ಮಡಿಕೇರಿ, ಸೆ. 4: ಕೊಡಗಿನಲ್ಲಿ ಮಳೆ ಮತ್ತು ನೆರೆಯಿಂದ ಮನೆ, ಮಠ, ಹೊಲ ಕಳೆದುಕೊಂಡು ಬೀದಿಗೆ ಬಿದ್ದವರಿಗೆ ಬದುಕು ಕಟ್ಟಿಕೊಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಹೊರಡಲಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ತಾ. 5 ರಿಂದ ಅಂದಾಜು 10 ದಿನಗಳ ಕಾಲ ಸ್ಥಳೀಯರ ಅಗತ್ಯಕ್ಕೆ ಪೂರಕವಾಗಿ ಶ್ರಮದಾನ ಮಾಡಿ ನೆರವು ನೀಡಲಿದ್ದಾರೆ. ಪ್ರತಿ ತಾಲೂಕಿನಿಂದ ಕನಿಷ್ಟ ಒಂದು ಲಾರಿ ಹೊರಡಲಿದೆ. ಪ್ರತಿ ಲಾರಿಯಲ್ಲಿ ಕೆಲಸಕ್ಕೆ ಬೇಕಾದ ಸಾಮಗ್ರಿಗಳನ್ನು ಒಯ್ಯಲಾಗುತ್ತದೆ. ಯಾವ ರೈತನೂ ಕೈ ಬೀಸಿಕೊಂಡು ಬರುವಂತಿಲ್ಲ. ಒಂದು ಸಾಮಗ್ರಿಯನ್ನಾದರೂ ಹಿಡಿದುಕೊಂಡು ಬರಬೇಕು ಎಂದು ತೀರ್ಮಾನವಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಮಾಹಿತಿ ನೀಡಿದ್ದಾರೆ.
ನಾಲ್ಕೈದು ಸಾವಿರ ರೈತರು ಕೊಡಗಿನಲ್ಲಿ ಸೇರಲಿದ್ದಾರೆ. ಬಳಿಕ ಗುಂಪು ಗುಂಪಾಗಿ ಅಲ್ಲಿನ ಬೇರೆ ಬೇರೆ ಪ್ರದೇಶಗಳಲ್ಲಿ ಕೆಲಸ ಮಾಡಲಿದ್ದಾರೆ. ಆದರೆ ಊಟ, ವಸತಿಗೆ ಅಲ್ಲಿನ ಜನರಿಗೆ ತೊಂದರೆ ಕೊಡುವಂತಿಲ್ಲ ಎಂದು ಸಂಘದಲ್ಲಿ ತೀರ್ಮಾನಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.