ಗೋಣಿಕೊಪ್ಪಲು, ಸೆ. 2: ಹೇರ್ ಸ್ಟ್ರೈಟ್ನಿಂಗ್‍ಗೆ ಮಾರು ಹೋದ ಕಾಲೇಜು ಯುವತಿಯೊಬ್ಬಳು ತನ್ನ ಜೀವವನ್ನೆ ಬಲಿಕೊಟ್ಟ ವಿಚಿತ್ರ ಘಟನೆ ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಕೊಟ್ಟಗೇರಿಯಲ್ಲಿ ನಡೆದಿದೆ. ನೇಹಾ ಗಂಗಮ್ಮ (19)ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಯುವತಿಯರು ತಮ್ಮ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಂಡು ಇತರರಿಗಿಂತ ನಾವು ಚೆನ್ನಾಗಿ ಕಾಣಬೇಕು ಎಂದು ಬಯಸುವದು ಸಹಜ. ಇದಕ್ಕಾಗಿಯೇ ಇಂದು ಕೃತಕವಾಗಿ ಯುವತಿಯರ ಸೌಂದರ್ಯವನ್ನು ಹೆಚ್ಚಿಸಲು ಪಟ್ಟಣಗಳಲ್ಲಿ ಬ್ಯೂಟಿ ಪಾರ್ಲರ್‍ಗಳು ಹೆಚ್ಚಾಗಿ ತಲೆ ಎತ್ತಿ ಕೊಂಡಿವೆ. ವೀರಾಜಪೇಟೆ ತಾಲೂಕಿನ ಕೊಟ್ಟಗೇರಿ ಗ್ರಾಮದ ಗಾಂಡಂಗಡ ಎಂ.ಪೆಮ್ಮಯ್ಯ ಹಾಗೂ ಜಿ.ಪಿ.ಶೈಲ ದಂಪತಿಗಳ ಪುತ್ರಿಯಾದ ನೇಹಾ ಗಂಗಮ್ಮ ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ತಂದೆ 30 ಸಾವಿರ ಶುಲ್ಕ ಕಟ್ಟಿ ಮಗಳನ್ನು ಕಾಲೇಜಿಗೆ ಸೇರಿಸಿದ್ದರು. ಕಾಲೇಜಿನಲ್ಲಿ ಹಾಸ್ಟೆಲ್ ವ್ಯವಸ್ಥೆ ಇಲ್ಲದ ಕಾರಣ ಕಾಲೇಜಿನಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಕೆ.ಡಿ. ರೋಡ್‍ನಲ್ಲಿ ಪಿ.ಜಿ. ಒಂದಕ್ಕೆ ಸೇರಿಸಿ 27 ಸಾವಿರ ರೂಪಾಯಿಯನ್ನು ಪಾವತಿಸಿದ್ದರು. ಪಿ.ಜಿಯಲ್ಲಿದ್ದುಕೊಂಡು ನೇಹಾ ಕಾಲೇಜಿಗೆ ಹೋಗಲಾರಂಭಿಸಿದಳು. ಈ ವೇಳೆ ಏನೇನೋ ಆಫರ್ ಇದೆ ಅಂತ ನೇಹಾಳನ್ನು ಮೋಡಿ ಮಾಡಿದ ಮೈಸೂರಿನ (ಮೊದಲ ಪುಟದಿಂದ) ರೋಹಿಣಿ ಬ್ಯೂಟಿ ಪಾರ್ಲರ್ ಝೋನ್ ಸಿಬ್ಬಂದಿ ಒಂದೂವರೆ ತಿಂಗಳ ಹಿಂದೆ 3,600 ರೂ. ತೆಗೆದುಕೊಂಡು ನೇಹಾಳಿಗೆ ಹೇರ್ ಸ್ಟ್ರೈಟ್ನಿಂಗ್ ಮಾಡಿದ್ದಾರೆ. ಆದರೆ ಆ ಹೇರ್ ಸ್ಟ್ರೈಟ್ನಿಂಗ್‍ನಿಂದ ನೇಹಾಳ ತಲೆ ಕೂದಲು ದಿನದಿಂದ ದಿನಕ್ಕೆ ಉದುರ ತೊಡಗಿದೆ. ಕಾಲೇಜಿನ ಅವಳ ಸಹಪಾಠಿಗಳು
(ಮೊದಲ ಪುಟದಿಂದ) ಸಹ ನಿನಗೆ ಈ ಹೇರ್ ಸ್ಟೈಲ್ ಚಂದ ಕಾಣುವದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕಂಗಾಲಾದ ನೇಹ ತನ್ನ ಸ್ವಂತ ಊರಾದ ಕೊಟ್ಟಗೇರಿಗೆ ಬಂದು ತನ್ನ ಹೆತ್ತವರೊಂದಿಗೆ ನೋವನ್ನು ತೋಡಿಕೊಂಡಿದ್ದಾಳೆ. ತನ್ನ ತಂದೆಯ ಎದೆ ಮೇಲೆ ತಲೆಯಿಟ್ಟು ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಇನ್ನು ಮುಂದೆ ನಾನು ಕಾಲೇಜಿಗೆ ಹೋಗಲ್ಲ ಅಂತ ಹಠ ಹಿಡಿದಿದ್ದಾಳೆ. ಆಗ ತಂದೆ ತಾಯಿ ಅವಳಿಗೆ ಬುದ್ಧಿ ಹೇಳಿ ಈಗಾಗಲೇ ನಾವು ಕಾಲೇಜಿಗೆ ಮತ್ತು ಪಿ.ಜಿ.ಗೆ ಸಾಕಷ್ಷು ಹಣ ಕಟ್ಟಿದ್ದೇವೆ ಆದ್ದರಿಂದ ನೀನು ಮನೆಯಲ್ಲಿ ಕೂರುವದು ಒಳ್ಳೆಯದಲ್ಲ ಎಂದು ಹೇಳಿ ಕೊನೆಗೆ ಹೇಗೋ ಮಗಳನ್ನು ಸಮಾಧಾನ ಮಾಡಿದ ತಂದೆ, ತಾಯಿ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದರೆ ಅಕ್ಕ ಪಕ್ಕದವರು ಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆ ಎಂದು ಬುದ್ದಿವಾದ ಹೇಳಿ ಕಾಲೇಜಿಗೆ ಕಳುಹಿಸಿದ್ದಾರೆ. ಕಾಲೇಜಿಗೆ ಹೋದ ಎರಡೇ ದಿನಕ್ಕೆ ನೇಹಾ ಮತ್ತೆ ತನ್ನೂರಿಗೆ ವಾಪಾಸಾಗಿದ್ದಾಳೆ. ನನಗೆ ತಲೆತಿರುಗುವ ಅನುಭವವಾಗುತ್ತಿದೆ, ಮತ್ತೆ ನನ್ನ ಮುಖವು ಸಹ ಬಿಳಿಚಿಕೊಂಡಂತೆ ಕಾಣುತ್ತಿದೆ. ಆದ್ದರಿಂದ ನನ್ನನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ನಾನು ನನ್ನ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡು ಮನೆಗೆ ಸೇರಿಕೊಳ್ಳುತ್ತೇನೆ ಯಾರಿಗೂ ಕಾಣದಂತೆ ಇರುತ್ತೇನೆ ಎಂದು ಹೇಳಿದ್ದಳು.
ಆದರೆ ಮತ್ತೆ ಸಮಾಧಾನ ಮಾಡಿದ ಹೆತ್ತವರು ಮಗಳನ್ನು ಕಾಲೇಜಿಗೆ ಕಳುಹಿಸಿದ್ದರು. ನೋವಿನಿಂದಲೇ ನೇಹಾ ಕಾಲೇಜಿನತ್ತ ಹೆಜ್ಜೆ ಹಾಕಿದ್ದಳು. ಕಾಲೇಜಿನಲ್ಲಿ ತನ್ನ ನೋವುನುಂಗಿಕೊಂಡು ಹತ್ತು ದಿನಗಳ ನಂತರ ಮತ್ತೆ ತನ್ನ ಊರಾದ ಕೊಟ್ಟಗೇರಿಗೆ ಆಗಮಿಸಿದ್ದಳು. ಈ ಸಂದರ್ಭ ಹೆತ್ತವರು ಮಗಳ ಹೇರ್ ಸ್ಟೈಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮೊದಲಿಗಿಂತಲೂ ಈಗ ಸುಂದರವಾಗಿದ್ದೀಯ ಎಂದು ಖುಷಿಪಡಿಸಿದ್ದರು. ಆದರೆ ನೇಹಳ ಮನಸಿನಲ್ಲಿ ನೋವು ಮಾತ್ರ ಮಾಸಿರಲಿಲ್ಲ. ಭಾರದ ಹೆಜ್ಜೆಯಿಟ್ಟು ಮನೆಯಿಂದ ಆ.21 ರಂದು ಮತ್ತೆ ಕಾಲೇಜಿಗೆ ತೆರೆಳಿದಳು. ನಂತರದ ದಿನದಲ್ಲಿ ಈಕೆ ಸ್ಥಿಮಿತ ಕಳೆದುಕೊಂಡಂತೆ ನಡೆದುಕೊಳ್ಳುತ್ತಿದ್ದಳು. ಕಾಲೇಜಿನ ಸ್ನೇಹಿತರೊಂದಿಗೆ ನೋವನ್ನು ತೋಡಿಕೊಂಡು ಅಳುತ್ತಿದ್ದಳು. ಏಕಾಂಗಿಯಾಗಿ ಒಬ್ಬಳೇ ಕುಳಿತು ದು:ಖಿಸುತ್ತಿದ್ದಳು. ಜೀವವನ್ನೇ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಳು.
ತಾರೀಕು ಆ.28 ರಂದು ತಾನು ತಂಗಿದ್ದ ಮೈಸೂರಿನ ಪಿ.ಜಿ. ಯಿಂದ ಕೊಡಗಿನತ್ತ ಪ್ರಯಾಣ ಬೆಳೆಸಿದ ನೇಹಾ ತನ್ನ ಮನೆಯ ಸಮೀಪದ ಮಲ್ಲೂರು ಲಕ್ಷ್ಮಣ ತೀರ್ಥ ನದಿಗೆ ಹಾರುವ ಮೂಲಕ ತನ್ನ ಜೀವವನ್ನು ಕಳೆದುಕೊಂಡಳು.ಇತ್ತ ಹೆತ್ತವರು ಮಗಳ ಮೊಬೈಲ್ಗೆ ಸಂಪರ್ಕ ಸಿಗದೇ ಇದ್ದಾಗ ಗಾಬರಿಗೊಂಡರು. ಕೆಲವು ಸ್ನೇಹಿತರೊಂದಿಗೆ ಮಾತನಾಡಿದರೂ ಮಗಳ ಸುಳಿವು ಲಭ್ಯವಾಗಲಿಲ್ಲ. ಮೈಸೂರಿನತ್ತ ಪ್ರಯಾಣ ಬೆಳೆಸಿದ ಪೋಷಕರು ಅಲ್ಲಿರುವ ಪಿ.ಜಿ.ಯ ಸಿ.ಸಿ ಕ್ಯಾಮರದಲ್ಲಿ ನೇಹಾ ತನ್ನ ಸಮವಸ್ತ್ರ ಲ್ಲದೆ ಬೇರೆ ಬಟ್ಟೆ ಧರಿಸಿ ಹೊರಗೆ ಹೋಗಿರುವ ಮಾಹಿತಿ ಲಭ್ಯವಾಯ್ತು. ಗಾಬರಿಗೊಂಡ ಪೋಷಕರು ಮೈಸೂರಿನ ಪೊಲೀಸ್ ಠಾಣೆಗೆ ಮಗಳು ನೇಹಾ ಕಾಣೆಯಾಗಿರುವ ಬಗ್ಗೆ ದೂರು ನೀಡಿ ಮಗಳ ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಹಲವು ದಿನ ಕಳೆದರೂ ಮಗಳ ಇರುವಿಕೆಯ ಬಗ್ಗೆ ಪೋಷಕರಿಗೆ ಮಾಹಿತಿ ಲಭ್ಯವಾಗಲಿಲ್ಲ.
ತೇಲಾಡುತ್ತಿತ್ತು ನೇಹಾಳ ಮೃತದೇಹ
ಬಾಳೆಲೆ ಸಮೀಪದ ಮಲ್ಲೂರಿನ ಲಕ್ಷ್ಮಣ ತೀರ್ಥ ನದಿಯಲ್ಲಿ ಏನೋ ಒಂದು ವಸ್ತು ತೇಲಾಡುತ್ತಿದೆ ಎಂದು ಸ್ಥಳೀಯರು ಸಮೀಪಹೋಗಿ ಪರಿಶೀಲಿಸಿದಾಗ ಇದು ಮೃತ ದೇಹವೆಂದು ಖಾತ್ರಿಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅರಮಣಮಾಡ ರಂಜನ್ ಚಂಗಪ್ಪ ಹಾಗೂ ಕೆಲವು ಸ್ನೇಹಿತರು ಈ ವಿಷಯವನ್ನು ಪೊನ್ನಂಪೇಟೆ ಠಾಣಾಧಿಕಾರಿಗೆ ತಿಳಿಸಿದರು. ಸ್ಥಳಕ್ಕೆ ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಮೃತ ದೇಹವನ್ನು ಹೊಳೆಯಿಂದ ಹೊರತೆಗೆದರು. ಈ ಸಂದರ್ಭ ಮೃತ ದೇಹವು ಕಪ್ಪು ಬಣ್ಣಕ್ಕೆ ತಿರುಗಿತ್ತು. ಮೈಮೇಲಿದ್ದ ಬಟ್ಟೆ ಹಾಗೂ ಕೈನಲ್ಲಿದ್ದ ಉಂಗುರದ ಗುರುತಿನಿಂದ ಮೃತ ದೇಹವು ನೇಹಾಳಾದೆಂದು ಖಾತರಿಯಾಯಿತು.
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಯಿತು. ತಂದೆ ಪೆಮ್ಮಯ್ಯ ಗ್ರಾಮಸ್ಥರ ಸಹಕಾರದಿಂದ ಸಂಬಂಧಿಸಿದ ಬ್ಯೂಟಿಪಾರ್ಲರ್ ವಿರುದ್ಧ ಪೊಲೀಸ್ ಪುಕಾರು ನೀಡಿದರು. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಆಸ್ಪತ್ರೆಗೆ ನೇಹಾಳ ಮೃತ ದೇಹವನ್ನು ಕೊಂಡೊಯ್ಯಲಾಯಿತು. ಅಲ್ಲಿಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಕೊಟ್ಟಗೇರಿಯ ಮನೆಗೆ ನೇಹಾಳ ಮೃತ ದೇಹ ಆಗಮಿಸುತ್ತಿದ್ದಂತೆಯೇ ಹೆತ್ತವರ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ವಿಧಿ ವಿಧಾನದ ತರುವಾಯ ಸಂಜೆ ವೇಳೆ ನೇಹಾಳ ಮನೆಯ ಸಮೀಪದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.