ಕೂಡಿಗೆ, ಸೆ. 4: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಇರುವ ಕಣಿವೆ ತೂಗು ಸೇತುವೆಯು ಮಹಾಮಳೆಗೆ ಹಾಳಾಗಿದ್ದರೂ ಕೂಡ ಸೇತುವೆಯ ಮೇಲೆ ಜನರ ಸಂಚಾರ ಪ್ರಾರಂಭವಾಗಿದೆ.

ಕಳೆದ ಆರು ವರ್ಷಗಳ ಹಿಂದೆ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ತೂಗು ಸೇತುವೆಯೂ ಹಾರಂಗಿ ಮತ್ತು ಕಾವೇರಿ ನದಿಯ ನೀರಿನ ರಭಸದಿಂದ ತೂಗು ಸೇತುವೆಗೆ ಹಾನಿಯಾಗಿದ್ದು, ಅಪಾಯ ಮಟ್ಟದಲ್ಲಿರುವ ತೂಗು ಸೇತುವೆ ಮೇಲೆ ಜನರ ಓಡಾಟ ಭಾರೀ ಅಪಾಯವನ್ನು ಆಹ್ವಾನಿಸಿದಂತಿದೆ. ದೇವಾಲಯ ಸಮಿತಿಯವರು ಯಾರೂ ತಿರುಗಾಡದಂತೆ ಸೇತುವೆಗೆ ಅಡ್ಡಗೋಡೆ ನಿರ್ಮಿಸಿದ್ದರೂ ಜನರು ಅದನ್ನು ದಾಟಿ ಸೇತುವೆಯ ಮೇಲೆ ಸಂಚರಿಸುತ್ತಿದ್ದಾರೆ. ಇದರಿಂದ ಮುಂದೆ ಭಾರೀ ಅನಾಹುತಗಳು ಸೃಷ್ಟಿಯಾಗಲಿದ್ದು, ಜಿಲ್ಲಾಡಳಿತ ತುರ್ತಾಗಿ ಸ್ಪಂದಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.