಏಷ್ಯಾದ ವೇಗದ ಆಟಗಾರ ಖ್ಯಾತಿಯ ಎಸ್.ವಿ. ಸುನಿಲ್ ಹಾಗೂ ಇದೇ ಪ್ರಥಮ ಬಾರಿಗೆ ಸೈಲಿಂಗ್‍ನಲ್ಲಿ ಮೂಲತಃ ಹಾತೂರಿನವರಾದ ಕೇಳಪಂಡ ಪಾರ್ಥ ಚಂಗಪ್ಪ ಅವರುಗಳು ಪಾಲ್ಗೊಂಡಿದ್ದರು.
ಸಾಧನೆ
ಟೆನ್ನಿಸ್‍ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ ಹಾಗೂ ಅಥ್ಲೆಟಿಕ್ಸ್‍ನಲ್ಲಿ ಮಾಚೆಟ್ಟಿರ ಆರ್. ಪೂವಮ್ಮ ಅವರದ್ದು ಚಿನ್ನದ ಪದಕದ ಸಾಧನೆಯಾಗಿದೆ. ಪೂವಮ್ಮ 4x400 ಮಹಿಳಾ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ ಪದಕಗಳಿಸಿದ್ದಾಳೆ. ಸ್ಕ್ವಾಷ್‍ನಲ್ಲಿ ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪಳಿಗೆ ಬೆಳ್ಳಿಯ ಪದಕ ಬಂದಿದ್ದರೆ, ಸೈಲಿಂಗ್‍ನಲ್ಲಿ ಕೇಳಪಂಡ ಪಾರ್ಥ ಗಣಪತಿ ಕಂಚಿನ ಪದಕಗಳಿಸಿದ್ದಾರೆ. ಹಾಕಿಯಲ್ಲಿ ಎಸ್.ವಿ. ಸುನಿಲ್ ಕಂಚಿನ ಪದಕ ಸಾಧನೆ ಮಾಡಿದ ತಂಡದ ಆಟಗಾರ. 4x400 ಪುರುಷರ ರಿಲೇ ತಂಡದಲ್ಲಿ ಕಾರೆಕೊಪ್ಪ ಜೀವನ್ ನಿರ್ಣಾಯಕ ಘಟ್ಟದಲ್ಲಿ ಇರದಿದ್ದರೂ ತಂಡದ ಸ್ಪರ್ಧಿಯಾಗಿ ಇವರೂ ಬೆಳ್ಳಿಯ ಪದಕದ ಪಾಲುದಾರರು. ಇನ್ನು ಬ್ಯಾಡ್‍ಮಿಂಟನ್‍ನಲ್ಲಿ ಮಾಚಿಮಂಡ ಅಶ್ವಿನಿ ಪೊನ್ನಪ್ಪ ಅವರು ಮಾತ್ರ ಪದಕದ ಪಟ್ಟಿಯಲ್ಲಿ ಇಲ್ಲ. ಆದರೆ ಏಷ್ಯನ್ ಗೇಮ್ಸ್‍ನಲ್ಲಿ ಭಾರತ ತಂಡ ಈ ತನಕ ಮಾಡದಿದ್ದ ಸಾಧನೆಯನ್ನು ಇವರು ತೋರಿರುವದು ಶ್ಲಾಘನೀಯವಾಗಿದೆ.
ದೇಶದ ಕ್ರೀಡಾಪಟುಗಳು ಈ ಬಾರಿ ತೋರಿರುವ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಭಾರತೀಯ ಕ್ರೀಡಾಳುಗಳ ಈ ಐತಿಹಾಸಿಕ ಸಾಧನೆ ರಾತೋರಾತ್ರಿ ಸಂಭವಿಸಿರುವದಲ್ಲ. ಕ್ರೀಡಾಪಟುಗಳು ಯೋಜನಾಬದ್ಧರಾಗಿ ನಿರಂತರವಾಗಿ ಮಾಡಿಕೊಂಡ ಸಿದ್ಧತೆಯಿಂದ ಇದು ಸಾಧ್ಯವಾಗಿದೆ ಎಂದು ಕೇಂದ್ರದ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿನ ಸಂಭ್ರಮ ಒಂದೆಡೆಯಾದರೆ ಇತ್ತ ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯಲ್ಲಿ ಕೊಡಗಿನ ಮೂಲದ ಕ್ರೀಡಾಪಟುಗಳು ದೇಶಕ್ಕಾಗಿ ಮಾಡಿರುವ ಸಾಧನೆ ಈ ನೋವಿನ ನಡುವೆಯೂ ಕ್ರೀಡಾ ಪ್ರೇಮಿಗಳನ್ನು ಸಂತಸಕ್ಕೆ ಈಡುಮಾಡಿದೆ. ಚಿನ್ನದ ಪದಕದ ಸಾಧನೆ ಮಾಡಿರುವ ರೋಹನ್ ಬೋಪಣ್ಣ ಅವರು ತಮ್ಮ ಈ ಬಾರಿಯ ಸಾಧನೆಯನ್ನು ಸಂತ್ರಸ್ತರಿಗೆ ಅರ್ಪಿಸಿರುವದು ಕೂಡ ವಿಶೇಷವಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಕೈಲು ಮುಹೂರ್ತ ಹಬ್ಬದ ಕ್ರೀಡಾ ಸ್ಪರ್ಧೆ ಮತ್ತಿತರ ಕ್ರೀಡಾಕೂಟಗಳು, ಕಾರ್ಯಕ್ರಮಗಳು ರದ್ದುಗೊಂಡಿವೆ. ಆದರೆ ಇವರೆಲ್ಲರೂ ತೋರಿರುವ ಸಾಧನೆ ಜಿಲ್ಲೆಯ ಕ್ರೀಡಾ ಪ್ರೇಮಿಗಳಿಗೆ ಸ್ಮರಣೀಯವಾಗಿದೆ.