ಮಡಿಕೇರಿ, ಸೆ. 4: ವಿಕಲ ಚೇತನ ಯುವತಿಯನ್ನು ಬಲತ್ಕಾರವಾಗಿ ಅತ್ಯಾಚಾರ ಮಾಡಿ ಆಕೆ ಗರ್ಭವತಿಯಾದ ವೇಳೆ ಮಾತ್ರೆಗಳನ್ನು ನೀಡಿ ಆಕೆಗೆ ಗರ್ಭಪಾತ ಮಾಡಿದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪೊನ್ನಂಪೇಟೆ ಕಟ್ರಕೊಲ್ಲಿಯ ಅಜಿತ್ ಅಲಿಯಾಸ್ ಸುರೇಶ್ ಎಂಬಾತ ಮೂಗಿ ಹಾಗೂ ಕಿವುಡಿಯಾಗಿದ್ದ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರವೆಸಗಿ ಆಕೆಗೆ ಗರ್ಭಪಾತ ಮಾಡಿಸಿದ್ದ. ಈ ಬಗ್ಗೆ ಅಜಿತ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊನ್ನಂಪೇಟೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯು 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿಗೆ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 10,000 ದಂಡವನ್ನು, ಬಲಾತ್ಕಾರವಾಗಿ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿದ ಅಪರಾಧಕ್ಕಾಗಿ ಪುನಹ 10 ವರ್ಷಗಳ ಕಠಿಣ ಸಜೆ ಮತ್ತು ರೂ. 10,000 ದಂಡವನ್ನು ಮತ್ತು ಆಕೆಗೆ ಗರ್ಭಪಾತವಾಗುವ ಮಾತ್ರೆಗಳನ್ನು ನೀಡಿ 6 ತಿಂಗಳ ಭ್ರೂಣವನ್ನು ಗರ್ಭಪಾತವಾಗುವಂತೆ ಮಾಡಿದ ಅಪರಾಧಕ್ಕಾಗಿ 6 ವರ್ಷಗಳ ಸಜೆ ಮತ್ತು ರೂ. 7,500 ದಂಡವನ್ನು ಪಾವತಿಸಲು ಆದೇಶಿಸಿ ತೀರ್ಪು ನೀಡಿದ್ದು, ಪಾವತಿಯಾಗುವ ದಂಡದ ಹಣದಲ್ಲಿ ರೂ. 25,000 ವನ್ನು ನೊಂದವಳಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರ ಅಭಿಯೋಜಕರಾದ ಎಂ.ಕೃಷ್ಣವೇಣಿ ವಾದಿಸಿದರು.