ಗೋಣಿಕೊಪ್ಪ ವರದಿ, ಸೆ. 4: ಕೊಡಗಿನಲ್ಲಿ ಮಳೆಯ ರುದ್ರನರ್ತನದಲ್ಲಿ ನಡೆದ ಸಾವು-ನೋವಿನ ನಡುವೆ ಕೃಷಿ ಚಟುವಟಿಕೆಗೆ ಗಂಡಾಂತರ ಬಂದಿದೆ. ಕಾಳುಮೆಣಸು ಬಳ್ಳಿಗೆ ಮಳೆಯಿಂದಾಗಿ ಆವರಿಸುತ್ತಿರುವ ರೋಗಗಳಿಂದಾಗಿ ಕೃಷಿಕ ಬಳ್ಳಿಯನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾನೆ.
ಅತಿವೃಷ್ಟಿಯಿಂದಾಗಿ ನೀರಿನ ಅಂಶ ಹೆಚ್ಚಾದ ಕಾರಣ ಕಾಳುಮೆಣಸು ಬಳ್ಳಿಗಳು ಹಳದಿ ರೋಗ ಮತ್ತು ಶೀಘ್ರ ಸೊರಗು ರೋಗದಿಂದ ಬಳ್ಳಿಯನ್ನೇ ಕಳೆದು ಕೊಳ್ಳುವ ಆತಂಕ ಮೂಡಿಸಿದೆ. ಎಲ್ಲೆಲ್ಲಿಯೂ ಹಳದಿ ಬಣ್ಣಕ್ಕೆ ತಿರುಗಿರುವ ಬಳ್ಳಿಗಳು ಕೃಷಿಕನಲ್ಲಿ ಕರಿಛಾಯೆ ಮೂಡಿಸುತ್ತಿದೆ.
ಬಳ್ಳಿಗಳು ಹಳದಿಯಾಗುವದು ಮತ್ತು ಎಲೆಗಳೆಲ್ಲಾ ಕಪ್ಪಾಗಿ, ಕೊತ್ತು ಕೊಳೆತು ಉದುರುತ್ತಿವೆ. ಭೂಮಿಯಲ್ಲಿನ ಹೆಚ್ಚಿನ ತೇವಾಂಶ ಕಾರಣವಾಗಿದ್ದು ಶೀಘ್ರ ಸೊರಗು ರೋಗಕ್ಕೆ ಬಲಿಯಾಗುತ್ತಿವೆ. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸೂಕ್ತ ಸಲಹೆ ನೀಡಲು ಮುಂದಾಗಿದೆ.
ಗುರುತಿಸುವ ಬಗೆ
ಬುಡ ಕೊಳೆರೋಗ(ಶೀಘ್ರ ಸೊರಗು ರೋಗ)ವು ಪೈಟೋಫ್ತೋರಾ ಕ್ಯಾಪ್ಸಿಸಿ ಎಂಬ ಶೀಲೀಂಧ್ರದಿಂದ ಹರಡುತ್ತಿದೆ. ಇದು ಕಾಳುಮೆಣಸಿಗೆ ಬರುವ ಎಲ್ಲಾ ರೋಗಗಳಿಗಿಂತ ಅತ್ಯಂತ ಹಾನಿಕಾರಕ ರೋಗವಾಗಿದೆ.
ರೋಗದ ಲಕ್ಷಣಗಳು
ಬಳ್ಳಿಯ ಬುಡದ ಒಂದೆರಡು ಎಲೆಗಳು ನಂತರ ಇತರ ಎಲೆಗಳ ಮೇಲೆ ವೃತ್ತಾಕಾರದ ನೀರಿನಿಂದ ತೋಯ್ದಂತಹ ಬೂದು ಬಣ್ಣದ ಮಚ್ಚೆಗಳು ಕಂಡುಬರುತ್ತವೆ. ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕೊಳೆತು ಉದುರಿ ಬೀಳುತ್ತವೆ. ಬುಡದಿಂದ ಸುಮಾರು 30 ರಿಂದ 40 ಸೆಂ.ಮೀ.ವರೆಗೆ ಕಾಂಡದ ಮೇಲೆ ನೀರಿನಿಂದ ತೋಯ್ದಂತಹ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ದೊಡ್ಡದಾಗುತ್ತವೆ. ಈ ರೋಗವು ತೀವ್ರವಾದಾಗ ಕಾಂಡವು ಕೊಳೆತು ಆ ಭಾಗದ ತೊಗಟೆ ಸುಲಿದು ಬಿದ್ದು ಬಳ್ಳಿ ಸಂಪೂರ್ಣವಾಗಿ ಹಾಳಾಗುತ್ತದೆ.
ಕವಲು ಬಳ್ಳಿಗಳು ಮೊದಲು ಈ ರೋಗಕ್ಕೆ ತುತ್ತಾಗುತ್ತವೆ. ಕವಲು ಬಳ್ಳಿ, ಗಂಟಿನ ಭಾಗ, ಎಲೆ, ಕಾಯಿಗೊಂಚಲು, ಬಳ್ಳಿಯ ಮೇಲ್ತುದಿಗಳಲ್ಲೂ ರೋಗಾಣುವಿನ ಸೋಂಕು ಸೇರಿ ಕಂದು ಬಣ್ಣದ ಮಚ್ಚೆಗಳಾಗಿ ನಂತರ ಕಪ್ಪಾಗುತ್ತವೆ. ಹೂವು ಮತ್ತು ಕಾಯಿ ಗೊಂಚಲುಗಳ ತೊಟ್ಟುಗಳ ಮೇಲೆ ನೀರಿನಿಂದ ತೋಯ್ದಂತಹ ಕಪ್ಪು ವರ್ಣದ ಮಚ್ಚೆಗಳು ಬೆಳೆದು ಕ್ರಮೇಣ ಕೊಳೆಯುತ್ತವೆ. ಇದರಿಂದಾಗಿ ಹೂವು ಮತ್ತು ಗೊಂಚಲುಗಳು ಬಾಡಿ ಕೆಳಗೆ ಉದುರುತ್ತವೆ.
ರೋಗಾಣು ಮತ್ತು ರೋಗದ ಪ್ರಸರಣ
ಈ ರೋಗವು ಜೌಗು ಪ್ರದೇಶ ಹಾಗೂ ತೇವಾಂಶದಿಂದ ಕೂಡಿದ ವಾತಾವರಣ ಅನುಕೂಲಕರ. ಪ್ರತಿದಿನ ಸುಮಾರು 22 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿಯುವದು, ಶೇ. 83 ರಿಂದ 99 ರಷ್ಟು ಆರ್ದ್ರತೆ, 22 ರಿಂದ 29 ಡಿಗ್ರ್ರಿ ಸೆಂ. ಉಷ್ಣಾಂಶ ಮತ್ತು ದಿನಕ್ಕೆ 2 ರಿಂದ 3 ಗಂಟೆಗಳಿಗಿಂತ ಕಡಿಮೆ ಸೂರ್ಯನ ಬೆಳಕು ಇದ್ದಾಗ ಬಳ್ಳಿಯು ಬೇಗ ರೋಗದ ಬಾಧೆಗೆ ತುತ್ತಾಗುತ್ತದೆ.
ರೋಗ ಪೀಡಿತ ಬಳ್ಳಿಯ ಉಳಿಕೆಯಲ್ಲಿ ರೋಗಾಣು ಬದುಕಿ ಉಳಿದು ವಂಶಾಭಿವೃದ್ಧಿಯನ್ನು ಮುಂದುವರಿಸುತ್ತದೆ. ತೇವಾಂಶದಲ್ಲಿ ರೋಗಾಣು ಅಲ್ಪ ಸಮಯದಲ್ಲಿ ವೃದ್ಧಿಸಿ ಬೀಜಕಣಗಳನ್ನು ಉತ್ಪತ್ತಿ ಮಾಡುತ್ತದೆ. ಈ ಬೀಜ ಕಣಗಳು ನೀರಿನ ಮೂಲಕ ಬೇರುಗಳನ್ನು ಸೇರಿ ಬೇರು ಕೊಳೆಯುವದಕ್ಕೆ ಕಾರಣವಾಗುತ್ತದೆ. ಕೊಳೆಯುವಿಕೆ ಬಳ್ಳಿಯ ಬುಡಕ್ಕೆ ಪಸರಿಸಿದಾಗ ಬಳ್ಳಿ ಶೀಘ್ರವಾಗಿ ಬಳಲಿ ಸಾಯುವದು. ನಂತರ ಬುಡದಲ್ಲಿಯ ಕೆಲವು ಎಳೆಯ ಬಳ್ಳಿಗಳಿಗೆ ಸೋಂಕು ತಗುಲಿ ಕೊಳೆಯುವದುಂಟು ಹಾಗೂ ಎಲೆಗಳ ಮೇಲೆ 2 ರಿಂದ 3 ಸೆಂ. ಮೀ. ವ್ಯಾಸದ ಕಡು ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಮಳೆ ಹನಿಗಳ ಮೂಲಕ ಇತರ ಬಳ್ಳಿಗಳ ಮೇಲೆ ರೋಗ ಹರಡುತ್ತದೆ.
ಸಮಗ್ರ ಹತೋಟಿ ಕ್ರಮಗಳು
ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರುಗಳ ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು. ನೀರು ನಿಲ್ಲದಂತೆ ಬಸಿಕಾಲುವೆಗಳನ್ನು ನಿರ್ಮಿಸುವದು.
ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಬಳ್ಳಿಯ ಬೇರುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳುವದು. ಹಳದಿ ಬಂದಿರುವ ಅಥವಾ ಶೀಘ್ರ ಸೊರಗು ರೋಗಕ್ಕೆ ತುತ್ತಾಗಿರುವ ಬಳ್ಳಿಗಳ ಹತೋಟಿಗೆ ಮೆಟಾಲಾಕ್ಸಿಲ್ + ಮ್ಯಾಂಕೋಜೆಬ್ (ರಿಡೋಮಿಲ್) 1.25 ಗ್ರಾಂ ಪ್ರತೀ ಲೀಟರ್ ನೀರಿಗೆ (250ಗ್ರಾಂ 200 ಲೀ.ನೀರಿಗೆ) ಅಥವಾ ಫಿûನಾಮೆಡಾನ್ + ಮ್ಯಾಂಕೋಜೆಬ್ (ಸೆಕ್ಟಿನ್) 1.0 ಗ್ರಾಂ ಪ್ರತೀ ಲೀಟರ್ ನೀರಿಗೆ (200 ಗ್ರಾಂ 200 ಲೀ.ನೀರಿಗೆ) ಬೆರಸಿ 3 ರಿಂದ 5 ಲೀ. ದ್ರಾವಣವನ್ನು ಗಿಡದ ಬುಡದ ಭಾಗಕ್ಕೆ ಸುರಿಯುವದು, ಮತ್ತು ಬಳ್ಳಿಗಳು ಚೆನ್ನಾಗಿ ನೆನೆಯುವಂತೆ ಸಿಂಪಡಿಸುವದು.
ಚೆನ್ನಾಗಿರುವ ಬಳ್ಳಿಗಳಿಗೆ ರೋಗ ಹರಡದಂತೆ ತಡೆಗಟ್ಟಲು ಪೊಟ್ಯಾಸಿಯಂ ಪಾಸ್ಪೋನೇಟ್ನ್ನು (ನಟಾಲ್) 3.0 ಮಿ.ಲಿ ಪ್ರತೀ ಲೀಟರ್ ನೀರಿಗೆ (600 ಮಿ.ಲೀ. 200 ಲೀ. ನೀರಿಗೆ) ಬೆರಸಿ 3 ರಿಂದ 5 ಲೀ. ದ್ರಾವಣವನ್ನು ಗಿಡದ ಬುಡದ ಭಾಗಕ್ಕೆ ಸುರಿಯುವದು ಸೂಕ್ತ ಎಂದು ಕೆವಿಕೆ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಸಲಹೆ ನೀಡಿದ್ದಾರೆ.
- ಸುದ್ದಿಪುತ್ರ