ಕುಶಾಲನಗರ, ಸೆ. 4: ಇತ್ತೀಚೆಗೆ ನಡೆದ ನದಿ ಪ್ರವಾಹದ ಹಿನ್ನೀರಿನಲ್ಲಿ ಮುಳುಗಡೆಯಾದ ಕುಶಾಲನಗರ ಪಟ್ಟಣ ಸಮೀಪದ ಗಡಿಭಾಗ ಕೊಪ್ಪ ಗ್ರಾಮದ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ದೂರಿದ್ದಾರೆ.

ಕಾವೇರಿ ತುಂಬಿ ಹರಿಯುವ ಸಂದರ್ಭ ಏಕಾಏಕಿ ಹಾರಂಗಿ ಅಣೆಕಟ್ಟೆಯಿಂದ ನೀರನ್ನು ನದಿಗೆ ಹರಿಸಿದ ಸಂದರ್ಭ ಕೊಪ್ಪ ಆವರ್ತಿ, ಗಿರಗೂರು ಮುಂತಾದ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ 70 ಕ್ಕೂ ಅಧಿಕ ಮನೆಗಳು ನೀರಿನಿಂದ ಆವೃತಗೊಂಡು ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿತ್ತು.

ಈ ವ್ಯಾಪ್ತಿಯಲ್ಲಿ ಬೆಳೆದಿದ್ದ ಕೃಷಿ ಫಸಲು ಸಂಪೂರ್ಣ ನಾಶಗೊಂಡಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕೊಪ್ಪ ವ್ಯಾಪ್ತಿಯಲ್ಲಿ ನೀರಿನಿಂದ 5 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು ಹಲವು ಮನೆಗಳಲ್ಲಿ ಮನೆಯ ಸಾಮಗ್ರಿಗಳು ನಾಶಗೊಳ್ಳುವದರೊಂದಿಗೆ ಮನೆಯ ಗೋಡೆಗಳಲ್ಲಿ ಬಿರುಕು ಉಂಟಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ನೀರಿನಿಂದ ಮುಳುಗಿರುವ ಮನೆಗಳ ಸಂತ್ರಸ್ತರಿಗೆ ಪರಿಹಾರ ಧನ ನೀಡಲಾಗಿದ್ದರೂ ಕೊಪ್ಪ ಗ್ರಾಮದ ಮುಳುಗಡೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ತಲಪಿಸುವಲ್ಲಿ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನದಿಯಿಂದ 1 ಕಿ.ಮೀ. ದೂರದಲ್ಲಿದ್ದ ಮನೆಗಳಿಗೆ ನೀರು ಸೇರಲು ಹಾಗೂ ನೂರಾರು ಎಕರೆ ಭೂಮಿಯ ಕೃಷಿ ನಾಶಗೊಳ್ಳಲು ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಆರೋಪಿಸಿರುವ ನಿವಾಸಿಗಳು ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಷ್ಟಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಬೇಕು. ಅಣೆಕಟ್ಟೆಯಿಂದ ಏಕಾಏಕಿ ಭಾರೀ ಪ್ರಮಾಣದ ನೀರನ್ನು ಬಿಡುವ ಸಂದರ್ಭ ಮುನ್ಸೂಚನೆ ನೀಡದಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹಾರಂಗಿ ಯೋಜನಾ ವೃತ್ತದ ಅಧಿಕಾರಿಗಳ ಕಚೇರಿ ಮುಂಭಾಗ ಸಂತ್ರಸ್ತರು ವಿವಿಧ ಸಂಘ-ಸಂಸ್ಥೆಗಳ ಸಹಾಯದೊಂದಿಗೆ ಪ್ರತಿಭಟನೆ ನಡೆಸುವದಾಗಿ ಸ್ಥಳೀಯ ಸಂತ್ರಸ್ತರ ವೇದಿಕೆ ಪ್ರಮುಖರಾದ ಕೆ.ಎಸ್. ಸುರೇಶ್, ಕೆ.ಪಿ. ಕುಮಾರ್, ಮಣಿಕಂಠ ಮತ್ತಿತರರು ಎಚ್ಚರಿಸಿದ್ದಾರೆ.