ಕುಶಾಲನಗರ, ಸೆ. 4: ಕುಶಾಲನಗರದ ವಿವಿಧ ಸಂಘ-ಸಂಸ್ಥೆಗಳು ಮಳೆಯಿಂದ ಸಂತ್ರಸ್ತರಾದ ಬಡ ಜನತೆ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಆಹಾರ ಸಾಮಗ್ರಿ, ಬಟ್ಟೆ-ಬರೆಗಳನ್ನು ವಿತರಿಸಿದರು.
ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ಜಿಲ್ಲಾ ಘಟಕದ ಪದಾಧಿಕಾರಿಗಳು, ಕೊಡಗು ಜಿಲ್ಲೆಯ ಕಾರ್ಯಾಧ್ಯಕ್ಷ ಮುರಳೀಧರ್ ನೇತೃತ್ವದಲ್ಲಿ ಮುಟ್ಲು, ಸೂರ್ಲಬ್ಬಿ, ಕಾಟಕೇರಿ, ಮದೆನಾಡು, ಜೋಡುಪಾಲ ಗ್ರಾಮಗಳಿಗೆ ತೆರಳಿ ಆಹಾರ ಸಾಮಗ್ರಿ, ಬಟ್ಟೆ-ಬರೆಗಳನ್ನು ಮನೆ-ಮನೆಗೆ ವಿತರಿಸಿದರು. ಬೆಂಗಳೂರಿನ ಜಿಲ್ಲಾಧ್ಯಕ್ಷ ಕೆ.ಎನ್. ಜಗದೀಶ್, ಕಾರ್ಯಾಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ 4 ಟ್ರಕ್‍ಗಳಲ್ಲಿ ತಂದ ಸಾಮಗ್ರಿಗಳನ್ನು ಸುಮಾರು 50 ಕ್ಕೂ ಅಧಿಕ ಕಾರ್ಯಕರ್ತರು ಮನೆಮನೆಗೆ ತೆರಳಿ ಸಂತ್ರಸ್ತರಿಗೆ ಬೇಕಾದ ಸಾಮಗ್ರಿಗಳನ್ನು ತಲಪಿಸುವ ಕಾರ್ಯಕ್ರಮ ಹಮ್ಮಿಕೊಂಡರು.
ಈ ಸಂದರ್ಭ ಸಂಘಟನೆಯ ಕೊಡಗು ಜಿಲ್ಲಾ ಪ್ರಮುಖರಾದ ಜಿನ್ನು ನಾಣಯ್ಯ, ಸುರೇಶ್ ಶೆಟ್ಟಿ, ಅನಿಲ್ ಅಯ್ಯಪ್ಪ, ಹರೀಶ್, ಬೆಂಗಳೂರಿನ ವಿವೇಕ್, ನಂಜುಂಡ, ರಾಹುಲ್, ಸುಮಂತ್ ಮತ್ತಿತರರು ಇದ್ದರು.
ಕುಶಾಲನಗರ ವಾಸವಿ ಯುವಜನ ಸಂಘದ ಮಾಜಿ ಅಧ್ಯಕ್ಷ ವಿ.ಆರ್. ಮಂಜುನಾಥ್ ನೇತೃತ್ವದಲ್ಲಿ ಆನೆಕಾಡು ಸಾಕಾನೆ ಶಿಬಿರದ ಮಾವುತ-ಕಾವಾಡಿಗರ ಕುಟುಂಬ ಸದಸ್ಯರಿಗೆ ಬಟ್ಟೆ ಬರೆ ಹಾಗೂ ದಿನನಿತ್ಯದ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲಾಯಿತು. ಆಂಧ್ರಪ್ರದೇಶದ ಶ್ರೀ ಬಾಪೂಜಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸರಬರಾಜಾದ ಸಾಮಗ್ರಿಗಳನ್ನು ಈ ಸಂದರ್ಭ ವಿತರಣೆ ಮಾಡಲಾಯಿತು.