ಕೂಡಿಗೆ, ಸೆ. 4: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಅತಿಯಾದ ಮಳೆಯಿಂದ ಹಾನಿಯಾಗಿ ಸಂತ್ರಸ್ತರಾಗಿರುವವರಿಗೆ ಬಂದಿದ್ದ ವಸ್ತುಗಳನ್ನು ಗ್ರಾಮ ಪಂಚಾಯಿತಿ ವಹಿಸಿಕೊಂಡು ದುರುಪಯೋಗಕ್ಕೆ ಬಳಕೆಯಾಗದಂತೆ ತಡೆಗಟ್ಟಬಹುದಿತ್ತು ಎಂದು ಸದಸ್ಯ ಮಹೇಶ್ ಕಾಳಪ್ಪ ಸಭೆಯ ಗಮನಕ್ಕೆ ತಂದರು.
14ನೇ ಹಣಕಾಸಿನ ಕಾಮಗಾರಿಗಳ ಬಗ್ಗೆ ಕ್ರಿಯಾ ಯೋಜನೆಗಳ ರೂಪಿಸುವ ಬಗ್ಗೆ ಚರ್ಚೆ ನಡೆಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗುವಂತೆ ಕೆರೆಯ ದಡ ಮತ್ತು ಕಟ್ಟೆಯನ್ನು 1.5 ಅಡಿಯಷ್ಟು ಎತ್ತರಿಸಬೇಕು ಎಂಬದಾಗಿ ಗ್ರಾ.ಪಂ. ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ ಪ್ರಸ್ತಾಪಿಸಿದರು. ಈ ವಿಷಯವಾಗಿ ಎಲ್ಲಾ ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡು ಕಾಮಗಾರಿ ಪ್ರಾರಂಭಿಸಲು ಒಮ್ಮತ ಸೂಚಿಸಿದರು.
ಸಭೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಸರ್ಕಾರದ ಮಾಹಿತಿ ಹಾಗೂ ಸುತ್ತೋಲೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇರಿದಂತೆ ಸದಸ್ಯರು ಇದ್ದರು.