ಸೋಮವಾರಪೇಟೆ, ಸೆ. 4: ಅಧಿಕಾರಿಗಳ ವಾಸ್ತವ ವರದಿ ಆಧರಿಸಿ ಸಂಸ್ರಸ್ತರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವದು ಎಂದು ತಾಲೂಕು ತಹಶೀಲ್ದಾರ್ ಮಹೇಶ್ ತಿಳಿಸಿದರು.
ಸಮೀಪದ ಬೇಳೂರು ಮಠದಲ್ಲಿರುವ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ, ನೆಲ್ಲಿಹುದಿಕೇರಿಯ 8 ಕುಟುಂಬ, ಹಟ್ಟಿಹೊಳೆಯ 2 ಸಂತ್ರಸ್ತರ ಕುಟುಂಬಗಳು ತಮ್ಮ ಮನೆಗಳಲ್ಲಿ ವಾಸಿಸಲಾಗದೆ ಕಳೆದ ಒಂದು ವಾರದಿಂದ ಬೇಳೂರು ಮಠದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ನಮಗೆ ಸೂಕ್ತ ನಿವೇಶನ ಹಾಗೂ ಮನೆ ಒದಗಿಸಬೇಕೆಂದು ತಹಶೀಲ್ದಾರರರಿಗೆ ಮನವಿ ಮಾಡಿದರು.
ಈ ಸಂದರ್ಭ ತಹಶೀಲ್ದಾರ್ ಮಹೇಶ್ ಮಾತನಾಡಿ, ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಂಚಾಯಿತಿಯ ಪಿ.ಡಿ.ಓ. ಹಾಗೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಅವರ ವರದಿಯನ್ನಾಧರಿಸಿ ಅಗತ್ಯ ಸೌಲಭ್ಯ ನೀಡಲಾಗುವದು ಎಂದರು.
ಹಟ್ಟಿಹೊಳೆಯ 2 ಕುಟುಂಬಗಳು ಕೂಲಿ ಕಾರ್ಮಿಕರಾಗಿದ್ದು, ತೋಟದ ಲೈನ್ ಮನೆಗಳಲ್ಲಿ ವಾಸವಿದ್ದವರು. ಮಳೆಯಿಂದಾಗಿ ಲೈನ್ ಮನೆಗಳು ಕುಸಿದು ಬಿದ್ದಿದ್ದರಿಂದ ಸಂತ್ರಸ್ತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ನಮಗೂ ವಾಸಕ್ಕೆ ಮನೆ ಒದಗಿಸಬೇಕೆಂಬ ಅವರ ಮನವಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರರು, ಆರಂಭಿಕ ಹಂತದಲ್ಲಿ ಮನೆ ಕಳೆದುಕೊಂಡವರಿಗೆ ಆದ್ಯತೆ ನೀಡಿ, 2ನೇ ಹಂತದಲ್ಲಿ ವಸತಿ ರಹಿತರಿಗೆ ಅವಕಾಶ ನೀಡಲಾಗುವದು ಎಂದರು.
ಈ ಸಂದರ್ಭ ಐಟಿಐ ವಿದ್ಯಾರ್ಥಿಯನ್ನು ಮಡಿಕೇರಿ ಕಾಲೇಜಿಗೆ ದಾಖಲಿಸಬೇಕಾಗಿದ್ದು, ಶುಲ್ಕ ಕಟ್ಟಲು ಹಣವಿಲ್ಲದಿರುವ ಬಗ್ಗೆ ಗಮನ ಸೆಳೆದಾಗ, ತಹಶೀಲ್ದಾರರು ಕಾಲೇಜಿನ ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಿ ವಿದ್ಯಾರ್ಥಿಯನ್ನು ದಾಖಲಿಸಿಕೊಳ್ಳುವಂತೆ ತಿಳಿಸಿದರು.
ನೆಲ್ಲಿಹುದಿಕೇರಿಯ ಕುಟುಂಬಗಳು ತಮ್ಮ ಊರಿಗೆ ತೆರಳುವದಾಗಿ ತಿಳಿಸಿದ ಹಿನ್ನೆಲೆ ಅವರಿಗೆ ಇಲಾಖೆಯಿಂದ ಅಗತ್ಯ ವಾಹನದ ವ್ಯವಸ್ಥೆ ಮಾಡಿಕೊಡಲಾಯಿತು. ತಹಶೀಲ್ದಾರರ ಭೇಟಿ ಸಂದರ್ಭ ಕಂದಾಯ ಇಲಾಖೆಯ ಸಿಬ್ಬಂದಿ ಅರುಣ್ ಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಎಸ್. ಮಹೇಶ್, ಮಠದ ವ್ಯವಸ್ಥಾಪಕ ಶಶಿಧರ್, ಪ್ರಮುಖರಾದ ಸುರೇಶ್, ಶ್ರೀಕಂಠ ಸೇರಿದಂತೆ ಇತರರು ಉಪಸ್ಥಿತರಿದ್ದರು.