ಸುಂಟಿಕೊಪ್ಪ, ಸೆ. 4: ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ, ತೋಟ, ಗದ್ದೆ ಮಣ್ಣು ಪಾಲಾಗಿದ್ದು, ಅಕ್ಷರಶ: ಬೀದಿಗೆ ಬಿದ್ದಿರುವ ಸಂತ್ರಸ್ತರಿಗೆ ಆಶ್ರಯ ನೀಡಲಾಗಿತ್ತು. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಖುದ್ದು ಕೊಡಗಿಗೆ ಭೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದಲ್ಲದೆ ಮನೆ, ತೋಟ ಕಳೆದುಕೊಂಡವರಿಗೆ ಪರಿಹಾರ ಘೋಷಿಸಿದ್ದರು. ಅಲ್ಲದೆ ತಾತ್ಕಾಲಿಕವಾಗಿ ಸಂತ್ರಸ್ತತರಿಗೆ ತಲಾ ರೂ. 3,800 ಪರಿಹಾರ ಘೋಷಿಸಿದ್ದರು. ಆದರೆ ಈ ಪರಿಹಾರ ಹಣ ಹಲವರಿಗೆ ಸಿಗದೇ ಇರುವ ಬಗ್ಗೆ ಹಲವರು ನೊಂದಿದ್ದಾರೆ.
ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯಲ್ಲಿ ಮನೆ, ತೋಟ, ಗದ್ದೆ ಕಳಕೊಂಡ ಪಿ.ಟಿ. ಬಿದ್ದಪ್ಪ, ಸೋಮವಾರಪೇಟೆ ಕೊಡವ ಸಮಾಜದ ಪುನರ್ವಸತಿ ಕೇಂದ್ರದಲ್ಲಿದ್ದ ಗರ್ವಾಲೆ ಗ್ರಾ.ಪಂ.ನ ಶಿರಂಗಳ್ಳಿ ಗ್ರಾಮದ ಪಾಸುರ ಎನ್. ಲೋಕೇಶ್, ಎಂ.ಎ. ಮೇದಪ್ಪ, ಪಿ.ಸಿ. ಚಂಗಪ್ಪ ಇವರುಗಳಿಗೆ ಸರಕಾರದ ಪರಿಹಾರ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ.
ಶಿರಂಗಳ್ಳಿ ಗ್ರಾಮಕ್ಕೆ ಮಾದಾಪುರದಿಂದ ತೆರಳುವ ರಸ್ತೆ ಕುಸಿದು ಬಿದ್ದಿದೆ. ಸೂರ್ಲಬ್ಬಿಯಿಂದಲೂ ಶಿರಂಗಳ್ಳಿಗೆ ರಸ್ತೆ ಸಂಪರ್ಕ ಇಲ್ಲದಾಗಿದೆ. ಒಟ್ಟಾರೆ ಶಿರಂಗಳ್ಳಿ ಗರ್ವಾಲೆ ಗ್ರಾಮಸ್ಥರಿಗೆ ಇರುವ ವಾಸದ ಮನೆಗಳಿಗೆ ತೆರಳಲು ಆಗದೇ ಕುಟುಂಬ ಸಮೇತ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬಗಳ ಬದುಕು ಮೂರಾ ಬಟ್ಟೆಯಾಗಿದೆ.
ಕೂಡಲೇ ಈ ವಿಭಾಗದ ರೈತರಿಗೆ ಕಂದಾಯ, ಕೃಷಿ ಇಲಾಖೆಯವರು ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಳೆಯಿಂದ ನಮ್ಮ ವಾಸದ ಮನೆಗಳು ಕಾಫಿ ತೋಟ, ಗದ್ದೆ ಬರೆ ಕುಸಿತದಿಂದ ಸಂಪೂರ್ಣ ಹಾನಿಗೊಂಡಿದ್ದು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ನಡೆಸದಂತಾಗಿದೆ. ವಾಸದ ಮನೆಗಳು ಬಿರುಕಿನಿಂದಾಗಿ ಧರೆಗೆ ಉರುಳುವ ಭೀತಿ ಕಾಡುತ್ತಿದೆ. ಸರಕಾರವು ನಮಗೆ ದೊರೆಯಬೇಕಾದ ಮೂಲ ಸವಲತ್ತು ಹಾಗೂ ಪರಿಹಾರ ಒದಗಿಸಿದ್ದರೆ ಮಾತ್ರ ಜೀವನ ಸಾಗಿಸಲು ಸಹಕರಿಯಾಗಲಿದೆ ಎಂದು ಪಾಸುರ ಎನ್. ಲೋಕೇಶ್ ನೋವಿನಿಂದ ನುಡಿದರು. ಕಾಫಿ ತೋಟ, ಗದ್ದೆ ತುಂಬಾ ಹಾನಿಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಪಾತ್ರೆ, ಬಟ್ಟೆ ಸಂಪೂರ್ಣ ಹಾನಿಗೊಂಡಿದ್ದಲ್ಲಿ ಸರಕಾರ ಘೋಷಿಸಿರುವ ಹಣವನ್ನು ನೀಡಲಾಗುವದು. ಪ್ರತಿ ಗ್ರಾಮಗಳಿಗೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಭೇಟಿ ಪರಿಶೀಲಿಸಿ ಪರಿಹಾರ ಮೊತ್ತವನ್ನು ತಲಪಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವದು ಎಂದು ತಾಲೂಕು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.