ಕುಶಾಲನಗರ, ಸೆ. 4: ಕುಶಾಲನಗರ ಸಮೀಪದ ಆನೆಕಾಡು ಮೀಸಲು ಅರಣ್ಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಮತ್ತೆ ಪ್ರಾರಂಭಗೊಂಡಿದೆ. ಹೊಸಕೋಟೆಯಿಂದ ಬಸವನಹಳ್ಳಿ ತನಕ ನೂರಾರು ಜಾನುವಾರುಗಳು ರಸ್ತೆ ಮಧ್ಯೆ ಓಡಾಡುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುವದರೊಂದಿಗೆ ಸವಾರರಿಗೆ ಅಪಾಯ ಎದುರಾಗುವ ಸಾಧ್ಯತೆ ಉಂಟಾಗಿದೆ.

ಹಗಲು-ರಾತ್ರಿ ಎನ್ನದೆ ರಸ್ತೆ ಮಧ್ಯೆ ವಿಶ್ರಮಿಸುತ್ತಿರುವ ದನ-ಕರುಗಳು ಏಕಾಏಕಿ ಅತ್ತಿಂದಿತ್ತ ಓಡಾಡುವ ಸಂದರ್ಭ ದ್ವಿಚಕ್ರ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಕಳೆದ ಕೆಲವು ವರ್ಷಗಳ ಹಿಂದೆ ಇದೇ ಸಮಸ್ಯೆ ಕಂಡುಬಂದ ಸಂದರ್ಭ ಪತ್ರಿಕೆಯಲ್ಲಿ ವರದಿಯಾದ ಬೆನ್ನಲ್ಲೇ ಜಾನುವಾರುಗಳ ಮಾಲೀಕರು ಎಚ್ಚರಗೊಂಡು ಈ ಸಮಸ್ಯೆಗೆ ಪರಿಹಾರ ಕಂಡುಬಂದಿತ್ತು. ಇದೀಗ ಮತ್ತೆ ಇದೇ ಸಮಸ್ಯೆ ಮರುಕಳಿಸಿದ್ದು ಜಾನುವಾರುಗಳನ್ನು ಕೂಡಲೇ ಒಯ್ಯದಿದ್ದಲ್ಲಿ ಮೈಸೂರು ಪಿಂಜರಪೋಲ್‍ಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯ ಪ್ರವೀಣ್ ಎಚ್ಚರಿಕೆ ನೀಡಿದ್ದಾರೆ.