ಸೋಮವಾರಪೇಟೆ, ಸೆ. 4: ಇಲ್ಲಿನ ಸಾರ್ವಜನಿಕ ಗೌರಿ-ಗಣೇಶೋತ್ಸವ ಸಮಿತಿಯಿಂದ ಪ್ರಸಕ್ತ ಸಾಲಿನಲ್ಲಿ ಸರಳವಾಗಿ ಉತ್ಸವವನ್ನು ಆಚರಿಸುವಂತೆ ತೀರ್ಮಾನಿಸ ಲಾಯಿತು. ಸಮಿತಿಯ ಅಧ್ಯಕ್ಷ ಚಂದನ ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ತಾಲೂಕಿನಲ್ಲಿ ನಡೆದಿರುವ ಮಳೆಯ ಅನಾಹುತಗಳಿಂದ ಜನತೆ ಸಂಕಷ್ಟದಲ್ಲಿದ್ದು, ಈ ಮಧ್ಯೆ ಅದ್ಧೂರಿಯ ಆಚರಣೆ ಬೇಡವೆಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ತಾ. 12 ರಂದು ಗೌರಿ ಹಾಗೂ ತಾ. 13 ರಂದು ಗಣಪತಿಯ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ, ಎಂದಿನಂತೆ ಪೂಜಾ ವಿಧಿ-ವಿಧಾನಗಳನ್ನು ನಡೆಸಿ, ಭಜನೆಯಂತಹ ಸರಳ ಕಾರ್ಯಕ್ರಮವನ್ನು ಆಯೋಜಿಸುವದು. ತಾ. 15ರ ಶನಿವಾರ ವಾದ್ಯಗೋಷ್ಠಿಯೊಂದಿಗೆ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಿ, ಆನೆಕೆರೆಯಲ್ಲಿ ವಿಸರ್ಜಿಸುವಂತೆ ನಿರ್ಧರಿಸಲಾಯಿತು. ಕಳೆದ ಸಾಲಿನ ಉತ್ಸವ ಸಮಿತಿಯ ಅಧ್ಯಕ್ಷ ಚಂದನ ಸುಬ್ರಮಣಿ, ಗೌರವಾಧ್ಯಕ್ಷ ಸುರೇಶ್ ಚಕ್ರವರ್ತಿ, ಉಪಾಧ್ಯಕ್ಷರಾಗಿ ಉಮೇಶ್, ಕಾರ್ಯದರ್ಶಿಯಾಗಿ ದರ್ಶನ್ ಜೋಯಪ್ಪ, ಸಹಕಾರ್ಯದರ್ಶಿಯಾಗಿ ವೇಣು ಬೀರೇಬೆಟ್ಟ, ಖಜಾಂಚಿಯಾಗಿ ರಂಗಸ್ವಾಮಿ ಅವರುಗಳನ್ನೇ ಸಮಿತಿಯಲ್ಲಿ ಮುಂದುವರೆಸಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು.