ಕುಸಿದ ಸೇತುವೆ : ಹಲವರು ಸಿಲುಕಿರುವ ಶಂಕೆ
ಕೋಲ್ಕತ್ತಾ, ಸೆ. 4: ದಕ್ಷಿಣ ಕೋಲ್ಕತ್ತಾದ ತಾರತಲಾದಲ್ಲಿ 60 ವರ್ಷದಷ್ಟು ಹಳೆಯದಾದ ಮಾಜೇರ್ ಹಾಟ್ ಮೇಲ್ಸೇತುವೆ ಏಕಾಏಕಿ ಕುಸಿದು ಬಿದ್ದಿದೆ. ರೈಲ್ವೆ ಹಳಿಯ ಮೇಲೆ ಸೇತುವೆ ಕುಸಿದಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಹಲವರು ಸೇತುವೆಯ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ದುರಂತ ನಡೆದ ಸ್ಥಳ ನಿರ್ಮಾಣ ಹಂತದ ಕಟ್ಟಡಗಳಿಂದ ಕೂಡಿದೆ. ಕನಿಷ್ಟ 15 ಮಂದಿಗೆ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ.
ವಿಮಾನ ಪತನ:ಪೈಲಟ್ ಅಪಾಯದಿಂದ ಪಾರು
ಜೋಧ್‍ಪುರ, ಸೆ. 4: ಭಾರತೀಯ ವಾಯುಸೇನೆಯ ಮಿಗ್ 27 ಯುದ್ಧ ವಿಮಾನ ರಾಜಸ್ಥಾನದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಸ್ಥಾನದ ಜೋದ್‍ಪುರದಲ್ಲಿ ಈ ಘಟನೆ ನಡೆದಿದ್ದು, ಎಂದಿನ ಪ್ರಕ್ರಿಯೆಯಂತೆಯೇ ಜೋಧ್‍ಪುರದಲ್ಲಿ ಪೈಲಟ್ ತನ್ನ ಮಿಗ್ 27 ಯುದ್ಧ ವಿಮಾನವನ್ನು ಟೇಕ್ ಆಫ್ ಮಾಡಿದ್ದು, ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳ ಅಂತರದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಕೂಡಲೇ ವಿಮಾನ ಭೂಮಿ ಅಪ್ಪಳಿಸುವ ಮುನ್ಸೂಚನೆ ದೊರೆತ ಪೈಲಟ್ ತುರ್ತು ನಿರ್ಗಮನದ ಮೂಲಕ ಯಶಸ್ವಿಯಾಗಿ ಹೊರಗೆ ಜಿಗಿದಿದ್ದಾನೆ. ಬಳಿಕ ಕೆಳಗೆ ಬಿದ್ದ ವಿಮಾನ ಸ್ಫೋಟಗೊಂಡಿದೆ. ವಿಮಾನದಲ್ಲಿದ್ದ ಇಂಧನದಿಂದಾಗಿ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡು ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನ ಸ್ಫೋಟಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿ ಭಾರೀ ಪ್ರಮಾಣದ ಸದ್ದು ಕೇಳಿದೆ. ಕೂಡಲೇ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಪ್ರಸ್ತುತ ಘಟನೆ ಸಂಬಂಧ ಸೇನೆ ಆಂತರಿಕ ತನಿಖೆಗೆ ಆದೇಶಿಸಿದೆ. ಇನ್ನು ಮಿಗ್-27 ವಿಮಾನವನ್ನು 1980ರ ದಶಕದಲ್ಲಿ ಸೋವಿಯತ್ ರಾಷ್ಟ್ರದಿಂದ ಖರೀದಿಸಲಾಗಿತ್ತು. ಇದು 1999ರ ಕಾರ್ಗಿಲ್ ಯುದ್ಧದಲ್ಲಿ ಕಾರ್ಯಾಚರಣೆ ನಡೆಸಿತ್ತು. ಕಳೆದ ಜುಲೈನಲ್ಲಿ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಮಿಗ್-21 ವಿಮಾನ ಪತನಗೊಂಡ ಪರಿಣಾಮ ಪೈಲೆಟ್ ಮೃತಪಟ್ಟಿದ್ದರು.
ಸಾಮಾಜಿಕ ಜಾಲತಾಣ : ದೂರವಿರಲು ಸೇನೆ ಸಲಹೆ
ನವದೆಹಲಿ, ಸೆ. 4: ಸಾಮಾಜಿಕ ಜಾಲತಾಣಗಳಿಂದ ದೂರವಿರಿ ಎಂದು ಭಾರತೀಯ ಯೋಧರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಲಹೆ ನೀಡಿದ್ದಾರೆ. ಆಧುನಿಕ ಸಮರದಲ್ಲಿ ಮಾಹಿತಿ ಅತ್ಯಂತ ಪ್ರಮುಖವಾಗಿರುತ್ತದೆ. ಇಂದಿನ ಆಧುನಿಕ ಸಮರ ಪ್ರಕಾರದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟೆಲಿಜೆನ್ ಅಥವಾ ಎಐ) ಕೂಡ ಸಮರ್ಥವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ಪ್ರಯೋಜನವನ್ನು ಹತೋಟಿಯಲ್ಲಿಕೊಳ್ಳಬೇಕಾದರೆ, ನಾವು ಸಾಮಾಜಿ ಮಾಧ್ಯಮಗಳ ಮೂಲಕ ತೊಡಗಿಸಿಕೊಳ್ಳಬೇಕು, ಕೃತಕ ಬುದ್ಧಿ ಮತ್ತೆ ಸಾಮಾಜಿಕ ಜಾಲತಾಣಗಳ ಮೂಲಕ ಬರುತ್ತದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಯೋಧರು ದೂರವಿರುವಂತೆ ಸೂಚಿಸುವಂತೆ ನಮಗೆ ಸಲಹೆಗಳು ಬಂದಿವೆ. ಯೋಧರು ಸ್ಮಾರ್ಟ್‍ಫೆÇೀನ್‍ಗಳನ್ನು ಬಳಕೆ ಮಾಡದಂತೆ ತಡೆಯಲು ಸಾಧ್ಯವೇ? ಸ್ಮಾರ್ಟ್‍ಫೆÇೀನ್ ಬಳಕೆಯನ್ನು ತಡೆಯಲು ಸಾಧ್ಯವಾಗದಿದ್ದರೆ, ಅದನ್ನು ಬಳಕೆ ಮಾಡಲು ಬಿಡುವದೇ ಒಳಿತು. ಆದರೆ, ಶಿಸ್ತುಪಾಲನೆ ಕಡ್ಡಾಯವಾಗಿರುತ್ತದೆ. ಸಾಮಾಜಿಕ ಜಾಲತಾಣಗಳು ಇದ್ದೇ ಇರುತ್ತೇವೆ. ಅವುಗಳನ್ನು ಯೋಧರು ಬಳಕೆ ಮಾಡುತ್ತಾರೆ. ಆದರೆ, ಅವುಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳುವ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ. ಅದನ್ನೇ ನಮ್ಮ ಅಸ್ತ್ರವನ್ನಾಗಿ ನಾವು ಬಳಸುವದನ್ನು ಕಲಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಎಸ್‍ಆರ್‍ಟಿಸಿ ಬಸ್ ದರ ಹೆಚ್ಚಳ
ಬೆಂಗಳೂರು, ಸೆ. 4: ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಕೆಎಸ್‍ಆರ್‍ಟಿಸಿಯ ನಾಲ್ಕು ವಿಭಾಗಗಳಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರೂಪಾಯಿ ಮೌಲ್ಯ ಕುಸಿತಗೊಂಡು ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗಿ ಏರುತ್ತಿರುವ ಹಿನ್ನೆಲೆ ಶೇ. 18 ರಷ್ಟು ದರ ಏರಿಕೆ ಮಾಡಬೇಕೆಂಬ ಶಿಫಾರಸು ಇದೆ. ಅದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವದಾಗಿ ಹೇಳಿದರು. ಪೆಟ್ರೋಲ್, ಡೀಸೆಲ್ ದರವೂ ಏರುತ್ತಿದೆ. ಸಾರಿಗೆ ಇಲಾಖೆಯೂ ನಷ್ಟದಲ್ಲಿದೆ. ಖಾಸಗಿ ಬಸ್‍ಗಳು ದರ ಏರಿಸುತ್ತಲೇ ಇವೆ. ರಾಜ್ಯದ ಎಲ್ಲೆಡೆ ಸರ್ಕಾರಿ ಬಸ್ ಸೇವೆ ಒದಗಿಸುತ್ತೇವೆ. ಈ ಮೂಲಕ ಖಾಸಗಿಯವರಿಗೆ ಕಡಿವಾಣ ಹಾಕಲಾಗುವದು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ 21 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ. ನಾವು ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಮಾಡಬೇಕಾಗಿರುವದು ಅನಿವಾರ್ಯ ಎಂದು ಹೇಳಿದರು. ಇಂದಿನ ಪೆಟ್ರೋಲ್ ದರದಲ್ಲಿ 39 ಪೈಸೆ ಹಾಗೂ ಡೀಸೆಲ್ ದರದಲ್ಲಿ 32 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 82 ರೂಪಾಯಿ, ಒಂದು ಲೀಟರ್ ಡೀಸೆಲ್ ಬೆಲೆ 75 ರೂಪಾಯಿ ಏರಿಕೆಯಾಗಿದೆ.
ವಾಗ್ಮೋರೆಯೇ ಅಪರಾಧಿ ಎಂದ ಎಫ್‍ಎಸ್‍ಎಲ್
ಬೆಂಗಳೂರು, ಸೆ. 4: ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದು ಪರಶುರಾಮ್ ವಾಗ್ಮೋರೆಯೇ ಎಂಬದನ್ನು ಎಫ್‍ಎಸ್‍ಎಲ್ ವರದಿ ದೃಢಪಡಿಸಿದೆ. ಗೌರಿ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಘಟನಾ ಸ್ಥಳದಲ್ಲಿ ದೊರಕಿದ್ದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಘಟನೆಯ ಮರುಸೃಷ್ಟಿಯ ವೀಡಿಯೋಗಳನ್ನು ಎಫ್‍ಎಸ್‍ಎಲ್ ವರದಿಗೆ ಕಳುಹಿಸಿದ್ದರು. ಎಲ್ಲವನ್ನು ಪರಿಶೀಲನೆ ನಡೆಸಿರುವ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರರು ವಾಗ್ಮೋರೆಯೇ ಗುಂಡಿಟ್ಟು ಹತ್ಯೆ ಮಾಡಿದ್ದಾನೆಂಬುದನ್ನು ದೃಢಪಡಿಸಿದೆ ಎಂದು ತಿಳಿದುಬಂದಿದೆ. ಗೌರಿ ಅವರನ್ನು ಹತ್ಯೆ ಮಾಡಿದ್ದನ್ನು ಸ್ವತಃ ವಾಗ್ಮೋರೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಆದರೆ, ಎಸ್‍ಐಟಿ ವಸ್ತು ಸಾಕ್ಷಿಗಾಗಿ ಎಫ್‍ಎಸ್‍ಎಲ್ ವರದಿಯ ಮೊರೆ ಹೋಗಿತ್ತು. ಗೌರಿ ಹತ್ಯೆಯಾದ ಸಂದರ್ಭದಲ್ಲಿ ಸ್ಥಳದಲ್ಲಿ ಮೂವರು ಕಟ್ಟಡ ನಿರ್ಮಾಣದ ಕಾರ್ಮಿಕರು ಹಾಗೂ ರಾಯಚೂರು ಮೂಲದ ಓರ್ವ ಪತ್ರಿಕೋದ್ಯಮ ವಿದ್ಯಾರ್ಥಿ ಇರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿತ್ತು. ಈ ವೇಳೆ ಶಸ್ತ್ರಾಸ್ತ್ರಗಳನ್ನು ಹಿಡಿದು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಹಂತಕರು, ಗೌರಿ ಅವರಿಗಾಗಿ ಕಾದು ರಸ್ತೆಯಲ್ಲಿ ನಿಂತಿದ್ದರು. ಹಂತರು ರಸ್ತೆಯಲ್ಲಿದ್ದ ಜನರತ್ತ ತಿರುಗಿ ನೋಡಿದ್ದರು. ಈ ವೇಳೆ ಪ್ರತ್ಯದರ್ಶಿಗಳು ಹಂತಕರನ್ನು ಹೆಲ್ಮೆಟ್ ಇಲ್ಲದೆಯೇ ನೋಡಿದ್ದರು.
ಹಿಂದೂ-ಮುಸ್ಲಿಮರಿಂದ ಕೃಷ್ಣ ಜನ್ಮಾಷ್ಟಮಿ
ಉತ್ತರಪ್ರದೇಶ, ಸೆ. 4: ಹಿಂದೂ-ಮುಸ್ಲಿಂ ಸಮುದಾಯ ಒಟ್ಟಾಗಿ ಸೇರಿ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಕಳೆದ 15 ವರ್ಷಗಳಿಂದ 2 ಸಮುದಾಯದವರು ಸೇರಿ ಒಟ್ಟಾಗಿ ಜನ್ಮಾಷ್ಟಮಿ ಆಚರಿಸುತ್ತಿದ್ದಾರೆ. ನಾವು ಜನ್ಮಾಷ್ಟಮಿಗಾಗಿ ಕೆಲವು ತಿಂಗಳ ಹಿಂದಿನಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಅಲಂಕಾರ ಸೇರಿದಂತೆ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುತ್ತೇವೆ. ಹಬ್ಬಗಳನ್ನು ಆಚರಿಸಲು ಯಾವದೇ ಧರ್ಮ ಜಾತಿಯ ಬೇಧವಿಲ್ಲ, ನಾವು ಕಳೆದ 15 ವರ್ಷದಿಂದ ಒಗ್ಗಟ್ಟಾಗಿ ಆಚರಿಸುತ್ತಿದ್ದು, ಮುಂದೆಯ ನಮ್ಮ ಮಕ್ಕಳು ಇದನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಶಾದಿಲ್ ಖುರೇಷಿ ಹೇಳಿದ್ದಾರೆ. ಹರಿಶರಣ್ ಶುಕ್ಲಾ ಎಂಬವರು ಜನ್ಮಾಷ್ಟಮಿ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಮೂಲಕ ಶಾಂತಿ ಸಂದೇಶ ಸಾರಬೇಕು, ಸಮಾಜದಲ್ಲಿ ಪ್ರತಿಯೊಬ್ಬರು ಅಣ್ಣ ತಮ್ಮಂದಿರ ರೀತಿ ಬಾಳಬೇಕು ಎಂದು ಹೇಳಿದ್ದಾರೆ.