* ಸುಂಟಿಕೊಪ್ಪ, ಸೆ. 4: ಭೋರ್ಗರೆಯುತ್ತಿರುವ ಜಲಪಾತದ ಸದ್ದು,ಬಿರುಕು ಬಿಟ್ಟ ರಸ್ತೆಗಳು, ಅಲ್ಲಲ್ಲಿ ಬಿದ್ದಿರುವ ಮರಗಳ ಮಾರಣ ಹೋಮ, ಅಲ್ಲಿಂದ ಮುಂದುವರೆ ಯಲು ಕಲ್ಲುಬಂಡೆಗಳ ಮೇಲೆ ಹತ್ತಿ, ಕೆಸರಿನಿಂದ ಇಳಿಯಲು ಹರಸಾಹಸ. ಇದು ಟ್ರಕ್ಕಿಂಗ್ ಅಥವಾ ಸಾಹಸ ಕ್ರೀಡೆಯಲ್ಲ. ಬದಲಾಗಿ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹಾಲೇರಿ ಗ್ರಾಮದ ಇಂದಿನ ಪರಿಸ್ಥಿಯ ನರಕ ದರ್ಶನ.
ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಗೆ ಸಾಗುವಾಗ ಕೆದಕಲ್ ಸಮೀಪ ರಸ್ತೆಯು ಸಿಗುತ್ತದೆ. ಅದೆ ರಸ್ತೆಯಲ್ಲಿ 4 ಕೀ ಮೀ ಮುಂದುವರಿದರೆ ಹಾಲೇರಿ ಗ್ರಾಮ ತಲುಪುತ್ತದೆ
ಹಾಲೇರಿ ರಾಜವಂಶಸ್ಥರು ಆಳ್ವಿಕೆ ನಡೆಸಿದ ಈ ಗ್ರಾಮ ಇಂದು ನರಕ ಸದೃಶವಾಗಿ ಗೋಚರಿಸುತ್ತಿದೆ.
ಭೋರ್ಗರೆದು ರಭಸದಿಂದ ಧುಮ್ಮಿಕ್ಕುತ್ತಿರುವ ಜಲಪಾತದ ದಾರಿಯಲ್ಲಿಯೇ ಈ ಗ್ರಾಮದ ಜನರು ನಡೆದುಕೊಂಡು ಹೋಗಬೇಕು. ಆದರೆ ಅಲ್ಲಿಂದ ಮುಂದುವರೆದಂತೆ ರಸ್ತೆಯು ಮಾಯವಾಗಿ ದೊಡ್ಡದಾದ ಕಂದಕ ಸೃಷ್ಟಿಯಾಗಿದ್ದು, ತೋಟದ ಕೆಸರುಮಯ ಇಳಿಜಾರಿನಲ್ಲಿ ಮುನ್ನಡೆಯಬೇಕಾಗುತ್ತದೆ.
ಸದ್ಯದ ಮಟ್ಟಿಗೆ ಈ ಗ್ರಾಮಕ್ಕೆ ತೆರಳುತ್ತಿರುವವರು ತಮ್ಮ ಸಾಕು ಪ್ರಾಣಿಗಳಾದ ದನಕರು, ನಾಯಿ, ಕೋಳಿಗಳಿಗೆ ಆಹಾರ ನೀಡಲು ಹೋಗುತ್ತಿರುವ ದೃಶ್ಯ ನೋಡಿದರೆ ಮನ ಕಲಕುತ್ತದೆ.
ತೋಟದ ಮಾರ್ಗವಾಗಿ ಆ ಕೆಸರಿನಲ್ಲಿ ಜಾರುತ್ತಾ ಬೀಳುತ್ತಾ ನಡೆದು ರಸ್ತೆಗೆ ಇಳಿದ ನಂತರ ಕೆಸರಿನಿಂದ ಕೂಡಿದ ರಸ್ತೆಯಲ್ಲಿ ನಡೆದು ಮುನ್ನುಗ್ಗಿದಾಗ ಮತ್ತೊಂದು ದೊಡ್ಡ ಕಂದಕ ಬಿದ್ದಿರುವದನ್ನು ನೋಡಿದರೆ ಸದ್ಯದ ಪರಿಸ್ಥಿತಿ ಈ ಭಾಗದ ಜನರು ಓಡಾಡುವದಕ್ಕೆ ಸುಮಾರು 5 ರಿಂದ 6 ತಿಂಗಳು ಬೇಕಾಗಬಹುದು.
ಇಡೀ ಹಾಲೇರಿ ಗ್ರಾಮದವರು ಮನೆ ಮಠವನ್ನು ಬಿಟ್ಟು ಆ ಮಳೆಯ ಆರ್ಭಟ, ಭೂ ಕುಸಿತಕ್ಕೆ ಹೆದರಿ ಅಲ್ಲಿಂದ ಖಾಲಿಯಾಗಿದ್ದರೆ, ಇಲ್ಲಿನ ಭದ್ರಕಾಳಿ ದೇವಸ್ಥಾನದ ಅರ್ಚಕ ಕೆ. ಸದಾನಂದ ಭಟ್ ಮತ್ತು ಮನೆಯವರು ಮಾತ್ರ ವಾಸವಿರುವದು ವಿಸ್ಮಯ ತಂದಿದೆ.
ಅವರನ್ನು ಸಂಪರ್ಕಿಸಿದಾಗ, ಅವರ ಮಾತು ಕೇಳಿ ನಿಜವಾಗಲೂ ದಿಗ್ಭ್ರಮೆಗೊಂಡಿತು. ಇಡೀ ಗ್ರಾಮವೇ ಖಾಲಿಯಾಗಿದೆ ನೀವ್ಯಾಕೆ ಇಲ್ಲೇ ಇದ್ದೀರಾ ಎಂದಾಗ ಅವರು ತಿಳಿಸಿದ ಮಾತು ಅಕ್ಷರಸ ಸತ್ಯ ಅನ್ನಿಸತೊಡಗಿತು. ಈ ಭೂಮಿ ದೇವಿ ಸನ್ನಿಧಿ, ನಾನು ಆಕೆಯ ಭಕ್ತ, ನಾನು ಆಕೆಯನ್ನು ಪ್ರತಿನಿತ್ಯ ಆರಾಧಿಸುತ್ತೇನೆ. ಪೂಜೆ ಪುನಸ್ಕಾರ ನಡೆಸುತ್ತೇನೆ. ನಾನು ತೆರಳಿದರೆ ದೇವಿಯನ್ನು ನೋಡುವದು ಯಾರು ಎಂಬ ಪ್ರತಿಕ್ರಿಯೆ ನೀಡಿದರು.
ಪ್ರಕೃತಿ ವಿಕೋಪದ ಬಗ್ಗೆ ವಿಚಾರವನ್ನು ಅವರಿಂದ ಕಲೆಹಾಕಿದಾಗ, ದೇವಸ್ಥಾನದ ಆವರಣದಲ್ಲಿ ಎಂದೂ ಉದುರದ ಬಿಲ್ವಪತ್ರೆ ಮರದಲ್ಲಿ ಎಲೆ ಸಂಪೂರ್ಣ ಖಾಲಿಯಾಗಿದೆ. ಕೆಲವು ದಿನಗಳ ಹಿಂದೆ ದೇವಾಲಯದ ಆವರಣದಲ್ಲಿ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿರುವದನ್ನು ನೋಡಿದರೆ ಏನೋ ನಡೆಯಲಿದೆ ಎಂದು ಮುನ್ಸೂಚನೆ ಕೊಟ್ಟಿತ್ತು. ಹಾಗೆಯೇ ದೇವಾಲಯಕ್ಕೆ ಬರುವ ಮೂರು ಗ್ರಾಮಗಳ ರಸ್ತೆಗಳು ರದ್ದಾಗಿವೆ. ಹಾಗಾದರೆ ದೇವಾಲಯದ ಸಮೀಪದಲ್ಲಿ ಆಗದ ಅನಾಹುತ ಉಳಿದ ಭಾಗಕ್ಕೆ ಯಾಕಾಗಿದೆ ಅನ್ನುವದನ್ನು ನೀವೇ ಊಹಿಸಿಕೊಳ್ಳಿ ಅಂದಾಗ ಎಂತವರಿಗೂ ನಡುಕ ಉಂಟಾಗಲೇಬೇಕು.
ಅಲ್ಲಿಂದ ಕಾಡುದಾರಿಯಲ್ಲಿ ಮುಂದುವರಿದಂತೆ ಅಲ್ಲೊಂದು ಬಯಲು ಪ್ರದೇಶ ಗೋಚರವಾಗುತ್ತದೆ. ಹಾಲೇರಿ ಗ್ರಾಮದ ನಿವಾಸಿ ರವಿ ಎಂಬವರು ಮಾಹಿತಿ ನೀಡುವಂತೆ, ಇದು ಕೂಡಿಮಣಿಯಂಡ ಅಪ್ಪಣ್ಣ ಲಾಯರ್ ಅವರ ನೂರಾರು ಎಕರೆಯ ತೋಟ. ಇಲ್ಲೇ ಪಕ್ಕದಲ್ಲಿರುವ ಹಿಮಗಿರಿ ಬೆಟ್ಟವು ಮಳೆಯ ಆರ್ಭಟಕ್ಕೆ ಭೂ ಕುಸಿದು ಇವರ ತೋಟದೊಳಗೆ ನುಗ್ಗಿ ಬಂದು ಮುಚ್ಚಿಹೋಗಿದೆ.
ಕಾಫಿ ತೋಟ ಮಾತ್ರವಲ್ಲ ಅಲ್ಲಿರುವ ಮರಗಳು ಕೂಡ ಕಣ್ಮರೆಯಾಗಿವೆ.
ಹಾಲೇರಿ ಗ್ರಾಮವನ್ನು ಒಮ್ಮೆ ಸುತ್ತುವರೆದಾಗ ಮಳೆಯ ಅಬ್ಬರ ಕಡಿಮೆಯಾಗಿದ್ದರೂ, ಸದ್ಯದ ಪರಿಸ್ಥಿತಿಗೆ ಓಡಾಡಲು ಮತ್ತು ವಾಸಿಸುವದಕ್ಕೆ ಈ ಭಾಗದ ಜನರಿಗೆ ಸಾಧ್ಯವಿಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಕೆಲವು ಸ್ಥಳವನ್ನು ಹೊರತುಪಡಿಸಿ ಹೆಚ್ಚಿನ ಭಾಗದಲ್ಲಿ ವಾಸಿಸುವದಕ್ಕೆ ಯೋಗ್ಯವಾಗಿದೆ ಎನ್ನುವದು ಮೇಲ್ನೋಟಕ್ಕೆ ಗೊಚರಿಸುತ್ತಿದೆ. ಮನೆಯ ಪುರುಷರನ್ನು ಹೊರತುಪಡಿಸಿದರೆ ಮಹಿಳೆಯರು ಓಡಾಡುವದಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ. ಮನೆ, ಅಂಗಡಿಗಳ ಬಾಗಿಲುಗಳು ಮುಚ್ಚಿದ ಸ್ಥಿತಿಯಲ್ಲಿವೆ.
ಈಗಾಗಲೇ ಜೆಸಿಬಿ ಮೂಲಕ ಕುಸಿದಿರುವ ಮಣ್ಣನ್ನು ರಸ್ತೆ ಬದಿಗೆ ಹಾಕುವ, ಬಿರುಕು ಬಿಟ್ಟಿರುವ ಈ ಭಾಗದ ರಸ್ತೆಯನ್ನು ಮಣ್ಣು ಕಲ್ಲುಗಳನ್ನು ತುಂಬಿಸಿ ತಾತ್ಕಾಲಿಕ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ.