ಸೋಮವಾರಪೇಟೆ, ಸೆ.4: ಮೂರು ತಿಂಗಳು ಎಡೆ ಬಿಡದೆ ಸುರಿದ ಭಾರೀ ಮಳೆಗೆ ಕೂಗೂರು ಗ್ರಾಮದ ಕೆ.ಆರ್.ರಾಜಪ್ಪ ಅವರಿಗೆ ಸೇರಿದ ಮೂರು ಎಕರೆ ಜಾಗದಲ್ಲಿ ಬೆಳೆದಿದ್ದ 1500ಕ್ಕೂ ಅಧಿಕ ಕಾಳುಮೆಣಸು ಬಳ್ಳಿಗಳು ರೋಗಪೀಡಿತವಾಗಿ ನಾಶವಾಗಿವೆ.

ಮೂರು ಎಕರೆ ಜಾಗದಲ್ಲಿ 1500ರಷ್ಟು ಬಳ್ಳಿಗಳಿದ್ದು, ಹತ್ತು ವರ್ಷದಿಂದ ಸಮೃದ್ಧವಾಗಿ ಬೆಳೆದು ಫಸಲು ಕೊಡುತ್ತಿದ್ದವು. ಪ್ರಸಕ್ತ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಕೃಷಿಕ ರಾಜಪ್ಪ ಅವರು, ನಿರಂತರ ಮಳೆಯಿಂದ ನಷ್ಟ ಅನುಭವಿಸಿದ್ದಾರೆ.

ಸುಮಾರು ಹತ್ತು ಲಕ್ಷದಷ್ಟು ಆರ್ಥಿಕ ನಷ್ಟ ಅನುಭವಿಸಿದ್ದು, ಇನ್ನು ಕಾಳುಮೆಣಸು ಬಳ್ಳಿಗಳನ್ನು ಬೆಳೆಯಲು ಅಸಾಧ್ಯವಾಗಿದೆ ಎಂದು ರಾಜಪ್ಪ ಅವರು ಅಳಲು ತೋಡಿಕೊಂಡಿದ್ದಾರೆ.

ಕಾಳುಮೆಣಸು ತೋಟದ ನಿರ್ವಹಣೆ ಕಷ್ಟಕರವಾಗಿದ್ದು, ಉತ್ಪಾದನಾ ವೆಚ್ಚ ಅಧಿಕವಾಗಿದೆ. ಆದರೆ ಇದ್ದಕ್ಕಿದ್ದಂತೆ ಬಳ್ಳಿಗಳು ನಾಶವಾಗುತ್ತಿವೆ. ಸ್ಥಳಕ್ಕೆ ಬಂದು ರೋಗದ ಬಗ್ಗೆ ಮಾಹಿತಿ ನೀಡುವಂತೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾರು ಬಂದಿಲ್ಲ. ಕೂಡಲೆ ಸ್ಥಳ ಪರಿಶೀಲನೆ ಮಾಡಿ, ಫಸಲು ಹಾನಿ ಪರಿಹಾರ ನೀಡಬೇಕು ಎಂದು ರಾಜಪ್ಪ ಒತ್ತಾಯಿಸಿದ್ದಾರೆ.