ಸಿದ್ದಾಪುರ, ಸೆ. 4: ಮಹಾ ಮಳೆಗೆ ಸಿಲುಕಿ ಹಾನಿಗೊಳಗಾದ ಹಾಗೂ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ನದಿ ದಡದ ನಿವಾಸಿಗಳಿಗೆ ಅಮ್ಮತ್ತಿ ಹೋಬಳಿ ಕಂದಾಯ ಇಲಾಖಾಧಿಕಾರಿ ಗಳು ತುರ್ತು ಪರಿಹಾರವನ್ನು ನೀಡಿದ್ದಾರೆ.
ಈ ಬಾರಿಯ ಮಹಾ ಮಳೆಗೆ ಕಾವೇರಿ ನದಿಯು ಅಪಾಯ ಮಟ್ಟದಲ್ಲಿ ಹರಿದು ಪ್ರವಾಹ ನೀರು ನದಿ ದಡದ ನಿವಾಸಿಗಳ ಮನೆಗಳಿಗೆ ನುಗ್ಗಿ ಮನೆಗಳು ಸಂಪೂರ್ಣ ಜಲಾವೃತಗೊಂಡಿತ್ತು. ಅಮ್ಮತ್ತಿ ಹೋಬಳಿ ವ್ಯಾಪ್ತಿಗೆ ಒಳಪಡುವ ಕರಡಿಗೋಡು, ಗುಹ್ಯ, ಕೊಂಡಂಗೇರಿ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳು ಶಿಥಿಲಗೊಂಡು ಹಾನಿಗೊಳ ಗಾಗಿತ್ತು. ಪ್ರವಾಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಸ್ಥರನ್ನು ಕಂದಾಯ ಇಲಾಖಾಧಿಕಾರಿಗಳು ತೆಪ್ಪ ಹಾಗೂ ಬೋಟ್ಗಳನ್ನು ಬಳಸಿಕೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಸ್ಥಳೀಯ ಸರಕಾರಿ ಶಾಲೆಗಳಲ್ಲಿ ಹಾಗೂ ಸಮುದಾಯ ಭವನಗಳಲ್ಲಿ ಸಂತ್ರಸ್ತರಿಗೆ ಪರಹಾರ ಕೇಂದ್ರಗಳನ್ನು ತೆರೆಯಲಾಯಿತು. ಅಲ್ಲಿ ಅಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಕಂದಾಯ ಇಲಾಖಾ ವತಿಯಿಂದ ಒದಗಿಸಿಕೊಡಲಾಯಿತು. ಅಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ಕೊಂಡಂಗೇರಿ ನದಿ ದಡದ ನಿವಾಸಿಗಳಿಗೆ ಯಾವದೇ ಪ್ರಾಣಾಪಾಯ ಆಗದ ರೀತಿಯಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜುರವರ ಮಾರ್ಗ ದರ್ಶನದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು ನೇತೃತ್ವದಲ್ಲಿ ಗ್ರಾಮ ಲೆಕ್ಕಿಗರಾದ ಅನಿಲ್ ಕುಮಾರ್, ಮಂಜುನಾಥ್ ಸಿಬ್ಬಂದಿಗಳು ಹಗಲಿರುಳು ಶ್ರಮಿಸಿ ನದಿ ದಡದವರನ್ನು ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮಹಾಮಳೆಗೆ ಸಿಲುಕಿ ಹಾನಿಗೊಳಗಾದ ಮಂದಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಕರಡಿಗೋಡು ಗ್ರಾಮದ 102 ಕುಟುಂಬಗಳಿಗೆ ಹಾಗೂ ಕೊಂಡಂಗೇರಿ ಗ್ರಾಮದ 34 ಮಂದಿಗೆ ಸರ್ಕಾರದ ವತಿಯಿಂದ ತುರ್ತು ಪರಿಹಾರವಾಗಿ ರೂ.3800 ರ ಚೆಕ್ ಗಳನ್ನು ಕಂದಾಯ ಪರಿವೀಕ್ಷಕ ವಿನು ಗ್ರಾಮ ಲೆಕ್ಕಿಗರಾದ ಮಂಜುನಾಥ್, ಅನಿಲ್ ಕುಮಾರ್ ರವರು ಸಂತ್ರಸ್ತರಿಗೆ ವಿತರಿಸಿದರು. ಅಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಹಾನಿಗೊಳ ಗಾದ ಮನೆಗಳನ್ನು ಪರಿಶೀಲಿಸಿ ಅಂದಾಜು ನಷ್ಟದ ಪಟ್ಟಿಯನ್ನು ತಯಾರಿಸಿದ್ದಾರೆ.
ಈಗಾಗಲೇ ಕರಡಿಗೋಡಿನ ನದಿ ದಡದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಿರ್ಧರಿಸಿದ್ದಾರೆ. ಆದರೆ ಗುಹ್ಯ ಕೂಡುಗದ್ದೆ ಭಾಗದಲ್ಲಿ ಹಾಗೂ ಕೊಂಡಂಗೇರಿ ಭಾಗದಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ಕುಂಬಾರಗುಂಡಿ ಭಾಗದ ನದಿ ದಡದಲ್ಲಿ ನೂರಾರು ಮನೆಗಳು ಅಪಾಯದಲ್ಲಿದೆ. ಇವರುಗಳು ಕೂಡ ಸೂಕ್ತ ನಿರ್ಧಾರ ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಚಿಂತಿಸಬೇಕಾಗಿದೆ. ಜಿಲ್ಲಾಡಳಿತ ಕೂಡ ನದಿ ದಡದ ನಿವಾಸಿಗಳಿಗೆ ಸುರಕ್ಷಿತ ಸ್ಥಳದಲ್ಲಿ ಶಾಶ್ವತ ಸೂರುಗಳನ್ನು ಒದಗಿಸಿ ಕೊಡಬೇಕೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಎ.ಎನ್. ವಾಸು