ಸೋಮವಾರಪೇಟೆ, ಸೆ. 2: ಮಹಾಮಳೆ, ಪ್ರವಾಹ, ಪ್ರಕೃತಿಯ ರೌದ್ರಾವತಾರಕ್ಕೆ ಸಿಕ್ಕಿ ನಲುಗಿ ಹೋಗಿರುವ ಕೊಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರಲು ಈಗಾಗಲೇ ಕಾರ್ಯೋ ನ್ಮುಖವಾಗಿದ್ದೇವೆ. ಸದ್ಯದಲ್ಲಿಯೇ ದೆಹಲಿಗೆ ನಿಯೋಗ ತೆರಳಿ ಪ್ರಧಾನಿಗೆ ಕೊಡಗಿನ ಪರಿಸ್ಥಿತಿಯನ್ನು ವಿವರಿಸಲಿದ್ದೇವೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.‘ಶಕ್ತಿ’ಯೊಂದಿಗೆ ಮಾತನಾಡಿದ ಶಾಸಕ ರಂಜನ್, ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ 8 ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಹಾನಿಗೊಳಗಾದ ಶೇ. 99 ರಷ್ಟು ಪ್ರದೇಶಗಳಿಗೆ ತಾನು ಭೇಟಿ ನೀಡಿದ್ದೇನೆ. ಈಗಾಗಲೇ ದೇಶದ ರಕ್ಷಣಾ ಸಚಿವರು ಕೊಡಗಿಗೆ ಭೇಟಿ ನೀಡಿ ತೆರಳಿದ್ದಾರೆ. ಸದ್ಯದಲ್ಲೇ ಪ್ರಧಾನಿ ಮೋದಿ ಅವರನ್ನು ಕರೆತರುವ ಪ್ರಯತ್ನವಾಗಲಿದೆ ಎಂದರು.
ಕೇಂದ್ರ ಸಚಿವ ಅನಂತ್ ಕುಮಾರ್, (ಮೊದಲ ಪುಟದಿಂದ) ಡಿ.ವಿ. ಸದಾನಂದ ಗೌಡ, ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ ಅವರುಗಳಿಗೆ ಈ ಬಗ್ಗೆ ಮನವರಿಕೆ ಮಾಡಿದ್ದು, ಮೋದಿ ಅವರನ್ನು ಭೇಟಿಯಾಗುವ ದಿನಾಂಕ ಗೊತ್ತುಪಡಿಸುವಂತೆ ಮನವಿ ಮಾಡಿದ್ದೇವೆ.
ದಿನಾಂಕ ನಿಗದಿಯಾದಂತೆ ಸ್ಥಳೀಯ ಶಾಸಕರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅವರುಗಳನ್ನೂ ಭೇಟಿ ಮಾಡುತ್ತೇವೆ. ಮೋದಿ ಅವರು ಕೊಡಗಿಗೆ ಭೇಟಿ ನೀಡಬೇಕು. ವೈಮಾನಿಕ ಸಮೀಕ್ಷೆಯನ್ನಾದರೂ ನಡೆಸಬೇಕು. ಕೇಂದ್ರದಿಂದಲೂ ಕೊಡಗಿಗೆ ಅಗತ್ಯ ನೆರವು ಒದಗಿಸಬೇಕೆಂಬ ಒತ್ತಾಯವನ್ನು ಪಕ್ಷದ ಮುಖಂಡರಲ್ಲಿ ಮಾಡಲಾಗಿದೆ ಎಂದು ರಂಜನ್ ತಿಳಿಸಿದರು.
ಮಹಾಮಳೆಗೆ ಕೊಡಗಿನಲ್ಲಿ 8 ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಗಾಳಿಬೀಡು, ಮಕ್ಕಂದೂರು, ಮಾದಾಪುರ, ಗರ್ವಾಲೆ, ಕೆ.ನಿಡುಗಣೆ ವ್ಯಾಪ್ತಿಯಲ್ಲೇ 5 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ಆದರೆ ಅಧಿಕಾರಿಗಳು ವಾಸ್ತವಾಂಶ ಅರಿಯದೇ ನಷ್ಟದ ಅಂದಾಜು ಮಾಡುತ್ತಿದ್ದಾರೆ. ಒಂದೂವರೆ ಸಾವಿರ ಕೋಟಿಯಷ್ಟು ನಷ್ಟವಾಗಿರುವದಾಗಿ ಹೇಳುತ್ತಿರುವದು ಸರಿಯಲ್ಲ ಎಂದು ಶಾಸಕರು ಅಭಿಪ್ರಾಯಿಸಿದರು.
ಸಾಲಮನ್ನಾ ಮಾಡಲಿ: ಪ್ರವಾಹದ ಹೊಡೆತಕ್ಕೆ ನಲುಗಿರುವ ಈ ಐದು ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಇವರುಗಳಿಗೆ ಮರುಸಾಲ ನೀಡಬೇಕು. ಬಡ್ಡಿ ರಹಿತ ನೂತನ ಸಾಲಕ್ಕೆ ಶೇ.50ರಷ್ಟು ಸಹಾಯಧನ ಒದಗಿಸಬೇಕು. ತೋಟ ಕಳೆದುಕೊಂಡವರಿಗೆ ಬೇರೆ ಕಡೆಗಳಲ್ಲಿ ಜಾಗ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಸರ್ಕಾರ ವಹಿಸಿಕೊಳ್ಳಬೇಕು. ಮನೆ ಕಳೆದುಕೊಂಡವರಿಗೆ ತಕ್ಷಣ 10 ಸಾವಿರ ಸಹಾಯ ಧನ ಒದಗಿಸಬೇಕು. ಬಾಡಿಗೆ ಮನೆಗೆ ತೆರಳುವವರಿಗೆ ಒಂದು ವರ್ಷದ ಬಾಡಿಗೆಯನ್ನು ಸರ್ಕಾರವೇ ನೀಡಬೇಕು. ಈ ಎಲ್ಲಾ ವಿಷಯಗಳ ಬಗ್ಗೆ ತಾನು ಮತ್ತು ಶಾಸಕ ಕೆ.ಜಿ. ಬೋಪಯ್ಯ ಅವರುಗಳು ಸರ್ಕಾರದ ಗಮನ ಸೆಳೆಯುವದಾಗಿ ರಂಜನ್ ಹೇಳಿದರು.
ಪುನರ್ವಸತಿಗೆ ಒತ್ತಾಯ: ಮಾದಾಪುರದ ತೋಟಗಾರಿಕಾ ಇಲಾಖೆಯ ಸುಪರ್ದಿಯಲ್ಲಿರುವ 100 ಏಕರೆ ಜಾಗದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವದು. ಇದರೊಂದಿಗೆ ಕರ್ಣಂಗೇರಿಯಲ್ಲೂ ಜಾಗ ಗುರುತಿಸಲಾಗಿದ್ದು, ಸಂತ್ರಸ್ತರಿಗೆ ಆದ್ಯತೆಯ ಮೇಲೆ ಪುನರ್ವಸತಿ ಕಲ್ಪಿಸಲಾಗುವದು ಎಂದು ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು.
ಸಿ. ಮತ್ತು ಡಿ. ಜಾಗ ನೀಡಲಿ: 1991 ರಲ್ಲಿ ಅರಣ್ಯ ಇಲಾಖೆಗೆ ವಹಿಸಿಕೊಟ್ಟಿರುವ ಎಲ್ಲಾ ಸಿ ಮತ್ತು ಡಿ ಜಾಗವನ್ನು ಕಂದಾಯ ಇಲಾಖೆ ವಶಕ್ಕೆ ಪಡೆಯಬೇಕು. ಈ ಪ್ರದೇಶದಲ್ಲಿ ತೋಟ ಕಳೆದುಕೊಂಡವರಿಗೆ ಜಾಗ ನೀಡಬೇಕು ಎಂಬ ಒತ್ತಾಯವನ್ನು ಸರ್ಕಾರಕ್ಕೆ ಮನವಿ ಮಾಡುತ್ತೇವೆ. 1.25 ಸಾವಿರ ಹೆಕ್ಟೇರ್ ಇಂತಹ ಜಾಗವಿರುವ ಬಗ್ಗೆ ಮಾಹಿತಿಯಿದ್ದು, ಸಂಬಂಧಿಸಿದ ಇಲಾಖಾ ಸಚಿವರ ಗಮನ ಸೆಳೆಯಲಾಗುವದು ಎಂದರು.
ಕೇಂದ್ರದಿಂದ ತಕ್ಷಣ ಸ್ಪಂದನೆ: ಕೊಡಗಿನ ವಿಕೋಪ ಬಗ್ಗೆ ಕೇಂದ್ರ ಸಚಿವರು ಭೇಟಿ ನೀಡಿದ ತಕ್ಷಣವೇ ಕೇಂದ್ರದಿಂದ ಹಿರಿಯ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. 5 ಮಂದಿಯ ತಂಡ ಜಿಲ್ಲೆಯಲ್ಲಿ ಹಾನಿಗೀಡಾಗಿರುವ ರಸ್ತೆಗಳನ್ನು ಪರಿಶೀಲಿಸಿದೆ. ಎರಡು ದಿನಗಳ ಕಾಲ ಖುದ್ದು ತಾನೇ ಅವರೊಂದಿಗೆ ತೆರಳಿದ್ದೆ. ಉತ್ತರಾಖಂಡ್ ಮಾದರಿಯಲ್ಲಿ ರಸ್ತೆಗಳನ್ನು ಪುನರ್‍ನಿರ್ಮಾಣ ಮಾಡುವ ಬಗ್ಗೆಯೂ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯದಿಂದ ಹೆಚ್ಚಿನ ಸಹಕಾರ ಅಗತ್ಯ: ಪ್ರಕೃತಿ ವಿಕೋಪಕ್ಕೆ ತುತ್ತಾದÀ ಸಂದರ್ಭ ರಾಜ್ಯ ಸರ್ಕಾರ ತಕ್ಷಣಕ್ಕೆ ಸ್ಪಂದಿಸಿದೆ. ಮುಂದೆ ಪುನರ್‍ನಿರ್ಮಾಣ ಕಾರ್ಯಕ್ಕೂ ಹೆಚ್ಚಿನ ಸಹಕಾರ ನೀಡಬೇಕಿದೆ. ಕೊಡಗಿನಲ್ಲಿ ಪ್ರವಾಹದಿಂದ ಉಂಟಾದ ಸಮಸ್ಯೆಗಳಿಗೆ ತಾತ್ಕಾಲಿಕವಾಗಿ ಶೇ. 5ರಷ್ಟು ಮಾತ್ರ ಪರಿಹಾರ ಕಂಡುಕೊಳ್ಳಲಾಗಿದೆ. ಸಂತ್ರಸ್ತರಿಗೆ ಪುನರ್‍ವಸತಿ ಸೇರಿದಂತೆ ಸಾರ್ವಜನಿಕರ ರಸ್ತೆ, ಆಸ್ತಿ ಪಾಸ್ತಿಗಳ ಪುನರ್ ನಿರ್ಮಾಣ ಕಾರ್ಯ ಶೇ. 95ರಷ್ಟು ಬಾಕಿ ಉಳಿದಿದೆ. ರಾಜ್ಯ ಸರ್ಕಾರ ಇನ್ನಷ್ಟು ತ್ವರಿತವಾಗಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರಂಜನ್ ಅಭಿಪ್ರಾಯಿಸಿದರು.
ಶಾಸಕರಿಂದ 25 ಲಕ್ಷ: ವಿಧಾನ ಸಭಾಧ್ಯಕ್ಷರಿಗೆ ಮನವಿ ಮಾಡಿಕೊಂಡ ಮೇರೆ ರಾಜ್ಯದ ಎಲ್ಲಾ ಶಾಸಕರ ನಿಧಿಯಿಂದ ಕೊಡಗಿಗೆ ತಲಾ 25ಲಕ್ಷ ಅನುದಾನ ಒದಗಿಸುವಂತೆ ಸಭಾಧ್ಯಕ್ಷರು ಪತ್ರ ಬರೆದಿರುವದು ಸ್ವಾಗತಾರ್ಹ. ಸಭಾಧ್ಯಕ್ಷರ ಈ ನಡೆಯನ್ನು ಕೊಡಗಿನ ಜನತೆಯ ಪರವಾಗಿ ಅಭಿನಂದಿಸುವದಾಗಿ ತಿಳಿಸಿದ ರಂಜನ್, ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಹಾನಿಯ ವರದಿ ತಯಾರಿಸಬಾರದು. ಸ್ಥಳಕ್ಕೆ ತೆರಳಿ ಮುಂದಾಲೋಚನೆಯನ್ನು ಗಮನದಲ್ಲಿರಿಸಿಕೊಂಡು ವರದಿ ನೀಡಬೇಕು. ತಪ್ಪು ಮಾಹಿತಿ ನೀಡಿದರೆ ಕ್ರಮಕ್ಕೆ ಒತ್ತಾಯಿಸಲಾಗುವದು ಎಂದು ಎಚ್ಚರಿಸಿದರು.
ವಾರದೊಳಗೆ ತಾತ್ಕಾಲಿಕ ರಸ್ತೆ ಸಂಪರ್ಕ: ಹಾನಿಪೀಡಿತ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಮುಕ್ಕೋಡ್ಲು, ಗರ್ವಾಲೆ, ಸೂರ್ಲಬ್ಬಿ, ಕಾಂಡನಕೊಲ್ಲಿ, ಹಾಲೇರಿ, ಪಾಪ್ಲಿಕಾಡ್ ಎಸ್ಟೇಟ್, ಹಟ್ಟಿಹೊಳೆ, ಹಾಲೇರಿ, 2ನೇ ಮೊಣ್ಣಂಗೇರಿ, ಎಮ್ಮೆತ್ತಾಳು, ಮೇಘತ್ತಾಳು, ಮಕ್ಕಂದೂರು, ಮಾಂದಲಪಟ್ಟಿ, ಮಕ್ಕಳಗುಡಿ ಬೆಟ್ಟ ಸೇರಿದಂತೆ ಇತರೆಡೆಗಳಲ್ಲಿ ಮುಂದಿನ ಒಂದು ವಾರದೊಳಗೆ ಫೋರ್‍ವೀಲ್ ವಾಹನಗಳು ಸಂಚರಿಸುವಷ್ಟರ ಮಟ್ಟಿಗೆ ರಸ್ತೆ ಸುಸ್ಥಿತಿಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು.
ಕೊಡಗಿನಲ್ಲಿ 2 ಸಾವಿರ ಕಿ.ಮೀ.ನಷ್ಟು ಜಿ.ಪಂ. ರಸ್ತೆಗಳು, 250 ಕಿ.ಮೀ.ಗೂ ಅಧಿಕ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳು ಹಾನಿಗೀಡಾಗಿವೆ. ಬೆಟ್ಟಕುಸಿತದಿಂದ ಸಂಚಾರ ಸ್ಥಗಿತಗೊಂಡಿರುವ ರಸ್ತೆಗಳು ಸಾಕಷ್ಟಿವೆ. ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಈ ಬಗ್ಗೆ ಹೆಚ್ಚಿನ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 80 ಸಾವಿರ ಟನ್ ರೋಬಸ್ಟಾ ಬೆಳೆಯನ್ನು ನಿರೀಕ್ಷಿಸಲಾಗಿದ್ದು, ಮಹಾಮಳೆ ಯಿಂದ ಶೇ.40 ಸಾವಿರ ಟನ್ ನಷ್ಟಗೊಂಡಿದೆ. 40 ಸಾವಿರ ಟನ್ ಅರೇಬಿಕಾ ಗುರಿಯಿದ್ದು, 15 ಸಾವಿರ ಟನ್‍ಗೂ ಅಧಿಕ ಮಹಾಮಳೆಯಿಂದ ನಷ್ಟಗೊಂಡಿದೆ. ಇದರೊಂದಿಗೆ ಕರಿಮೆಣಸು, ಏಲಕ್ಕಿಯೂ ಸಂಪೂರ್ಣ ನಷ್ಟವಾಗಿದೆ. ಈ ಹಿನ್ನೆಲೆ ಕೊಡಗಿನ ಎಲ್ಲಾ ಬೆಳೆಗಾರರ ಸಂಪೂರ್ಣ ಸಾಲಮನ್ನಾ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದರು.
ಜಿಲ್ಲೆಗೆ ಒದಗಿರುವ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ತಾನೂ ಸೇರಿದಂತೆ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ಇನ್ನಿತರ ಜನಪ್ರತಿನಿಧಿಗಳು ಸಾಕಷ್ಟು ಶ್ರಮಿಸುತ್ತಿದ್ದೇವೆ. ಸರ್ಕಾರ ಇನ್ನಷ್ಟು ಎಚ್ಚೆತ್ತುಕೊಂಡು ಜಿಲ್ಲೆಗೆ ಅಗತ್ಯ ನೆರವು ಒದಗಿಸಬೇಕಿದೆ ಎಂದು ರಂಜನ್ ಅಭಿಪ್ರಾಯಿಸಿದರು.
- ವಿಜಯ್ ಹಾನಗಲ್