ಸಿಂಚು

ಕುಶಾಲನಗರ, ಸೆ. 4: ಹಾರಂಗಿ ಜಲಾಶಯಕ್ಕೆ ಏಕಾಏಕಿ ಹೆಚ್ಚುವರಿ ಒಳಹರಿವು ಬಂದಿರುವ ಬಗ್ಗೆ ಕಾವೇರಿ ನೀರಾವರಿ ನಿಗಮ ಮೂಲಕ ಪರಿಶೀಲನೆ ನಡೆಸಲು ತಜ್ಞರ ತಂಡ ರಚಿಸಲಾಗಿದೆ ಎಂದು ಹಾರಂಗಿ ಯೋಜನಾ ವೃತ್ತದ ಮುಖ್ಯ ಅಧೀಕ್ಷಕ ಅಭಿಯಂತರ ಜೆ.ಪ್ರಕಾಶ್ ಅವರು ತಿಳಿಸಿದ್ದಾರೆ.

ಅವರು ತಮ್ಮ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಜಲಮಾರ್ಗ ಬದಲಾಗುವ ಮೂಲಕ ಜಲಾಶಯಕ್ಕೆ ಹೆಚ್ಚುವರಿ ಪ್ರಮಾಣದ ನೀರು ಹರಿದು ಬಂದಿರುವ ಶಂಕೆಯಿದ್ದು ಈ ಹಿನ್ನೆಲೆಯಲ್ಲಿ ಇಲಾಖೆ ಪತ್ತೆ ಹಚ್ಚುವ ಕಾರ್ಯ ನಡೆಸಲಿದೆ ಎಂದಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು ನಿಗಮಕ್ಕೆ ಸೂಚನೆ ನೀಡಿರುವದಾಗಿ ಮಾಹಿತಿ ಒದಗಿಸಿದರು.

ಆಗಸ್ಟ್ 15 ರ ನಂತರ ನಿರಂತರವಾಗಿ 3 ದಿನಗಳ ಕಾಲ ಹಾರಂಗಿ ಅಣೆಕಟ್ಟೆಗೆ 1 ಲಕ್ಷ ಕ್ಯೂಸೆಕ್ ಪ್ರಮಾಣಕ್ಕಿಂತಲೂ ಅಧಿಕ ಒಳಹರಿವು ಬಂದಿದ್ದು ಈ ಸಂದರ್ಭ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು. 16 ಮತ್ತು 17 ರಂದು 80 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನಿರಂತರವಾಗಿ ನದಿಗೆ ಹರಿಸಲಾಗಿದೆ ಎಂದು ಮಾಹಿತಿ ಒದಗಿಸಿದರು. ಅಣೆಕಟ್ಟೆ ನಿರ್ಮಾಣವಾದ 4 ದಶಕಗಳ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ಅತಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದೆ. ಕಳೆದ ಸಾಲಿಗಿಂತ ಈ ಬಾರಿ 5 ಪಟ್ಟು ಅಧಿಕ ನೀರು ಹರಿದಿದೆ ಎಂದು ತಿಳಿಸಿದರು.

ಈ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಅಣೆಕಟ್ಟೆಯ ಭದ್ರತೆ ಬಗ್ಗೆ ತಪ್ಪು ಮಾಹಿತಿ ಬಿತ್ತರಿಸಿದ ಜನರಲ್ಲಿ ಭಯಭೀತಿ ಉಂಟು ಮಾಡಿದ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವದು. ಪೊಲೀಸ್ ಇಲಾಖೆ ಮೂಲಕ ಮಾಹಿತಿಯ ಮೂಲವನ್ನು ಪತ್ತೆಹಚ್ಚಿ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮಕೈಗೊಳ್ಳಲಾಗುವದು ಎಂದರು.

ಹಾರಂಗಿ ಅಣೆಕಟ್ಟೆಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೆ ನಿಗಮದಲ್ಲಿ ಚರ್ಚೆ ನಡೆದಿದ್ದು ಎಲ್ಲಾ ಡ್ಯಾಂಗಳಿಗೆ ಸಿಬ್ಬಂದಿ ನೇಮಕ ಮಾಡುವ ನಿಟ್ಟಿನಲ್ಲಿ 700 ಹುದ್ದೆ ಭರ್ತಿ ಮಾಡಲು ನಿರ್ಧರಿಸಲಾಗಿದೆ.

ಈ ಸಂದರ್ಭ ಹಾರಂಗಿ ಅಣೆಕಟ್ಟು ವಿಭಾಗದ ಪ್ರಭಾರ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜು, ಸಹಾಯಕ ಅಭಿಯಂತರ ನಾಗರಾಜು ಇದ್ದರು.

ಸಂತ್ರಸ್ತರ ಮನೆಗಳಿಗೆ ಅಧಿಕಾರಿಗಳ ಭೇಟಿ

ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ ಸಂದರ್ಭ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಸಂತ್ರಸ್ತರ ಮನೆಗಳಿಗೆ ತಕ್ಷಣ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲು ಹಾರಂಗಿ ಯೋಜನಾ ವೃತ್ತದ ಮುಖ್ಯ ಅಧೀಕ್ಷಕ ಅಭಿಯಂತರ ಜೆ.ಪ್ರಕಾಶ್ ಆದೇಶ ನೀಡಿದ್ದಾರೆ.

ಅವರು ಕೊಪ್ಪ ಗ್ರಾಮದ ಮುಳುಗಡೆ ಸಂತ್ರಸ್ತರು ನೀಡಿದ ಮನವಿ ಸಂದರ್ಭ ಪ್ರತಿಕ್ರಿಯಿಸಿ ಅಣೆಕಟ್ಟೆಯ ಭದ್ರತಾ ದೃಷ್ಟಿಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿದೆ. ಈ ಸಂದರ್ಭ ತುಂಬಿ ಹರಿಯುತ್ತಿದ್ದ ಕಾವೇರಿ ನದಿಯ ಹಿನ್ನೀರಿನಿಂದ ಕೊಪ್ಪ ವ್ಯಾಪ್ತಿಯ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಲು ಕಾರಣವಾಗಿದೆ. ಈ ಬಗ್ಗೆ ನಿಗಮದ ಅಧಿಕಾರಿಗಳ ವರದಿಯನ್ನು ಕೊಡಗು ಮತ್ತು ಮೈಸೂರು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವ ಮೂಲಕ ಹಾನಿಗೊಳಗಾದ ಮನೆಯ ಮಾಲೀಕರಿಗೆ ನಷ್ಟ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದಾರೆ. ಹಾರಂಗಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಅವರಿಗೆ ಈ ಬಗ್ಗೆ ತುರ್ತು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ನದಿ ಪಾತ್ರದಿಂದ ಅಂದಾಜು ಕಿಮೀ ದೂರದಲ್ಲಿರುವ ಕೊಪ್ಪ ಗ್ರಾಮದ 70 ಕ್ಕೂ ಅಧಿಕ ಮನೆಗಳು ನೀರಿನಿಂದ ಅವೃತಗೊಂಡಿದ್ದು ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಕುಶಾಲನಗರದಲ್ಲಿ ಮುಳುಗಡೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ನೀಡಲಾಗಿದ್ದರೂ ಗಡಿಭಾಗದ ಕೊಪ್ಪದಲ್ಲಿ ಹಾನಿಗೊಂಡ ಮನೆಗಳಿಗೆ ಕನಿಷ್ಟ ಪರಿಹಾರ ಕೂಡ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಮೂಲಕ ನಷ್ಟ ಪರಿಹಾರ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭ ಎಂ.ಎನ್. ಚಂದ್ರಮೋಹನ್, ಕೆ.ಪಿ. ಕುಮಾರ್, ಕಾವಲುಪಡೆ ಕೊಪ್ಪ ಅಧ್ಯಕ್ಷ ಕೃಷ್ಣ ಮತ್ತಿತರರು ಇದ್ದರು.