ನಾಪೆÇೀಕ್ಲು, ಸೆ. 2: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದ ಮಣವಟ್ಟಿರ ಅರುಣ ಪಳಂಗಪ್ಪ ಅವರ ಕಾಫಿ ತೋಟದಲ್ಲಿ ಭೂಮಿಯೊಳಗೆ ಸುರಂಗ ನಿರ್ಮಾಣವಾಗಿದ್ದು, ಜನವಸತಿ ಪ್ರದೇಶವಲ್ಲದ ಕಾರಣ ಯಾವದೇ ಅನಾಹುತ ಸಂಭವಿಸಿಲ್ಲ.ಅರುಣ ಅವರ ಮನೆಗೆ ಸಾಗುವ ರಸ್ತೆಯ ಕೇವಲ 20 ಅಡಿ ಅಂತರದಲ್ಲಿ ಬೃಹತ್ ಕಂದಕವೊಂದು ಇತ್ತೀಚಿನ ಭಾರೀ ಮಳೆಯ ಸಂದರ್ಭದಲ್ಲಿ ಉಂಟಾಗಿರಬಹುದು ಎಂದು ಊಹಿಸಲಾಗಿದೆ. ಆದರೆ ಕಾಫಿ ತೋಟದ ಒಳಗೆ ಯಾರೂ ಹೋಗದ ಕಾರಣ ಕಳೆದೆರಡು ದಿನಗಳ ಹಿಂದೆ ಕಾರ್ಮಿಕರು, ತೋಟದ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಇದು ಕಂಡು ಬಂದಿದೆ.
ಸುಮಾರು 30 ಅಡಿ ಆಳದ ಕಂದಕದ ಒಳಭಾಗದಲ್ಲಿ ತೋಟದ ಮೇಲ್ಬಾಗಕ್ಕೆ ಮತ್ತು ಇಳಿಜಾರು ಭಾಗಕ್ಕೆ ಸುಮಾರು 5 ಅಡಿ ವಿಸ್ತಾರದ ಸುರಂಗ ಗೋಚರಿಸುತ್ತಿದೆ. ಈ ಸುರಂಗದಲ್ಲಿ ನೀರು ಹರಿಯುತ್ತಿದ್ದು, ಕೆಳಭಾಗದ 80 ಅಡಿ ಅಂತರದ ತೋಡು ಬದಿಯಲ್ಲಿ ಸುರಂಗ ಕೆಸರು ಮಣ್ಣಿನೊಂದಿಗೆ ಭೂಮಿಯನ್ನು ಸೀಳಿಕೊಂಡು ಹೊರ ಬಂದಿದೆ. ಮಳೆ ಮುಂದುವರಿದಿದ್ದರೆ ಅಪಾಯದ ಭೀತಿ ಇತ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಮಳೆ ಕಡಿಮೆಯಾದ ಕಾರಣ ಮತ್ತು ಜನವಸತಿ ಪ್ರದೇಶವಲ್ಲದ ಕಾರಣ ಯಾವದೇ ಅಪಾಯ ಸಂಭವಿಸಿಲ್ಲ. ಆದರೂ ಭಯದ ವಾತಾವರಣವಿದೆ. ಸಂಬಂಧಿಸಿದ ವರು ಇದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ತೋಟದ ಮಾಲೀಕ ಮಣವಟ್ಟಿರ ಅರುಣ ಪಳಂಗಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.