ಕುಶಾಲನಗರ, ಸೆ. 4: ಪ್ರಕೃತಿ ವಿಕೋಪಗಳ ಸಂದರ್ಭ ಸಾಂಕ್ರಾಮಿಕ ರೋಗಗಳು ಹರಡಬಹುದಾದ ಸಾಧ್ಯತೆ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರವಹಿಸಬೇಕೆಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ. ಕಲುಷಿತ ನೀರಿನಿಂದ ಮತ್ತು ಕಲುಷಿತ ಆಹಾರದಿಂದ ವಾಂತಿ ಬೇಧಿ, ಕಾಲರ, ಪ್ಲೇಗ್, ಟೈಫಾಯ್ಡ್, ಜಾಂಡಿಸ್, ಇಲಿಜ್ವರ ಮುಂತಾದ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆಯಿದೆ.
ಗಾಳಿಯಿಂದ ಫ್ಲ್ಯೂ, ಹೆಚ್1ಎನ್1, ಕ್ಷಯ ಮುಂತಾದ ರೋಗಗಳು ಹರಡಬಹುದು. ಎಲ್ಲಾ ಕುಡಿವ ನೀರಿನ ಮೂಲಗಳನ್ನು ವಿಶೇಷವಾಗಿ ಪರೀಕ್ಷಿಸಿ ತಕ್ಷಣ ಕ್ಲೋರಿನೇಶನ್ ಮಾಡಿಸಬೇಕು. ವೈಯಕ್ತಿಕ ಸ್ವಚ್ಚತೆ, ಶುದ್ದ ಕುಡಿವ ನೀರಿನ ಮತ್ತು ಆಹಾರ ಸಂರಕ್ಷಣೆ, ಪರಿಸರ ನೈರ್ಮಲ್ಯದ ನಿರ್ವಹಣೆ ಪಾಲನೆ ಮಾಡಬೇಕು. ರಸ್ತೆ, ಬೀದಿ ಬದಿಗಳಲ್ಲಿ ಮಾರುವ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಹೋಟೆಲ್ ಮತ್ತು ಕ್ಯಾಂಟಿನ್ಗಳಲ್ಲಿ ಬಿಸಿನೀರನ್ನು ಕೇಳಿ ಪಡೆಯಬೇಕು. ಕೆಮ್ಮುವಾಗ ಮತ್ತು ಸೀನಿವಾಗ ಕೈವಸ್ತ್ರ ಬಳಸಬೇಕು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ನೀರು ಸಂಗ್ರಹಿಸುವ ಟ್ಯಾಂಕ್ ಮತ್ತು ಟ್ಯಾಂಕರ್ಗಳನ್ನು ಬ್ಲೀಚಿಂಗ್ ಪುಡಿಯಿಂದ ಸ್ವಚ್ಚಗೊಳಿಸಬೇಕು. ಗ್ರಾಮ ವ್ಯಾಪ್ತಿಯಲ್ಲಿ ನೈರ್ಮಲ್ಯವನ್ನು ನಿರ್ವಹಿಸಬೇಕು ಎಂದು ಇಲಾಖೆ ತಿಳಿಸಿದ್ದು ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಿತ್ತಿಪತ್ರಗಳನ್ನು ಹಂಚುವ ಕಾರ್ಯದಲ್ಲಿ ತೊಡಗಿದ್ದಾರೆ.