ಮಡಿಕೇರಿ, ಸೆ. 2: ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಂಬೊಳಿ-ಮಾದಾಪಳ್ಳಿ ಸಂಪರ್ಕ ರಸ್ತೆಯನ್ನು ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ನಿವೇಶನವನ್ನಾಗಿ ಪರಿವರ್ತಿಸಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎಂ. ಷರೀಫ್ ಹಾಗೂ ಎಂ.ಎಂ. ಅಶ್ರಫ್ ಅವರುಗಳು, ಕುಂಜಿಲ ಗ್ರಾಮದ ಪರಂಬೊಳಿಯಿಂದ ಮಾದಾಪಳ್ಳಿಗಾಗಿ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು 400 ಮೀಟರ್‍ನಷ್ಟು ಉದ್ದ ಹಾಗೂ ಅಂದಾಜು 30-35 ಅಡಿ ಅಗಲವಿದೆ. ಆದರೆ ಈ ರಸ್ತೆಯನ್ನು ಇತ್ತೀಚೆಗೆ ಇಬ್ಬರು ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದು, ಇದರಿಂದಾಗಿ ರಸ್ತೆಯ ಅಗಲ 8-10 ಅಡಿಗಳಷ್ಟಾಗಿದೆ. ವಾಹನಗಳ ಸಂಚಾರಕ್ಕೆ ತೊಡಕಾಗಿರುವದಲ್ಲದೆ ರಸ್ತೆ ಕುಸಿಯುವ ಸ್ಥಿತಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗೆ ಆ ಭಾಗದ ಗ್ರಾಮಸ್ಥರು ದೂರು ನೀಡಿದ್ದರೂ, ಆಡಳಿತ ಮಂಡಳಿ ಯಾವದೇ ಸ್ಪಂದನ ನೀಡಿಲ್ಲ. ಈ ಹಿನ್ನೆಲೆ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ ಎಂದರು. ರಸ್ತೆಯ ಜಾಗದಲ್ಲಿ ಕಟ್ಟಡ ನಿರ್ಮಿಸಲು ಮುಂದಾದರೆ ಮತ್ತು ಪಂಚಾಯಿತಿ ಅನುಮತಿ ನೀಡಿದರೆ ಗ್ರಾಮಸ್ಥರು ಹೋರಾಟ ನಡೆಸಲು ನಿರ್ಧರಿಸಿದ್ದಾರೆ ಎಂದು ಎಚ್ಚರಿಕೆ ನೀಡಿದರು.