ಗೋಣಿಕೊಪ್ಪಲು, ಸೆ.4 : ಕೊಡಗಿನ ಗಡಿ ಭಾಗದ ಕೆ.ಬಾಡಗ ಗ್ರಾಮ ಪಂಚಾಯ್ತಿಯ ಮುಂದೆ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್, ಕಾರ್ಯದರ್ಶಿ ಕಳ್ಳಿಚಂಡ ಧನು ಮುಂದಾಳತ್ವದಲ್ಲಿ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳ ಕಾರ್ಯ ವೈಖರಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.ಕಳೆದ ಬಾರಿ ಮಳೆಯಿಂದ ಕೇಂಬು ಕೊಲ್ಲಿ, ಕರಿಚಿಮಾನಿ, ಕಾಯಿಮನೆ, ಶ್ರೀಮಂಗಲ ಸಂಪರ್ಕ ರಸ್ತೆಯು ಕಡಿತಗೊಂಡಿದ್ದು ಈ ಭಾಗದ ನೂರಾರು ಕುಟುಂಬಗಳಿಗೆ ನಡೆದಾಡಲು ತೊಂದರೆಯಾಗಿತ್ತು. ಕೆಸರಿನಿಂದ ಕೂಡಿರುವ 50 ಮೀಟರ್ ರಸ್ತೆಗೆ ತಾತ್ಕಾಲಿಕವಾಗಿ (ಮೊದಲ ಪುಟದಿಂದ) ಜಲ್ಲಿ ಕಲ್ಲು ಹಾಕುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ಹಲವು ಬಾರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಅಂದಾಜು 8 ಸಾವಿರ ಮೌಲ್ಯದ ಜಲ್ಲಿಕಲ್ಲನ್ನು ರಸ್ತೆಗೆ ಹಾಕಿದಲ್ಲಿ ಸದ್ಯದ ಮಟ್ಟಿಗೆ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸಬಹುದಾಗಿತ್ತು. ಆದರೆ ಪಂಚಾಯ್ತಿ ಪಿ.ಡಿ.ಓ. ಹಲವು ದಿನ ಕಳೆದರೂ ಈ ಬಗ್ಗೆ ಕ್ರಮ ಕೈಗೊಳ್ಳದೇ ಸಾರ್ವಜನಿಕರಿಗೆ, ಗ್ರಾಮಸ್ಥರಿಗೆ ತೊಂದರೆ ಮಾಡಿದ್ದಾರೆ, ಹಾಗೂ ಸಾರ್ವಜನಿಕರೊಂದಿಗೆ ಉಡಾಫೆ ಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
15 ದಿನಗಳೊಳಗೆ ಸಾರ್ವಜನಿಕರ ಓಡಾಟಕ್ಕೆ ರಸ್ತೆ ಸುಗಮಗೊಳ್ಳದಿದ್ದಲ್ಲಿ ಪಂಚಾಯ್ತಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವದು, ರೈತರೊಂದಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳದಿದ್ದಲ್ಲಿ ಪಂಚಾಯ್ತಿಯಿಂದ ವರ್ಗಾವಣೆ ಗೊಳಿಸಲು ಆಗ್ರಹಿಸಲಾಗುವದು ಎಂದು ಚಿಮ್ಮಂಗಡ ಗಣೇಶ್, ಕಳ್ಳಿಚಂಡ ಧನು ಎಚ್ಚರಿಸಿದರು.
ಮಧ್ಯ ಪ್ರವೇಶಿಸಿದ ಕುಟ್ಟ ವಿಭಾಗದ ಪೊಲೀಸರು ಹಾಗೂ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ರಮೇಶ್ ಪಂಚಾಯ್ತಿಯಲ್ಲಿ ಆಧಿಕಾರಿಗಳು ಸಾರ್ವಜನಿಕರೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಅವಶ್ಯವಿರುವ ರಸ್ತೆಯನ್ನು ಪಂಚಾಯ್ತಿ ಅನುದಾನದಲ್ಲಿ ತಕ್ಷಣ ಮಾಡಿಕೊಡುವಂತೆ ಪಿಡಿಓ ಕೆ. ಸೆಲ್ವಿನ್ ಅವರಿಗೆ ಮನವಿ ಮಾಡಿದರು.
ಗ್ರಾಮಸ್ಥರ ಹಾಗೂ ರೈತ ಮುಖಂಡರ ಮನವಿಗೆ ಸ್ಪಂದಿಸಿದ ಪಿ.ಡಿ.ಓ. ಕೆ. ಸೆಲ್ವಿನ್ ಸ್ಥಳದಿಂದ ಪಂಚಾಯ್ತಿಯ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಆಡಳಿತ ಮಂಡಳಿಯೊಂದಿಗೆ ತುರ್ತು ಸಭೆ ನಡೆಸುವ ಮೂಲಕ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡುವದಾಗಿ ಪ್ರತಿಭಟನಾ ಕಾರರಿಗೆ ಭರವಸೆ ನೀಡಿದರು. ಪಿ.ಡಿ.ಓ. ಭರವಸೆಯಿಂದ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭ ರೈತ ಮುಖಂಡರಾದ ಕಟ್ಟೇರ ರಮೇಶ್ ದೇವಯ್ಯ, ಬೊಜ್ಜಂಗಡ ರಾಜಪ್ಪ, ಕಟ್ಟೇರ ಸಂತು, ಸಚಿನ್, ಕಾರ್ಯಪ್ಪ, ಶರೀನ್ ಸೋಮಯ್ಯ, ಪವನ್, ಸುಜನ್, ಮುದ್ದಯ್ಯ, ಕೃಷ್ಣ, ಬೊಜ್ಜಂಗಡ ಚಂಗಪ್ಪ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. -ಹೆಚ್.ಕೆ. ಜಗದೀಶ್