ನಾಪೋಕ್ಲು, ಸೆ. 4: ಇಲ್ಲಿಗೆ ಸಮೀಪದ ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಾನುಭೋಗರ ಸುಮಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ಶಾಲಾ ಮುಖ್ಯ ಶಿಕ್ಷಕ ಮನೋಹರನಾಯಕ್ ಸ್ವಚ್ಛ ಭಾರತ ಕುರಿತು ಮಾಹಿತಿ ನೀಡಿದರು. ಪ್ರೌಢಶಾಲೆಯಿಂದ ಪೊನ್ನೋಲ ಗ್ರಾಮಕ್ಕೆ ಹೋಗುವ ದಾರಿವರೆಗೆ ರಸ್ತೆ ಬದಿಯಲ್ಲಿದ್ದ ಪ್ಲಾಸ್ಟಿಕ್, ಬಾಟಲ್, ಮತ್ತಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಿ ಘೋಷಣೆಗಳೊಂದಿಗೆ ಜನಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಮುಂಡ್ಯೋಳಂಡ ರವಿ ಸೋಮಣ್ಣ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚೇನಂಡ ಬೋಪಯ್ಯ, ಕಾರ್ಯದರ್ಶಿ ಬೊವ್ವೇರಿಯಂಡ ಪೊನ್ನಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿಳಿಯಂಡ್ರ ಶರಣï ರತೀಶ್ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿತ, ಸಿಬ್ಬಂದಿ ದಿನೇಶ್, ಆರೋಗ್ಯ ಕಾರ್ಯಕರ್ತೆ ಕನಕ, ಶಾಲಾ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕರು, ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. -ದುಗ್ಗಳ