ವೀರಾಜಪೇಟೆ, ಸೆ. 4: ಕಳೆದ ಒಂದು ತಿಂಗಳ ಹಿಂದೆ ಮಡಿಕೇರಿ, ಮಕ್ಕಂದೂರು ಸೇರಿದಂತೆ ಉತ್ತರ ಕೊಡಗಿನ ಬಹುಭಾಗ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಅನೇಕರು ಮನೆ ಮಠ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಅಸೋಸಿಯೇಶನ್ ಆಫ್ ರೂರಲ್ ಟೂರಿಸಂ ಸಂತ್ರಸ್ತರಿಗೆ ಸಾಂತ್ವನ ದೊಂದಿಗೆ ಸಂತ್ರಸ್ತರ ಪರಿಹಾರಕ್ಕೂ ನೇರವಾಗಿ ಅಭಯ ಹಸ್ತ ನೀಡಿದೆ ಹಿಂದೆಂದೂ ಕೇಳರಿಯದ ಕಂಡರಿಯದ ಅನಾಹುತ ಸಂಭವಿಸಿರುವದು ಕೊಡಗಿನವರ ದುರಂತ ಎಂದು ಟೂರಿಸಂ ಅಧ್ಯಕ್ಷ ಸಾಗರ್ ಗಣಪತಿ ತಿಳಿಸಿದ್ದಾರೆ.
ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಾಗರ್ ಗಣಪತಿ ಅವರು ಕೊಡಗಿನಲ್ಲಾದ ಪ್ರಕೃತಿ ವಿಕೋಪಕ್ಕೆ ಮೈಸೂರು ಮಂಡ್ಯ ಬೆಂಗಳೂರು ನಗರಗಳಂತಹ ದಾನಿಗಳು ಪರಿಹಾರ ರೂಪದಲ್ಲಿ ಸ್ಪಂದಿಸಿದ್ದಾರೆ. ಈಗ ಜಿಲ್ಲಾಧಿಕಾರಿ ಯವರು ಪ್ರಕೃತಿ ವಿಕೋಪದ ಹಿನ್ನೆಲೆ ಹೊರ ಜಿಲ್ಲೆಯಿಂದ ಕೊಡಗಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ಇದರಿಂದ ರೈತರ ಕೃಷಿ ಹಾಗೂ ಕೊಡಗಿನ ವ್ಯಾಪಾರಿಗಳ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಜಿಲ್ಲಾಧಿಕಾರಿಗಳು ಭೂ ಕುಸಿತ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಮಾತ್ರ ಪ್ರವಾಸಿಗರು ಹೋಗುವದಕ್ಕೆ ನಿರ್ಬಂಧಿಸಬಹುದು. ಇಡೀ ಕೊಡಗಿನ ಪ್ರವಾಸ ತಾಣವನ್ನು ನಿರ್ಬಂಧಿಸುವ ಅವಶ್ಯಕತೆ ಇಲ್ಲ.
ಈಗಿನ ಪ್ರವಾಸೋದ್ಯಮದಿಂದ ಕೊಡಗಿನ ಪ್ರಕೃತಿಗೆ ಯಾವದೇ ಧಕ್ಕೆ ಇಲ್ಲ ಬದಲಾಗಿ ಪ್ರವಾಸೋದ್ಯಮ ಆದಾಯದ ಮೂಲವೂ ಆಗಿದೆ. ಕೊಡಗಿನ ಜಿಲ್ಲಾಧಿಕಾರಿ, ಜಿಲ್ಲಾಡಳಿತ ತಕ್ಷಣ ಪ್ರವಾಸಿಗರ ನಿರ್ಬಂಧದ ಆದೇಶವನ್ನು ಮರು ಪರಿಶೀಲಿಸಿ ತೆರವುಗೊಳಿಸಿ ಕೊಡಗನ್ನು ಈ ಹಿಂದಿನಂತೆಯೇ ಪ್ರವಾಸಿ ತಾಣವಾಗಿ ಮುಂದುವರೆಸುವಂತೆ ಒತ್ತಾಯಿಸಿದರು.
ಟೂರಿಸಂ ಸಂಘಟನೆಯ ಕಾರ್ಯದರ್ಶಿ ಬಲ್ಲಚಂಡ ಭಜನ್ ಬೋಪಣ್ಣ ಮಾತನಾಡಿ, ಕೊಡಗಿನ ಪ್ರವಾಸೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 15000ಕ್ಕೂ ಅಧಿಕ ಯುವಕರು ಉದ್ಯೋಗದಲ್ಲಿ ತೊಡಗಿ ದ್ದಾರೆ. ಈ ಪ್ರವಾಸಿಗರ ನಿರ್ಬಂಧ ಯುವಕರ ಉದ್ಯೋಗದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
ಕೊಡಗು ಪ್ರವಾಸಿ ತಾಣಕ್ಕೆ ಪ್ರವಾಸಿಗರ ನಿರ್ಬಂಧ ಹೇರಿರುವ ದನ್ನು ತೆರವುಗೊಳಿಸಲು ಅಸೋಶಿ ಯೇಶನ್ ಆಫ್ ರೂರಲ್ ಟೂರಿಸಂ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವದು ಎಂದು ಸಂಘಟ ನೆಯ ಬಿಜು ನಾಣಯ್ಯ ತಿಳಿಸಿದರು.
ಗೋಷ್ಠಿಯಲ್ಲಿ ಟೂರಿಸಂ ಸಂಘಟನೆಯ ಚಿತ್ರಾ, ರಿಲೀಕ್ ಬೋಪಣ್ಣ ಸುದೀಶ್, ಪೊನ್ನಪ್ಪ ಹಾಗೂ ಮಂದಣ್ಣ ಹಾಜರಿದ್ದರು.