ಆಗಸ್ಟ್ 16.., ಕೊಡಗಿನ ಜನತೆ ಮರೆಯಾಗದಂತಹ ಕರಾಳ ದಿನ.., ಕಷ್ಟ-ನಷ್ಟ, ಸಾವು-ನೋವುಗಳನ್ನು ಕಂಡವರ ಪಾಲಿಗಂತೂ ಕ್ಯಾಲೆಂಡರ್‍ನಲ್ಲಿ ಬರೆದಿಟ್ಟುಕೊಳ್ಳುವಂತಹ ದುರ್ದಿನ. ಇಂತವರ ಸಾಲಿಗೆ ಸೇರುವ ಕಾಂಡನಕೊಲ್ಲಿ ಗ್ರಾಮದ ಹಾಲೇರಿಯ ಮನಿಯಪ್ಪನ ಮಿಥುನ್ ಬಾಳು ಈಗ ಗೋಳಾಗಿದೆ. ಮಿಥುನ್ ತನ್ನ ನೋವಿನ ಕತೆಯನ್ನು ಹೇಳುವಾಗ ಮರುಕ ಉಂಟಾಗದಿರದು.

ಆಗಸ್ಟ್ 16 ರಂದು ಜೋರು ಮಳೆ ಗಾಳಿ ಇತ್ತು. ನಾನು ಅಮ್ಮ (ಚಂದ್ರಾವತಿ-67) ಮನೆಯಲ್ಲೇ ಇದ್ದೆವು. ಅದಕ್ಕಿಂತ ಹಿಂದೆ ಕಟ್ ಆಗಿದ್ದ ಹಟ್ಟಿಹೊಳೆ ರಸ್ತೆ ನೋಡಿಕೊಂಡು ಬರಲು ಹೊರಟಿದ್ದೆವು. ಆಗಿಂದಲೇ ಮನೆಯ ಬಳಿ ಸ್ವಲ್ಪ ಕುಸಿಯಲಾರಂಭಿಸಿತು. ಯಾರಿಗಾದರೂ ವಿಷಯ ತಿಳಿಸೋಣವೆಂದರೆ ಕರೆಂಟ್ ಇಲ್ಲ, ಮೊಬೈಲ್ ನೆಟ್‍ವರ್ಕ್ ಇಲ್ಲ. ನಾವು ಸೇರಿ ನಾಲ್ಕು ಕುಟುಂಬಗಳಿದ್ದು, ನಾವು ಹಾಗೂ ದೊಡ್ಡಪ್ಪನ ಮಗನ ಕುಟುಂಬದವರನ್ನು ಬಿಟ್ಟು ಬೇರೆ ಎಲ್ಲ ಖಾಲಿ ಮಾಡಿದ್ದರು. ಆದರೆ ನಮಗೆ ಗೊತ್ತಿರಲಿಲ್ಲ.., ರಾತ್ರಿಯಾಗುತ್ತಲೇ ಭಾರೀ ಸದ್ದು ಕೇಳುತ್ತಿತ್ತು. ಬೈಕ್ ಹೋಗುವ ರೀತಿ ಸದ್ದು ಬರುತ್ತಿತ್ತು. ಕೊನೆಗೆ ಭಯದಿಂದ ಮನೆಗೆ ಬಾಗಿಲು ಕೂಡ ಹಾಕದೆ ಅಮ್ಮನೊಂದಿಗೆ, ದೊಡ್ಡಪ್ಪನ ಮಗ ಅವರ ಹೆಂಡತಿ ನಾವೆಲ್ಲ ಮನೆಯಿಂದ ಹೊರಬಂದೆವು.

ರಾತ್ರಿ 11.30ರ ಸಮಯ ಕತ್ತಲಲ್ಲೇ ತಡಕಾಡಿಕೊಂಡು ಬರಿ ಕಾಲಿನಲ್ಲಿ ನಡೆಯುತ್ತ ಮೇಲಿನ ಭಾಗದಲ್ಲಿರುವ ನಮ್ಮ ಕುಟುಂಬದವರ ಮನೆಯ ಬಳಿ ತಲಪಿದೆವು. ಆ ಮನೆಗೆ ಬೀಗ ಹಾಕಿದ್ದರಿಂದ ಮನೆಯ ಹೊರಗಡೆ ನಡುಗುತ್ತಾ ಕಳೆದೆವು.

ಬೆಳಿಗ್ಗೆ 5.30ಕ್ಕೆ ನಾನು ಮತ್ತು ಅಣ್ಣ ಮನೆಯ ಬಳಿ ಹೋಗಿ ನೋಡಿದಾಗ ತೋಟ, ಗದ್ದೆ, ಬಾವಿ ಎಲ್ಲವೂ ಕೊಚ್ಚಿ ಹೋಗಿತ್ತು. ಮನೆ ಬಿರುಕು ಬಿಟ್ಟಿತ್ತು. ಅಲ್ಲಿಂದ ಮೇಲ್ಭಾಗಕ್ಕೆ ಹಾಲೇರಿ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಒಂದು ಪಿಕ್‍ಅಪ್ ಬಂದಿತು. ಅವರು ಕಾಂಡನಕೊಲ್ಲಿ ಶಾಲೆವರೆಗೆ ಬಿಟ್ಟರು. ಅಲ್ಲಿಂದ ಸುಂಟಿಕೊಪ್ಪದವರೆಗೆ ಸುಮಾರು 12 ಕಿ.ಮೀ. ನಡೆದುಕೊಂಡೇ ಬಂದೆವು. ಅಲ್ಲಿಂದ ವಾಹನದಲ್ಲಿ ಹಾರಂಗಿ ಬಳಿಯ ಅತ್ತೂರುವಿನಲ್ಲಿರುವ ಮುಕ್ಕಾಟಿ ಮನೆಗೆ ಬಂದು ಸೇರಿದೆವು. ಆ ಮೇಲೆ ಬಸವನಹಳ್ಳಿಯ ದೊಡ್ಡಮ್ಮನ ಮಗನ ಮನೆಯಲ್ಲಿ ತಂಗಿದೆವು.

ಈ ಸಮಯದಲ್ಲಿ ಅಮ್ಮನಿಗೆ ಬಿಪಿ ಜೋರಾಗಿತ್ತು. ಮನೆ-ತೋಟ ಹೋದ ಬಗ್ಗೆ ಕೊರಗುತ್ತಿದ್ದರು. ತಾ. 26 ರಂದು ಮನೆಗೆ ನೆಂಟರಿಷ್ಟರೆಲ್ಲ ಬಂದು ಮಾತನಾಡಿಸಿ ಹೋಗಿದ್ದರು. ಆದರೆ ಅಂದು ರಾತ್ರಿ ಮಲಗಿದ ಅಮ್ಮ ಮೇಲೇಳಲಿಲ್ಲ ಎನ್ನುವಾಗ ಮಿಥುನ್ ಕಣ್ಣಲ್ಲಿ ನೀರಾಡಿತು.

ಬೆಳಿಗ್ಗೆ 6 ಗಂಟೆಗೆ ಎದ್ದೇಳುವ ಅಮ್ಮ 7.30 ತ್ತಾದರೂ ಎದ್ದೇಳದಿದ್ದಾಗ ರೂಮಿಗೆ ಹೋಗಿ ನೋಡಿದೆ. ಅಮ್ಮ ಮಲಗಿದಲ್ಲಿಯೇ ತಣ್ಣಗಾಗಿದ್ದರು ಎಂದು ಕಂಬನಿ ಮೀಡಿದ. ವಿಧಿಯಾಟ ಎಂದರೆ ಹೀಗೇನೇ ಕಾಣುತ್ತೆ, ಮಿಥುನ್ ತಂದೆ ಪೂವಯ್ಯ ಅವರು ಕೂಡ 2008ರಲ್ಲಿ ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇದೀಗ ಅಮ್ಮನೂ ಇಲ್ಲವಾದರು. 15 ದಿನಗಳ ಹಿಂದೆ ಕಾಡಾನೆ ಧಾಳಿ ಮಾಡಿ ಬಾಳೆ, ತೋಟ ನಾಶ ಮಾಡಿತ್ತು. 24 ವರ್ಷ ಪ್ರಾಯದ ಸದಾ ಚಟುವಟಿಕೆ, ಲವಲವಿಕೆಯಿಂದ ಇರುವ, ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ವಿದ್ಯಾರ್ಥಿ ಎಂಬ ಕೀರ್ತಿಗೆ ಪಾತ್ರನಾಗಿರುವ ಬಿಬಿಎಂ ವ್ಯಾಸಂಗ ಮಾಡಿರುವ ಮಿಥುನ್‍ಗೆ ದಿಕ್ಕು ತೋಚದಂತಾಗಿದೆ. ಕೃಷಿಯನ್ನೆ ಮುಂದುವರಿಸಿಕೊಂಡು ಬಂದ ಈತನಿಗೂ ಅದೂ ಕೂಡ ಇಲ್ಲದಂತಾಗಿದೆ. ಈತನ ಬದುಕು ಹಸನಾಗಲು ಉದ್ಯೋಗದ ಅವಶ್ಯಕತೆಯಿದೆ. ಈತನಿಗೆ ನೆರವಾಗುವವರು ಖುದ್ದಾಗಿ ಸಂಪರ್ಕಿಸುವಂತೆ ಕೋರಿಕೆ.

ಮೊ. 8762260613.