ಮಡಿಕೇರಿ ಸೆ. 4 : ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿ ಸಂಭವಿಸಿದ ಕಾರಣ ಮರದ ದಿಮ್ಮಿಗಳ ಸಾಗಾಟದ ಮೇಲಿನ ನಿರ್ಬಂಧವನ್ನು ಎರಡು ತಿಂಗಳವೆರೆಗೆ ವಿಸ್ತರಿಸಿರುವ ಜಿಲ್ಲಾಡಳಿತ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಮನವಿ ಮಾಡಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್. ಎಂ. ಚಂಗಪ್ಪ ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಬೆಳೆಸಿದ ಸಿಲ್ವರ್ ಮರಗಳು ನೆಲಕ್ಕುರುಳಿವೆ. ಬಿದ್ದ ಮರಗಳನ್ನು ರೈತರು ದಿಮ್ಮಿಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಅನಿವಾರ್ಯತೆ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಎದುರಾಗಿದೆ. ಆದರೆÀ ಮರದ ದಿಮ್ಮಿಗಳ ಸಾಗಾಟದ ಮೇಲೆ ಆ.31 ರವರೆಗೆ ಇದ್ದ ನಿರ್ಬಂಧವನ್ನು ಮತ್ತೆ ಎರಡು ತಿಂಗಳುಗಳಿಗೆ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ರೈತರ ಸಂಕಷ್ಟವನ್ನು ಅರಿತು ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಮನವಿ ಮಾಡಿರುವದಾಗಿ ತಿಳಿಸಿದರು. ಎರಡು ತಿಂಗಳ ಕಾಲ ಮರಗಳನ್ನು ಹಾಗೇ ತೋಟದಲ್ಲಿಯೇ ಉಳಿಸಿಕೊಂಡರೆ ಕುಂಬಾಗಿ ನಿಷ್ಪ್ರಯೋಜಕ ವಾಗಲಿದೆ. ಅತಿವೃಷ್ಟಿ ಯಿಂದಾಗಿ ಈಗಾಗಲೇ ರೈತರು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದು, ಕೂಲಿ ಕಾರ್ಮಿಕರು ಕೆಲಸ ಸಿಗದೆ ಪರಿತಪಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬಿದ್ದ ಮರಗಳ ದಿಮ್ಮಿಗಳ ಸಾಗಾಟಕ್ಕೆ ಅವಕಾಶ ನೀಡಿದಲ್ಲಿ ಬರುವ ಹಣದಿಂದ ತೋಟಗಳ ನಿರ್ವಹಣೆ ಮಾಡುವದರೊಂದಿಗೆ ಕಾರ್ಮಿಕರಿಗೂ ಕೆಲಸ ಸಿಗಲಿದೆ ಎಂದು ಎಸ್. ಎಂ. ಚಂಗಪ್ಪ ಅಭಿಪ್ರಾಯಪಟ್ಟರು.