ಗೋಣಿಕೊಪ್ಪಲು, ಸೆ. 4 : ಕಾವೇರಿ ಕಾಲೇಜು ಗೋಣಿಕೊಪ್ಪಲು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕರು ಮಡಿಕೇರಿಯಲ್ಲಿ ಮಳೆಯಿಂದ ನಿರಾಶ್ರಿತರಾಗಿ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿರುವ ಸಂತ್ರಸ್ತರಿಗೆ ಸಹಾಯ ಮಾಡಲು ಬಸ್ಸಿನ ಸೌಲಭ್ಯವಿಲ್ಲದಿದ್ದಾಗ ಮಡಿಕೇರಿ ಮೈತ್ರಿ ಭವನಕ್ಕೆ ತೆರಳಿ ನಿರಾಶ್ರಿತರ ಸೇವೆಗೆ ಮುಂದಾಗಿರು ತ್ತಾರೆ. ಇವರು ಅಲ್ಲಿನ ಜನರಿಗೆ ಬೇಕಾದ ವಸ್ತುಗಳನ್ನು ಕೊಡುವ ಹಾಗೂ ಸಾರ್ವಜನಿಕರು ಕೊಡುವ ಉಡುಗೊರೆಯನ್ನು ವಿಂಗಡಿಸಿ ಸಂತ್ರಸ್ತರಿಗೆ ಅವಶ್ಯವಿರುವ ವಸ್ತ್ರ, ಚಿಕಿತ್ಸಾ ಸಾಮಾಗ್ರಿ, ಆಹಾರ ಪದಾರ್ಥ ಗಳನ್ನು ವಿತರಿಸುವುದು, ಅಲ್ಲಿನ ಮಕ್ಕಳಿಗೆ ಪಾಠ ಹೇಳಿಕೊಡುವುದು. ಜೊತೆಗೆ ಮನರಂಜನಾ ಕಾರ್ಯಕ್ರಮವನ್ನು ನೀಡುವುದರ ಮೂಲಕ ನೊಂದವರ ಮನಸ್ಸಿನ ನೋವನ್ನು ಕಡಿಮೆ ಮಾಡುವ ಕಾರ್ಯ ಮಾಡಿದ್ದಾರೆ. ಅಲ್ಲದೆ ಆವರಣವನ್ನು ಸ್ವಚ್ಛಗೊಳಿಸುವ ಹಾಗೂ ಅಡುಗೆ ಮಾಡಲು ಸಹಾಯ ಮಾಡುವುದು, ಪಾತ್ರೆಗಳನ್ನು ಶುಚಿಗೊಳಿಸುವುದು ಮತ್ತಿತರ ಕಾರ್ಯಗಳನ್ನು ಮಾಡಿ ನಿರಾಶ್ರಿತರ ಮನ ಗೆದ್ದಿದ್ದಾರೆ. ಈ ಸ್ವಯಂ ಸೇವಕರು ಸುಮಾರು ಎರಡು ವಾರಗಳ ಕಾಲ ಮಡಿಕೇರಿಯಲ್ಲೇ ವಾಸ್ತವ್ಯ ಹೂಡಿ ನಿರಂತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
-ಮತ್ರಂಡ ಹರ್ಷಿತ್ಪೂವಯ್ಯ